Advertisement

ಕುವೆಂಪು ವಿವಿ ರಾಜ್ಯದಲ್ಲೇ ಪ್ರಥಮ ಸ್ಥಾನ

01:04 PM Sep 19, 2019 | Naveen |

ತರೀಕೆರೆ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯಿಂದ ಎಲ್ಲಾ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಕುವೆಂಪು ವಿವಿ ರಾಜ್ಯದ ವಿವಿಗಳಲ್ಲಿ ಪ್ರಥಮ ಸ್ಥಾನ ಹಾಗೂ 62 ವಿಶ್ವವಿದ್ಯಾಲಯಗಳಲ್ಲಿ 3ನೇ ಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಕುವೆಂಪು ವಿವಿ ಅನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು ತಮ್ಮ ಗುರಿ ಎಂದು ಕುವೆಂಪು ವಿವಿ ಉಪ ಕುಲಪತಿ ಡಾ| ಬಿ.ಪಿ.ವೀರಭದ್ರಪ್ಪ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಮಹಿಳಾ ಸಬಲೀಕರಣ ಕೋಶ ಮತ್ತು ಇಕೋ ಕ್ಲಬ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನೇಕ ಮಹನೀಯರು, ದಾರ್ಶನಿಕರು, ಚಿಂತಕರು ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಸಾಮಾಜಿಕ ಮೌಲ್ಯಗಳನ್ನು ಕೊಡುಗೆ ನೀಡಿದ್ದಾರೆ. ಸಮಾಜದ ಬಡವರು, ದೀನ ದಲಿತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕಾಯಕ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ, ಬುದ್ಧ, ಬಸವಣ್ಣ ಮತ್ತು ಡಾ| ಅಂಬೇಡ್ಕರ್‌ ಅವರಂತಹ ವ್ಯಕ್ತಿಗಳು ಸಾಮಾಜಿಕ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವರ ನಡೆ- ನುಡಿಗಳಲ್ಲಿ ಸಮಾಜಮುಖೀ ಮತ್ತು ವೈಜ್ಞಾನಿಕ ಚಿಂತನೆಗಳು ಅಡಗಿವೆ. ಕಾಯಕ ತತ್ವವನ್ನು ನಾವು ಅಳವಡಿಸಕೊಳ್ಳಬೇಕಾಗಿದೆ. ಅದರಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಆಗಾಗ ಮುನಿಸಿಕೊಳ್ಳುತ್ತಿದೆ. ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ 6 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಪ್ರಕೃತಿ ಸಂಪತ್ತನ್ನು ನಾಶಗೊಳಿಸದೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಪ್ರಕೃತಿಯ ವಿರುದ್ಧಾವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರಕೃತಿ ಸಂರಕ್ಷಣೆಯೊಂದಿಗೆ ಅದರ ಜೊತೆಯಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ನಾವು ಅರಿಯಬೇಕಾಗಿದೆ. ಕಾಲೇಜುಗಳಲ್ಲಿ ಇರುವ ಇಕೋ ಕ್ಲಬ್‌ಗಳ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ಮುಖ್ಯವಲ್ಲ. ಜಾಗತೀಕರಣದ ನಂತರ ರಾಷ್ಟ್ರದಲ್ಲಿ ಸ್ಪರ್ಧಾತ್ಮಕವಾಗಿ ಎಲ್ಲವನ್ನೂ ಎದುರಿಸಬೇಕಾಗಿದೆ. ಸ್ಪರ್ಧಾತ್ಮಕ ಯುಗವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಗ್ರಾಮೀಣ ವಿದ್ಯಾರ್ಥಿಗಳಾದ ನೀವು ಅರಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

Advertisement

ಕುವೆಂಪು ವಿವಿ ಅಭಿವೃದ್ಧಿಗಾಗಿ ಸರಕಾರಕ್ಕೆ 500 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ. ಎಚ್ಆರ್‌ಡಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 1,000 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದ್ದೇನೆ. ಕುವೆಂಪು ವಿವಿಯಲ್ಲಿ ರಿಸರ್ಚ್‌ ಸೆಂಟರ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಸಹ್ಯಾದ್ರಿ ಸ್ಕೂಲ್ ಆಫ್‌ ಎಕಾಮಿಕ್ಸ್‌ ಪ್ರಾರಂಭಿಸುವ ಪಣ ತೊಟ್ಟಿದ್ದೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಎಸ್‌. ಸುರೇಶ್‌, ವಿದ್ಯಾರ್ಥಿಗಳು ಸಾಧನೆಯ ಮೂಲಕ ಗುರುತಿಸಿಕೊಳ್ಳಬೇಕು. ಅಂಕ ಗಳಿಸುವುದೊಂದೇ ಮುಖ್ಯವಲ್ಲ. ಓದಿನ ಜೊತೆಯಲ್ಲಿ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳವುದರ ಜೊತೆಗೆ ಸಹಾಯ ಸಹಕಾರ ಮತ್ತು ಸ್ಪಂದಿಸುವ ಗುಣ ರೂಢಿಸಿಕೊಳ್ಳಬೇಕು. ಕಾಲೇಜಿಗೆ ಕೀರ್ತಿ ಮತ್ತು ಗೌರವ ತರುವ ಕೆಲಸ ಮಾಡಬೇಕೆಂದರು.

ಕಾಲೇಜಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. 2.25 ಕೋಟಿ ರೂ.ವೆಚ್ಚದಲ್ಲಿ ಸಭಾಂಗಣ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 2.37 ಲಕ್ಷ ರೂ. ವೆಚ್ಚದಲ್ಲಿ ಶುದ್ಧಗಂಗಾ ಘಟಕ ಮತ್ತು ತೊಟ್ಟಿ ನಿರ್ಮಾಣ ಕಾಮಗಾರಿ ಇನ್ನೆರೆಡು ತಿಂಗಳಲ್ಲಿ ಆರಂಭವಾಗಲಿದೆ. 10 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಲಿದೆ ಎಂದರು.

ತಾಪಂ ಅಧ್ಯಕ್ಷೆ ಪದ್ಮಾವತಿ, ಪ್ರಾಶುಂಪಾಲೆ ಡಾ| ತಬಸ್ಸುಮ್‌ ನಾಜ್‌ ಮಾತನಾಡಿದರು. ಪ್ರಾಧ್ಯಾಪಕರಾದ ಪಿ.ಜಿ.ಶಿವಮೂರ್ತಿ, ಸಬಿತಾಬನ್ನಾಡೆ, ಕುಮಾರ್‌, ಹರೀಶ್‌.ಡಿ.ಎಲ್, ಬೀನಾ.ಪಿ, ಚಂದ್ರಶೇಖರ್‌.ಟಿ, ಮೋಹನ್‌, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು. ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next