Advertisement

ಜನರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ

05:50 PM Nov 13, 2019 | Naveen |

ತರೀಕೆರೆ: ಉಪ ವಿಭಾಗದ ವ್ಯಾಪ್ತಿಯಲ್ಲಿ ಬಗೆಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವ್ಯಾಪ್ತಿ ಮೀರಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸುಳ್ಳು ಹೇಳಿ ನಿಮ್ಮನ್ನು ಸಮಾಧಾನಪಡಿಸುವ ಕೆಲಸ ಮಾಡುವುದಿಲ್ಲ ಎಂದು ಹಿರಿಯ ಉಪ ವಿಭಾಗಾಧಿಕಾರಿ ಬಿ.ಆರ್‌.ರೂಪಾ ತಿಳಿಸಿದರು.

Advertisement

ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಉಪ ವಿಭಾಗ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ.ಜಾತಿ, ಪಂಗಡದವರಿಗೆ ಮಂಜೂರಾಗಿರುವ ದರಖಾಸ್ತು ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ರೆಕಾರ್ಡ್‌ ರೂಂನಲ್ಲಿ ಸಿಗುತ್ತಿಲ್ಲ ಎನ್ನುವ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ದಲಿತರಿಗೆ ಶವ ಸಂಸ್ಕಾರ ಮಾಡಲು ನಿಗ ದಿತ ಸ್ಮಶಾನ ಇಲ್ಲದಿರುವ ಗ್ರಾಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಸ್ಮಶಾನಗಳಿದ್ದರೆ ಅವುಗಳನ್ನು ಗರುತಿಸಿ, ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಕಂದಾಯ ನಿರೀಕ್ಷಕರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ದೋರನಾಳು ಗ್ರಾಮದಲ್ಲಿ ದಲಿತರು ವಾಸಿಸುವ ಮನೆಗಳ ಮುಂದೆಯೇ ತುರುಮಂದಿ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂಬ ದೂರು ಬಂದಿದೆ. ಊರಿನ ಹೊರಗಡೆ ತುರುಮಂದಿ ಮಾಡಲು ಕ್ರಮಕೈಗೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಸರ್ವೆ ನಡೆಸುವ ಕಾರ್ಯಕ್ಕೆ ಮುಂಚಿತವಾಗಿ ಕಂದಾಯ ನಿರೀಕ್ಷಕರು ಮತ್ತು ಸರ್ವೆ ಇಲಾಖಾ ಅಧಿಕಾರಿಗಳು ಸಮಯ ನಿಗ ಪಡಿಸಿಕೊಂಡು ಅಳತೆಗೆ ತೆರಳಬೇಕು. ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ದಲಿತ ಮುಖಂಡ ಎಸ್‌.ಎನ್‌.ಮಹೇಂದ್ರಸ್ವಾಮಿ ಮಾತನಾಡಿ, ಶಿವನಿ ಗ್ರಾಮದಲ್ಲಿ ಸ್ಮಶಾನ ಜಾಗ ಗುರುತಿಸಿ ಕೊಡುವಂತೆ 1985ರಿಂದ ಅರ್ಜಿ ನೀಡುತ್ತಿದ್ದೇವೆ.

ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತುರ್ತಾಗಿ ಜಾಗ ಗುರುತಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು. ನ್ಯಾಯವಾದಿ ಕೆ.ಚಂದ್ರಪ್ಪ ಮಾತನಾಡಿ, ಪಿಟಿಸಿಎಲ್‌ ಕಾಯ್ದೆಯನ್ವಯ ಕೇಸು ದಾಖಲಿಸಲು ದರಖಾಸ್ತು ಜಮೀನುಗಳ ಮೂಲ ದಾಖಲೆಗಳು ದೊರಕದ ಕಾರಣ ದಲಿತರಿಗೆ ಅನ್ಯಾಯವಾಗುತ್ತಿದೆ. ದಾಖಲೆಗಳ ಕೊಠಡಿಯಲ್ಲಿ ಮೂಲ ದರಖಾಸ್ತು ಜಮೀನುಗಳ ಕಡತಗಳು ದೊರೆಯುವುದಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಮೂಲ ಕಡತಗಳನ್ನು ಕಳುಹಿಸಿದ್ದರು. ವಿಚಾರಣೆ ಮುಗಿದ ನಂತರ ಪುನಃ ಕಚೇರಿಗೆ ಹಿಂತಿರುಗಿ ಬರುತ್ತಿಲ್ಲ. ಇವುಗಳ ಮಾಹಿತಿ ಪಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಬಿ.ಆರ್‌.ರೂಪಾ ಕಂದಾಯ ಇಲಾಖೆಯಲ್ಲಿ ಪ್ರಕರಣಗಳ ವಿಚಾರಣೆಗೆ ಮತ್ತು ನ್ಯಾಯಾಲಯಗಳಲ್ಲಿ ಇರುವ ವಿಚಾರಣೆಗೆ ಮೂಲ ಕಡತಗಳನ್ನು ಕಳುಹಿಸಲಾಗಿದೆ. ವಿಚಾರಣೆ ಪೂರ್ಣಗೊಂಡ ಕಡತಗಳನ್ನು ವಾಪಸ್‌ ತರಿಸುವಂತೆ ಎಲ್ಲಾ ತಹಶೀಲ್ದಾರ್‌ ಕಚೇರಿಗೆ ಸೂಚನೆ ನೀಡಲಾಗಿದೆ. ಇಲ್ಲಿಯ ತನಕ ಎಷ್ಟು ಕಡತಗಳು ನ್ಯಾಯಾಲಯದಲ್ಲಿವೆ ಎಂಬ ಅಂಕಿಅಂಶವನ್ನು ಪಡೆದು ಮಾಹಿತಿ ನೀಡಲಾಗುವುದು ಎಂದರು.

ಅಧಿಕಾರಿಗಳ ಮೇಲೆ ಸಾರ್ವಜನಿಕವಾಗಿ ಅಪಾದನೆ ಮಾಡಬೇಡಿ. ನಿರ್ದಿಷ್ಟವಾದ ಪ್ರಕರಣಗಳಲ್ಲಿ ಲೋಪದೋಷಗಳು ಕಂಡು ಬಂದಲ್ಲಿ ಲಿಖೀತ ದೂರು ನೀಡಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆ, ಕಂದಾಯ ಇಲಾಖೆಗಳಿಗೆ ಬೇರೆ ಬೇರೆ ವ್ಯಾಪ್ತಿ ಇದೆ. ನನ್ನ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ನಾನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.

ಬೇರೆ ಸಮಸ್ಯೆಗಳಿದ್ದರೆ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಿ ಎಂದರು. ದಲಿತ ಮುಖಂಡ ಟಿ.ಮಂಜಪ್ಪ ಮಾತನಾಡಿ, ಕಡೂರು ತಾಲೂಕಿನಲ್ಲಿರುವ ಎಸ್‌.ಆರ್‌.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿರುವ ನಿವೇಶನಗಳನ್ನು ಅರ್ಹರಿಗೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಗ್ರಾ.ಪಂ. ಸದಸ್ಯ ಶಿವಮೂರ್ತಿ ಮಾತನಾಡಿ, ಸೊಲ್ಲಾಪುರ ಗ್ರಾಮದಲ್ಲಿ ಹರಿಜನ ಕಾಲೋನಿಯ ಗಡಿ ಗುರುತಿಸಬೇಕು. ಕಾಲೋನಿ ಜನರು ಓಡಾಡಲು ನಕಾಶೆ ದಾರಿ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು. ದಲಿತ ಮುಖಂಡರಾದ ನಂದಿಶೇಖರಪ್ಪ, ಬಿ.ಈ.ನಾಗರಾಜ್‌, ಟಿ.ಕೃಷ್ಣಮೂರ್ತಿ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಟಿ.ಎಸ್‌.ಬಸವರಾಜ್‌, ರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಭೈರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next