Advertisement

ಕಾಡಾನೆ ದಾಳಿ: ಬಾಳೆ ಬೆಳೆ ನಾಶ

11:51 AM Jun 16, 2019 | Naveen |

ತರೀಕೆರೆ: ತಾಲೂಕಿನ ಲಿಂಗದಹಳ್ಳಿ ಹೋಬಳಿ ತಣಿಗೆಬೈಲು, ಹುಣಸೆಬೈಲು, ಜೈಪುರ, ತಿಮ್ಮನಬೈಲು ಗ್ರಾಮಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ರೈತರ ಜಮೀನಿನಲ್ಲಿ ಬೆಳೆದು ನಿಂತಿರುವ ಲಕ್ಷಾಂತರ ರೂ.ಮೌಲ್ಯದ ಫಸಲು ನಾಶ ಮಾಡುತ್ತಿವೆ.

Advertisement

ಕಾಡಾನೆ ಜೊತೆಗೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿರುವುದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳಿಂದ ಉಂಟಾಗುತ್ತಿರುವ ತೊಂದರೆ ನಿವಾರಿಸಿ ರಕ್ಷಣೆ ಒದಗಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಲಕ್ಷಾಂತರ ರೂ. ಬೆಳೆ ನಾಶ: ಈ ಭಾಗದಲ್ಲಿ ರೈತರು ಭತ್ತ, ಜೋಳ, ರಾಗಿ, ಆಲೂಗಡ್ಡೆ ಮತ್ತು ಬಟಾಣಿ ಬೆಳೆಯುತ್ತಾರೆ. ಕೆಲವರು ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಜಮೀನುಗಳಲ್ಲಿ ಬಾಳೆ, ಅಡಕೆ, ತೆಂಗು, ಮಾವು, ಸಪೋಟ, ಹಲಸು, ಮೆಣಸು ಸಹಿತ ಅನೇಕ ತೋಟದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲ ದಿನಗಳಿಂದ ರೈತರು ಬೆಳೆದ ತೋಟಗಳಿಗೆ ಕಾಡಾನೆಗಳು ರಾತ್ರಿ ವೇಳೆ ಪ್ರತಿನಿತ್ಯ ದಾಳಿ ಮಾಡಿ, ತೋಟದಲ್ಲಿ ಬೆಳೆದು ಫಸಲಿಗೆ ಬಂದಿರುವ ಬಾಳೆ, ತೆಂಗು, ಅಡಕೆ, ಮಾವು, ಹಲಸು ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ.

ರೈತರ ಅಳಲು: ಕಾಡಾನೆ ಉಪಟಳದಿಂದಾಗಿ ತಾವು ಸಾಲ ಮಾಡಿ ಬೆಳೆದ ಹಾಗೂ ಕಟಾವಿಗೆ ಬಂದ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳು ನೆಲದ ಪಾಲಾಗಿವೆ ಎಂದು ರೈತರಾದ ಮಲ್ಲೇನಹಳ್ಳಿ ರಾಮಪ್ಪ ಹಾಗೂ ಜೈಪುರ ಗ್ರಾಮದ ಪಾಪಣ್ಣ ಮುಂತಾದವರು ಅಳಲು ತೋಡಿಕೊಂಡಿದ್ದಾರೆ.

ಸಾಲ ತೀರಿಸುವುದಾದರೂ ಹೇಗೆ?: ಲಿಂಗದಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಮಲ್ಲೇನಹಳ್ಳಿ ರಾಮಪ್ಪ ಮಾತನಾಡಿ, ಸಹಕಾರ ಸಂಘದಲ್ಲಿ ಸಾಲ ಪಡೆದು ಒಂದು ವರ್ಷದ ಹಿಂದೆ ತಿಗಡ ಸರ್ವೆ ನಂಬರ್‌ 85 ಮತ್ತು 86ರಲ್ಲಿರುವ 6.20ಎಕರೆ ಜಮೀನಿನಲ್ಲಿ ಪುಟ್ಟ ಬಾಳೆ ಸಸಿಗಳನ್ನು ನೆಟ್ಟು ಬೆಳೆಸಿದ್ದೆವು. ಈ ಬೆಳೆ ಮುಂದಿನ ಒಂದೆರಡು ತಿಂಗಳಲ್ಲಿ ತಮ್ಮ ಕೈಸೇರಿದ ನಂತರ, ತಾವು ಸ್ವ ಸಹಾಯ ಸಂಘದಿಂದ ಪಡೆದಿರುವ ಸಾಲದ ಹಣವನ್ನು ಮಾರುಪಾವತಿ ಮಾಡಲು ತೀರ್ಮಾನಿಸಿದ್ದೆವು. ಆದರೆ, ಈಗ ಕಾಡಾನೆಗಳ ದಾಳಿಯಿಂದಾಗಿ ಸಂಪೂರ್ಣ ಬಾಳೆ ಬೆಳೆ ನಾಶವಾಗಿದೆ. ಸಾಲ ತೀರಿಸುವುದು ಹೇಗೆ ಎಂಬ ಸಮಸ್ಯೆ ಸುಳಿಗೆ ಸಿಲುಕಿದ್ದೇವೆ ಎಂದು ನೊಂದು ಹೇಳಿದರು.

Advertisement

ಲಿಂಗದಹಳ್ಳಿ ಹೋಬಳಿಯಲ್ಲಿ ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದ ಕಾರಣ ಟ್ಯಾಂಕರ್‌ ಮೂಲಕ ನೀರು ತಂದು ಬಾಳೆ ಬೆಳೆ ಬೆಳೆಯುತ್ತಿದ್ದೇವೆ. ಲಕ್ಷಾಂತರ ರೂ. ಬೆಲೆ ಬಾಳುವ ಬಾಳೆ ಗೊನೆಗಳು ನೆಲದ ಪಾಲಾಗಿದ್ದು, ವ್ಯವಸಾಯ ಸೇವಾ ಸಹಕಾರ ಸಂಘದಿಂದ ಹಣ ತಂದು ಬೆಳೆದ ಬೆಳೆ ಕೈ ತಪ್ಪುತ್ತಿದೆ. ಇದರಿಂದ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಾಡಾನೆ ಇನ್ನಿತರ ವನ್ಯ ಪ್ರಾಣಿಗಳ ಉಪಟಳದ ಬಗ್ಗೆ ತಣಿಗೆಬೈಲು ಅರಣ್ಯಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ.
•ರಾಮಪ್ಪ, ಅಧ್ಯಕ್ಷರು,
ವಿಎಸ್‌ಎಸ್‌ಎನ್‌, ಲಿಂಗದಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next