ತರೀಕೆರೆ: ಜನವರಿ 19ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 3 ದಿನಗಳ ಕಾಲ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಲಸಿಕೆ ಹಾಕಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ 56233 ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು ಎಂದು ಹೇಳಿದರು.
ದೇಶ ಸಂಪೂರ್ಣವಾಗಿ ಪೋಲಿಯೋ ಮುಕ್ತವಾಗಿದ್ದರು ಸಹ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ಇಲ್ಲಿಯ ತನಕ ಯಾವುದೇ ಮಕ್ಕಳು ಪೋಲಿಯೋ ಪೀಡಿತರಾಗಿಲ್ಲ. ವಿಶ್ವದ 175 ರಾಷ್ಟ್ರಗಳ ಪೈಕಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ರಾಷ್ಟ್ರಗಳಲ್ಲಿ ಮಾತ್ರ ಪೋಲಿಯೋ ಪ್ರಕರಣಗಳು ಕಂಡು ಬಂದಿವೆ ಎಂದರು. 5 ವರ್ಷದ ವರೆಗಿನ 18354 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಮಕ್ಕಳಿಗೆ ಲಸಿಕೆ ಹಾಕುವುದಕ್ಕಾಗಿ 113 ಸ್ಥಿರ ಬೂತ್, 15 ಸಂಚಾರಿ ಬೂತ್‌ಗಳಿದ್ದು, ಗ್ರಾಮೀಣ ಭಾಗದಲ್ಲಿ 10 ಮತ್ತು ಪಟ್ಟಣದಲ್ಲಿ 4 ಟ್ರಾನ್ಸಿಟ್ ಬೂತ್‌ಗಳನ್ನು ತೆರೆದಿದ್ದೇವೆ. ಗ್ರಾಮೀಣ ಭಾಗದಲ್ಲಿ ಮೂರು ದಿನ ಮತ್ತು ಪಟ್ಟಣದಲ್ಲಿ ನಾಲ್ಕು ದಿನ ಲಸಿಕೆ ಹಾಕಲಾಗುವುದು. ತರೀಕೆರೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಿಬ್ಬಂದಿ ಮನೆ ಮನೆಗೆ ಭೇಟಿ ಮಾಡಿ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲಿದ್ದಾರೆ ಎಂದರು.
ಫೆಬ್ರವರಿ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನಲ್ಲಿ 1-19 ವರ್ಷದೂಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸುವ ಗುರಿ ಹೊಂದಲಾಗಿದೆ. 1 ವರ್ಷದ
ಮಕ್ಕಳಿಗೆ ಮಾತ್ರೆಯನ್ನು ಪುಡಿ ಮಾಡಿ ಸಿರಪ್ ತಯಾರಿಸಿ ನೀಡಬೇಕು. ದೊಡ್ಡ ಮಕ್ಕಳಿಗೆ ಮಾತ್ರೆಯನ್ನು ಅಗಿದು ಅಥವಾ ಚೀಪಿ ತಿನ್ನಲು ಹೇಳಬೇಕು. ಅನಾರೋಗ್ಯದಿಂದಿರುವ ಮತ್ತು ಬೇರೆ ಔಷಧಿ ಸೇವನೆ ಮಾಡುತ್ತಿರುವ ಮಕ್ಕಳಿಗೆ ಮಾತ್ರೆ ನೀಡಬಾರದು ಎಂದರು.
ತಹಶೀಲ್ದಾರ್ ಸಿ.ಜಿ.ಗೀತಾ ಮಾತನಾಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಲಿಯೋ ಲಸಿಕೆ ಮತ್ತು ಜಂತುಹುಳು ಮಾತ್ರೆಗಳನ್ನು ಎಲ್ಲರಿಗೂ ತಲುಪಿಸಬೇಕು. ಮಕ್ಕಳಲ್ಲಿ ಬರುವ ಜಂತುಹುಳು ಕೂಡ ಒಂದು ಮಾರಣಾಂತಿಕ ಕಾಯಿಲೆ. ಆದ್ದರಿಂದ ಇದನ್ನು ಕಡೆಗಣಿಸದೆ ಪೋಷಕರು ಮಕ್ಕಳು ಔಷಧಿ ಸೇವಿಸುವಂತೆ ತಿಳಿಹೇಳಬೇಕು. ಕೇವಲ ಆರೋಗ್ಯ ಇಲಾಖೆಯಿಂದ ಎಲ್ಲವೂ ಸಾಧ್ಯವಿಲ್ಲ. ಎಲ್ಲಾ ಅಧಿಕಾರಿಗಳು, ಸಾರ್ವಜನಿಕರ ಸಹಕಾರ ಇದಕ್ಕೆ ಅಗತ್ಯ ಎಂದರು. ಸಭೆಯಲ್ಲಿ ಸಿಡಿಪಿಒ ಜ್ಯೋತಿಲಕ್ಷ್ಮೀ , ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಶಿವಪ್ಪ ಇನ್ನಿತರರು ಭಾಗವಹಿಸಿದ್ದರು.