ಪಣಜಿ;ಮಾಜಿ ಪತ್ರಕರ್ತ ತರುಣ್ ತೇಜ್ ಪಾಲ್ ಪ್ರಕರಣದ ತೀರ್ಪು ಹಿನ್ನಡೆಯಾಗಿದ್ದು ಮತ್ತು ಇದೊಂದು ಐದನೇ ಶತಮಾನಕ್ಕೆ ಸೂಕ್ತವಾದ ತೀರ್ಪು ಎಂದು ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ ಪೀಠಕ್ಕೆ ಬುಧವಾರ(ಅಕ್ಟೋಬರ್ 27) ತಿಳಿಸಿದೆ.
ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ 2013ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ತೇಜ್ ಪಾಲ್ ಅನ್ನು ಗೋವಾ ವಿಚಾರಣಾಧೀನ ಕೋರ್ಟ್ ಖುಲಾಸೆಗೊಳಿಸಿತ್ತು.
ತೇಜ್ ಪಾಲ್ ಖುಲಾಸೆಯನ್ನು ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಜಸ್ಟೀಸ್ ರೇವತಿ ಮೋಹಿತೆ ಡೇರೆ ಹಾಗೂ ಜಸ್ಟೀಸ್ ಎಂಎಸ್ ಜಾವಾಲ್ಕಾರ್ ನವೆಂಬರ್ 16ಕ್ಕೆ ಮುಂದೂಡಿದರು.
ಗೋವಾ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದು, ತರುಣ್ ತೇಜ್ ಪಾಲ್ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಹಿನ್ನಡೆಯಾಗಿದ್ದು ಮತ್ತು ಇದೊಂದು ಐದನೇ ಶತಮಾನಕ್ಕೆ ಸೂಕ್ತವಾದದ್ದಾಗಿದೆ ಎಂದು ತಿಳಿಸಿದ್ದರು.
ಕೇವಲ ಇದೊಂದೇ ಪ್ರಕರಣದಲ್ಲಿ ಹೀಗಾಗಿಲ್ಲ, ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿಯೂ ಆಗಿದೆ. ನಾವು ವಕೀಲರಿಗೆ ಸಾಕ್ಷ್ಯಾಧಾರಗಳನ್ನು ಓದಲು ಅವಕಾಶ ನೀಡುತ್ತಿಲ್ಲ ಎಂದು ಜಸ್ಟೀಸ್ ಡೇರೆ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.