ತರೀಕೆರೆ: ಕಳೆದ 50 ವರ್ಷಗಳಿಂದ ನಿರಂತರವಾಗಿ ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಅಕ್ಷರ ದಾಸೋಹದ ಜೊತೆಗೆ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ.
Advertisement
ಇಲ್ಲಿ ಸಾವಿರಾರು ಪ್ರತಿಭೆಗಳು ವಿದ್ಯಾಭ್ಯಾಸ ಮಾಡಿ ಅನೇಕ ಉನ್ನತ ಹುದ್ದೆಗಳನ್ನು ಪಡೆದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮುನಿಸಿಪಲ್ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದರು. 1972-73ಕ್ಕೆ ಕೋ ಎಜ್ಯುಕೇಶನ್ ಮುಕ್ತಾಯಗೊಂಡು ತದನಂತರದಲ್ಲಿ ಸರಕಾರಿ ವಿದ್ಯಾರ್ಥಿನಿಯರ ಶಾಲೆಯಾಗಿ ಮಾರ್ಪಾಟಾಯಿತು.
Related Articles
Advertisement
ಆರಂಭಿಕ ಹಂತದಿಂದಲೇ ಮಹಿಳೆಯರು ಸ್ವಾವಂಲಬಿಗಳಾಗಬೇಕು ಎಂಬ ದೂರದೃಷ್ಟಿಯಿಂದ ಶಾಲೆಯಲ್ಲಿ ಮಾಹಿತಿ ತಂತ್ರಜ್ಞಾನ(ಐಟಿ) ಹಾಗೂ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳನ್ನು 2018ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿದೆ. ಉದ್ಯೋಗಶೀಲತಾ ಕೋರ್ಸ್ ಆರಂಭಿಸಿರುವ ಜಿಲ್ಲೆಯ 5 ಸರ್ಕಾರಿ ಶಾಲೆಗಳ ಪೈಕಿ ಈ ಶಾಲೆಯೂ ಕೂಡ ಒಂದಾಗಿದೆ ಎಂಬುದು ಗಮನಾರ್ಹ. ಎರಡು ಕೋರ್ಸ್‌ಗಳ ಪ್ರವೇಶಾತಿಗೆ 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆಅವಕಾಶ ಕಲ್ಪಿಸಲಾಗಿದ್ದು, ದ್ವಿತೀಯ ಪಿಯುಗೆ ಕೋರ್ಸ್ ಪೂರ್ಣಗೊಳ್ಳಲಿದೆ. 8ರಿಂದ10ನೇ ತರಗತಿ ವರೆಗಿನ ವಿದ್ಯಾರ್ಥಿನಿಯರ ಕಲಿಕೆಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ 16 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆಯಲ್ಲದೆ, ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್, ಕ್ರೀಡಾ, ಅಕ್ಷರ ದಾಸೋಹ, ಅನ್ನ ದಾಸೋಹ ಪ್ರಯೋಗಾಲಯ ಹಾಗೂ
ಗ್ರಂಥಾಲಯಕ್ಕೆ ಪ್ರತ್ಯೇಕ ಕೋಣೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಸೇವೆಗೆ ಒದಗಿಸಿದೆ. ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಭಾಭವನವಿದೆ. ಶೌಚಗೃಹ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿನಿಯರಲ್ಲಿ ಕೆಲವರು ಸಮಾಜ ಸೇವೆ, ಕ್ರೀಡಾ, ಆರೋಗ್ಯ, ರಾಜಕೀಯ, ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಶಾಲೆ ಮತ್ತು ದೇಶಕ್ಕೆ ಕೀರ್ತಿ ತರುವಂಥ ಕೆಲಸಗಳನ್ನು ಮಾಡುತ್ತಿದ್ದಾರೆ. 2017-18ನೇ ಸಾಲಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಎಸ್.ಇಂದುಶ್ರೀ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಗೌರವ ತಂದಿದ್ದಾಳೆ. ಜಿಲ್ಲೆಯ 10 ಸರ್ಕಾರಿ ಶಾಲೆಗಳ ಪೈಕಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲೂ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಸೇವಾ ಯೋಜನೆ ಆರಂಭಿಸಲಾಗಿದೆ. ಎನ್‌ಎಸ್‌ಎಸ್ ಘಟಕದಲ್ಲಿ ಶಾಲೆಯ 100 ವಿದ್ಯಾರ್ಥಿನಿಯರು ಸಕ್ರೀಯರಾಗಿದ್ದು, ಸೇವಾಮನೋಭಾವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಉಪ ಪ್ರಾಚಾರ್ಯ ಎ.ಇ.ಕಾಂತರಾಜಯ್ಯ. ಉಪ ಪ್ರಾಚಾರ್ಯ ಸೇರಿದಂತೆ 17 ಸಹ ಶಿಕ್ಷಕರು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೋಷಕರ ಮನದಲ್ಲಿ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ನೆಲೆಯೂರಿರುವ ತಾತ್ಸಾರ ಮನೋಭಾವ ತೊಡಗಿಸಲು ಪ್ರಯತ್ನ ನಡೆಸುತ್ತಿದ್ದಾರೆ.