ಕಳೆದ ವರ್ಷ ಭಾರತ ಸೇರಿದಂತೆ ಇಡೀ ಜಗತ್ತನ್ನೇ ಕೋವಿಡ್ ಸೋಂಕು ಆವರಿಸಿಕೊಂಡು ಲಾಕ್ ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಮಂದಿ ವಿವಿಧ ಬಗೆಗೆ ಅಡುಗೆ, ಭಕ್ಷ್ಯ ತಯಾರಿಕೆಯ ಕುರಿತ ಯೂಟ್ಯೂಬ್ ಚಾನೆಲ್ ಮೊರೆ ಹೋಗಿದ್ದನ್ನು ಗಮನಿಸಿದ್ದೇವೆ. ಆದರೆ ತರ್ಲಾ ದಲಾಲ್ ಎಂಬ ಈ ಸೆಲೆಬ್ರಿಟಿಯ ಯಶೋಗಾಥೆ ಬಗ್ಗೆ ನೀವು ತಿಳಿದುಕೊಳ್ಳಬೇಕು. ಯಾಕೆಂದರೆ ಇವರು ಭಾರತದ ಮೊದಲ ಸೆಲೆಬ್ರಿಟಿ ಕುಕ್!
ಭಾರತೀಯ ಮಹಿಳಾ ಉದ್ಯಮಿಗಳ ಯಶಸ್ಸಿನ ಕಥಾನಕಗಳನ್ನು ತಿಳಿದುಕೊಳ್ಳುವ ಮೂಲಕ ಅದು ನಮ್ಮನ್ನು ಉತ್ತೇಜಿಸುತ್ತದೆ. ಅಲ್ಲದೇ ನಮಗೆಲ್ಲರಿಗೂ ಅವರ ಯಶಸ್ಸಿನ ಹಾದಿ ಅನುಕರಣೀಯವಾಗಬಲ್ಲದು. ತಮ್ಮದೇ ಬದುಕಿನ ಹಾದಿಯಲ್ಲಿ ತಾವೇ ಉದ್ಯಮದ ರೂವಾರಿಯಾಗಿ ನಂತರ ಸೆಲೆಬ್ರಿಟಿಯಾಗಿ ಜನಪ್ರಿಯರಾಗುತ್ತಾರೆ.
ಯಾರೀಕೆ ತರ್ಲಾ ದಲಾಲ್:ತರ್ಲಾ ದಲಾಲ್ ಅದ್ಭುತ ಪಾಕ ತಜ್ಞೆ, ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದು, ಅತೀ ಹೆಚ್ಚು ಮಾರಾಟ ಕಂಡ ಅಡುಗೆ ಪುಸ್ತಕಗಳ ಲೇಖಕಿ. 1936ರ ಜೂನ್ 3ರಂದು ಅಂದಿನ ಬ್ರಿಟಿಷ್ ಇಂಡಿಯಾದ ಬಾಂಬೆ ಪ್ರೆಸಿಡೆನ್ಸಿಯ ಪುಣೆಯಲ್ಲಿ ಜನಿಸಿದ್ದರು. 1960ರಲ್ಲಿ ನಳಿನ್ ದಲಾಲ್ ಅವರನ್ನು ವಿವಾಹವಾದ ಮೇಲೆ ಮುಂಬಯಿಯಲ್ಲಿ ವಾಸ್ತವ್ಯ ಹೂಡಿದ್ದರು.
1966ರಲ್ಲಿ ಮುಂಬಯಿಯ ತಮ್ಮ ನಿವಾಸದಲ್ಲಿಯೇ ಅಡುಗೆ ತರಗತಿ ನಡೆಸುತ್ತಿದ್ದರು. 1974ರಲ್ಲಿ ಇವರ ಸಸ್ಯಹಾರಿ ಅಡುಗೆಯ ನಲಿವು ಎಂಬ ಮೊದಲ ಪುಸ್ತಕ ಪ್ರಕಟವಾಗಿತ್ತು. ಆ ಪುಸ್ತಕ 15 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿದ್ದು, ಬಳಿಕ ದಲಾಲ್ ಮನೆಮಾತಾದರು. ಅದರಲ್ಲಿಯೂ ದಲಾಲ್ ಅವರು ಸಸ್ಯಹಾರಿ ತಿಂಡಿಗಳ ಪಾಕ ಪ್ರಿಯರಿಗೆ ಅಚ್ಚುಮೆಚ್ಚು.
ಸುಮಾರು ನೂರಕ್ಕೂ ಅಧಿಕ ಅಡುಗೆ ಪುಸ್ತಕಗಳನ್ನು ಬರೆದಿದ್ದ ಹೆಗ್ಗಳಿಕೆ ತರ್ಲಾ ದಲಾಲ್ ಅವರದ್ದು, ಪಾಕ ಪ್ರವೀಣೆಯಾಗಿದ್ದ ದಲಾಲ್ 17,000 ವೈವಿಧ್ಯತೆಯ ಭಕ್ಷ್ಯಗಳನ್ನು ಮಾಡುತ್ತಿದ್ದರು. ದಲಾಲ್ ಅವರ ಅಡುಗೆ ಕೃತಿಗಳಿಗೆ ಬಹು ಬೇಡಿಕೆ ಇದ್ದ ಕಾರಣ ಒಟ್ಟಾರೆ 30ಲಕ್ಷಕ್ಕೂ ಹೆಚ್ಚು ಪ್ರತಿಗಳು ಅಡುಗೆ ಪ್ರಿಯರ ಮನೆ ತಲುಪಿದೆ. ಅಲ್ಲದೇ ಮರಾಠಿ, ಗುಜರಾತಿ, ಡಚ್, ರಷ್ಯನ್, ಹಿಂದಿ, ಬೆಂಗಾಲಿ ಭಾಷೆಗಳಿಗೂ ಅವರ ಪುಸ್ತಕ ತರ್ಜುಮೆಗೊಂಡಿದೆ.ಮರಾಠಿ ಅಲ್ಲದೇ ವಿದೇಶಿ ಪಾಕ ಪದ್ಧತಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಜನಪ್ರಿಯಗೊಳಿಸಿದ ಕೀರ್ತಿ ತರ್ಲಾ ದಲಾಲ್ ಅವರಿಗೆ ಸಲ್ಲುತ್ತದೆ. ಅವರು ವಿದೇಶಗಳಿಂದ ಸಾಕಷ್ಟು ಸಸ್ಯಹಾರಿ ಮತ್ತು ಮಾಂಸಹಾರಿ ಪಾಕ ಪದ್ಧತಿ ಬಗ್ಗೆ ಪುಸ್ತಕ ಬರೆದಿದ್ದರು.
ಕಿರುತೆರೆಯಲ್ಲಿ ತರ್ಲಾ ದಲಾಲ್ ಶೋ, ಕುಕ್ ಇಟ್ ಅಫ್ ವಿತ್ ತರ್ಲಾ ದಲಾಲ್ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾಗಿದ್ದವು. ದಲಾಲ್ ಅವರ ಅಡುಗೆ ಶೋ ಭಾರತ ಮಾತ್ರವಲ್ಲ ಬ್ರಿಟನ್, ಅರಬ್, ಅಮೆರಿಕದಲ್ಲೂ ಬೇಡಿಕೆ ಗಳಿಸಿತ್ತು. ಭಾರತೀಯ ಅಡುಗೆ ವೆಬ್ ಸೈಟ್ ನಿರ್ವಹಿಸುತ್ತಿದ್ದ ಅವರು ಅಡುಗೆ ಕುರಿತ
ನಿಯತಕಾಲಿಕೆಯನ್ನೂ ಪ್ರಕಟಿಸುತ್ತಿದ್ದರು. ದಲಾಲ್ ದಂಪತಿಗೆ ಮೂವರು ಮಕ್ಕಳು. ಸಂಜಯ್, ದೀಪಕ್ ಮತ್ತು ರೇಣು. 2005ರಲ್ಲಿ ನಳಿನ್ ದಲಾಲ್ ತೀರಿಕೊಂಡಿದ್ದು, 2013ರಲ್ಲಿ ತರ್ಲಾ ದಲಾಲ್ ಅವರು ಮುಂಬೈನ ನಿವಾಸದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದರು. ಆದರೆ ಅವರ ಅಡುಗೆ ಶೋ, ಪಾಕ ತರಬೇತಿ ಇಂದಿಗೂ ಲಕ್ಷಾಂತರ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
*ನಾಗೇಂದ್ರ ತ್ರಾಸಿ