Advertisement

ಪ್ರಧಾನಿ ಆದರ್ಶ ಗ್ರಾಮವಾಗಿ ಕಾಮನದುರ್ಗ ಆಯ್ಕೆ

03:10 PM Dec 30, 2019 | Naveen |

ತರೀಕೆರೆ: ಗ್ರಾಪಂನ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಕಡೆಗೆ ಪಡೆದು ಉತ್ತಮ ಗ್ರಾಮ ಪಂಚಾಯಿತಿಯಾಗಿರುವ ಕಾಮನದುರ್ಗ ಪಂಚಾಯಿತಿ ಗಾಂಧಿ  ಗ್ರಾಮ ಪುರಸ್ಕಾರ ಪಡೆದು ಈಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಮತ್ತಷ್ಟು ಅಭಿವೃದ್ಧಿ ಹೊಂದುವ ಭಾಗ್ಯ ದೊರೆತಿದೆ.

Advertisement

ಕೇಂದ್ರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಎರಡನೇ ಹಂತದಲ್ಲಿ ಆಯ್ಕೆಯಾಗಿರುವ ಜಿಲ್ಲೆಯ 10 ಗ್ರಾಮಗಳಲ್ಲಿ ಕಾಮನದುರ್ಗ “ಸಂತವೇರಿ’ವೂ ಒಂದು. ಅರಳಗುಪ್ಪೆ, ಹಿರೇಕೊಳಲೆ, ಶಿರವಾಸೆ, ಎಮ್ಮೆದೊಡ್ಡಿ, ಸತ್ತಿಹಳ್ಳಿ, ಆವತಿ, ಯರದಕೆರೆ, ಮಾಗಡಿ ಹಾಗೂ ಅನೂರು ಇನ್ನಿತರ ಗ್ರಾಮಗಳು. ಆದರ್ಶ ಗ್ರಾಮವಾಗಿ ಆಯ್ಕೆಗೊಂಡಿರುವುದು ಇಲ್ಲಿನ ಗ್ರಾಮಸ್ಥರ ಸಂತಸವನ್ನು ಮುಗಿಲ್ಲೆತ್ತರಕ್ಕೆ ಮುಟ್ಟಿಸಿದೆ.

ಯೋಜನೆಗೆ ಆಯ್ಕೆಗೊಂಡಿರುವ ಗ್ರಾಮಗಳು ಅನುದಾನವನ್ನು 2 ವರ್ಷದ ಅವಧಿಯಲ್ಲಿ ಬಳಕೆ ಮಾಡಬೇಕು. ಯೋಜನೆಯ ಕ್ರಿಯಾಯೋಜನೆ ತಯಾರಿಸುವ ಸಂಪೂರ್ಣ ಹೊಣೆಗಾರಿಕೆ ಹೊತ್ತ ಗ್ರಾಪಂ ಮಟ್ಟದ ವಿಲೇಜ್‌ ಪಿಎಂಎಜಿವೈ ಕನ್ವರ್‌ಜೆನ್ಸ್‌ ಕಮಿಟಿ ಕ್ರಿಯಾಯೋಜನೆ ರೂಪಿಸುವಾಗ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೈಗೆತ್ತಿಕೊಳ್ಳುವ ಕಾಮಗಾರಿಗಳು ಸರಕಾರಗಳ ಯೋಜನೆಗಳಲ್ಲಿ ಕೈಗೆತ್ತಿಕೊಂಡಿರಬಾರದು. ಅವುಗಳ ಹೊರತಾಗಿ ಗ್ರಾಮದಲ್ಲಿ ಸಿ.ಸಿ ರಸ್ತೆ, ಅಂಗನವಾಡಿ ಕಟ್ಟಡ, ಚರಂಡಿ, ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಗುಂಪುಗಳ ಚಟುವಟಿಕೆಗೆ ಉತ್ತೇಜನ, ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸುವುದು.

ಶಾಲಾ ಕಾಂಪೌಂಡ್‌ ನಿರ್ಮಾಣ, ಬೀದಿ ನಾಟಕ ಪ್ರದರ್ಶನ, ರೈತರ ಕೃಷಿಭೂಮಿಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರಿನ ಸೌಕರ್ಯ, ಸೋಲಾರ್‌ ಬೀದಿದೀಪ ಅಳವಡಿಕೆ, ವಿದ್ಯುತ್‌ ರಹಿತ ಮನೆಗಳಿಗೆ ವಿದ್ಯುತ್‌ ಸಂಪರ್ಕ, ಜನವಸತಿ ಪ್ರದೇಶಗಳಲ್ಲಿ ಸಮುದಾಯದತ್ತ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ರೂಪಿಸಿ ಸಂಬಂಧಿತ ಏಜೆನ್ಸಿಗಳ ಮೂಲಕ ನಿರ್ವಹಣೆ ಮಾಡಿಸಬೇಕು.

ಅಭಿವೃದ್ಧಿ, ಪಾರದರ್ಶಕ ಆಡಳಿತ, ಸ್ವಚ್ಛತೆಯ ಬಗ್ಗೆ ಅಗತ್ಯ ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಾಮನದುರ್ಗ ಗ್ರಾಪಂಗೆ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ, ರಾಜ್ಯ ಸರ್ಕಾರದ ಗಾಂಧಿ  ಗ್ರಾಮ, ಬಸವಜ್ಯೋತಿ, ಬಸವರತ್ನಗಳಂತಹ ಪ್ರಶಸ್ತಿ ಪಡೆದುಕೊಂಡಿದೆ. ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಿಂದ ಗ್ರಾಮಕ್ಕೆ ಹಲವಾರು ಸೌಲಭ್ಯ ದೊರಕುತ್ತಿರುವುದರಿಂದ ಗ್ರಾಮದ ಅಭಿವೃದ್ಧಿಯಾಗಲಿದೆ.

Advertisement

ಸೂಕ್ತ ರೀತಿಯಲ್ಲಿ ಕ್ರಿಯಾಯೋಜನೆ ರೂಪಿಸಿದಲ್ಲಿ ಕಾಮನದುರ್ಗ ಆದರ್ಶ ಗ್ರಾಮ ಯೋಜನೆಯಿಂದ ತನ್ನ ಸ್ವರೂಪವನ್ನೇ ಬದಲಾಯಿಸಿಕೊಳ್ಳಲಿದೆ. 2012ನೇ ಸಾಲಿನ ಜನಗಣತಿ ಆಧರಿಸಿ ಶೇ.85%ರಷ್ಟು ಪರಿಶಿಷ್ಟ ಜಾತಿಯವರು ಹೆಚ್ಚಾಗಿರುವ ಕಾಮನದುರ್ಗ ಗ್ರಾಮವನ್ನು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ನೇರವಾಗಿ ಗುರುತಿಸಿ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಸೇರ್ಪಡೆಗೊಳಿಸಿದೆ.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಪ್ರತಿ ಗ್ರಾಮಕ್ಕೆ ಕೇಂದ್ರ ಸರ್ಕಾರ 21 ಲಕ್ಷ ರೂ. ಬಿಡುಗಡೆ ಮಾಡಲಿದೆ. ಈ ಮೊತ್ತದಲ್ಲಿ 20 ಲಕ್ಷ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಇನ್ನುಳಿದ 1 ಲಕ್ಷ ರೂ. ಆಡಳಿತಾತ್ಮಕ ವೆಚ್ಚಕ್ಕಾಗಿ ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ.

ಕೇಂದ್ರ ಸರ್ಕಾರ ಬಿಡುಗಡೆಗೊಳಿಸುವ ಅನುದಾನಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಹಾಗೂ ಇನ್ನಿತರ ಕೇಂದ್ರ ಪುರಸ್ಕೃತ ಯೋಜನೆಗಳಡಿ 3 ರಿಂದ 4 ಪಟ್ಟು ಅನುದಾನ ಒದಗಿಸಿಕೊಂಡು ಅಲ್ಲಿನ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬಹುದಾಗಿದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎಂ.ಬಿ.ಭೈರಪ್ಪ.

ಉದ್ದೇಶಿತ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಯೋಜನಾ ನಿರ್ದೇಶಕರು, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಹಾಯಕರು. ಗ್ರಾಮಮಟ್ಟದಲ್ಲಿ ಗ್ರಾಪಂ ಅಧ್ಯಕ್ಷ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿ ಹೊರಲಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ತಾಲೂಕಿನ ಕಾಮನದುರ್ಗ ಗ್ರಾಮವನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಳಸಿಕೊಂಡು ಇನ್ನಷ್ಟು ಪರಿಶಿಷ್ಟರು ಹೆಚ್ಚು ನೆಲೆಸಿರುವ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಗೊಳಿಸಲಾಗುವುದು.
ಡಿ.ಎಸ್‌.ಸುರೇಶ್‌,
ಶಾಸಕರು.

„ಶೇಖರ್‌.ವಿ.ಗೌಡ

Advertisement

Udayavani is now on Telegram. Click here to join our channel and stay updated with the latest news.

Next