ತರೀಕೆರೆ: ಅಭಿವೃದ್ಧಿ ನೆಪದಲ್ಲಿ ಪರಿಸರದ ನಾಶವಾಗುತ್ತಿದ್ದು, ಮುಂದಿನ ಪೀಳಿಗೆಗೆ ಪರಿಸರ ಸಂಪನ್ಮೂಲ ಉಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ಇ-ತ್ಯಾಜ್ಯಗಳನ್ನು ಸಂಸ್ಕರಣಾ ಘಟಕಗಳಿಗೆ ತಲುಪಿಸುವ ಮೂಲಕ ಪರಿಸರ ಹಾನಿ ನಿಯಂತ್ರಣಗೊಳಿಸುವ ಅಗತ್ಯವಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್. ರಾಮಮೂರ್ತಿ ನುಡಿದರು.
ಬುಧವಾರ ಪಟ್ಟಣದ ಅರಣ್ಯಇಲಾಖೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಹಾಗೂ ಅರಣ್ಯಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರ ದಿನಾಚರಣೆಯಂದು ಕೇವಲ ಗಿಡಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಪೋಷಿಸಿ ಬೆಳಸಬೇಕು. ಮಾಲಿನ್ಯರಹಿತ ವಾತಾವರಣ ನಿರ್ಮಾಣವನ್ನು ಮಾಡಬೇಕಿದೆ, ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡದೆ, ಪರಿಸರವನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು.
ತಹಸೀಲ್ದಾರ್ ಎನ್.ಟಿ. ಧರ್ಮೋಜಿರಾವ್ ಮಾತನಾಡಿ, ಪರಿಸರ ಉತ್ತಮವಾಗಿದ್ದರೆ ಮನಸ್ಸು ಆಹ್ಲಾದಕರವಾಗಿರುತ್ತದೆ. ಪರಿಸರದ ಮಡಿಲಿನಲ್ಲಿ ಬೆಳೆದ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿರುವ ಸಾಕಷ್ಟು ಉದಾಹರಣೆಗಳಿದ್ದು, ಆ ಹಾದಿಯಲ್ಲಿ ಮುಂದಿನ ಪೀಳಿಗೆ ಸಾಗಬೇಕಿದೆ. ನಗರೀಕರಣ, ವಿಜ್ಞಾನ ಬೆಳೆದಂತೆಲ್ಲ ಅನಾನುಕೂಲ ಸೃಷ್ಟಿಯಾಗುತ್ತಿದ್ದು, ಪರಿಸರ ಪ್ರಜ್ಞೆ ಸ್ವಚ್ಛತೆ ಕಾಳಜಿ ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು, ಪರಿಸರದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು. ಎಸಿಎಫ್ ಬಿ.ಎಂ. ರವೀಂದ್ರಕುಮಾರ್ ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮಕ್ಕಳು ಪಟ್ಟಣದ ತಾಲೂಕು ಕಚೇರಿ ಆವರಣದ ಸುತ್ತಮುತ್ತ ಸ್ವಚ್ಛಗೊಳಿಸಿದರು. ತಾಪಂ ಇಒ ವಿಶಾಲಾಕ್ಷಮ್ಮ, ಬಿಇಒ ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಆರ್‌ಎಫ್‌ಒಗಳಾದ ಚರಣ್‌ಕುಮಾರ್, ಚಂದ್ರಶೇಖರ್‌ರೆಡ್ಡಿ, ಮಂಜುನಾಥ್, ರಾಘವೇಂದ್ರ, ಶಿವಕುಮಾರ್, ಅಪರ ಸರ್ಕಾರಿ ಅಭಿಯೋಜಕ ಎಸ್. ಸುರೇಶ್‌ಚಂದ್ರ, ವಕೀಲರ ಸಂಘದ ಅಧ್ಯಕ್ಷ ಟಿ.ಎನ್. ಮಹಾದೇವಸ್ವಾಮಿ ಮತ್ತಿತರರಿದ್ದರು.