ತರೀಕೆರೆ: ತಾಲೂಕಿನ ವ್ಯಾಪ್ತಿಯಲ್ಲಿರುವ ಭದ್ರಾ ಜಲಾಶಯದ ಭದ್ರತೆ ಮತ್ತು ಒಂದೊಮ್ಮೆ ವಿಪತ್ತು ಸಂಭವಿಸಿದಲ್ಲಿ ಪೂರಕ ಕ್ರಮಗಳನ್ನು ರೂಪಿಸಿಕೊಳ್ಳುವ ಕುರಿತು ತರೀಕೆರೆ ಉಪವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಲಾಯಿತು ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು.
ಪಟ್ಟಣದ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ದೇಶನಾಲಯದ ಸೂಚನೆ ಮೇರೆಗೆ ಭದ್ರಾ ಜಲಾಶಯದ ಭದ್ರತೆ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು.
ತಾಲೂಕಿನ 22ಹಳ್ಳಿಗಳು ಭದ್ರಾ ನದಿ ಪಾತ್ರದಲ್ಲಿ ಬರುತ್ತವೆ. ಮಳೆ ಪ್ರಮಾಣ ಹೆಚ್ಚಾಗಿ ನದಿಗೆ ನೀರು ಬಿಡುಗಡೆ ಮಾಡಿದರೆ ಪ್ರವಾಹದ ಸಾಧ್ಯತೆಯಿದೆ. ಹಾಗಾಗಿ, ಪ್ರತಿ ಗ್ರಾಮಕ್ಕೂ ಸಕ್ಷಮ ಪ್ರಾಧಿಕಾರ ನೇಮಕ ಮಾಡಬೇಕಾಗಿದೆ. ಆಪತ್ತು ಸಂಭವಿಸಿದಲ್ಲಿ ಜನರ ರಕ್ಷಣೆ ಅತ್ಯಂತ ಮುಖ್ಯ ಕಾರ್ಯವಾಗಿರುತ್ತದೆ. ಜನರ ರಕ್ಷಣೆಗಾಗಿ ಜಾಕೆಟ್ಸ್, ಬೋಟ್‌ಗಳು, ಟಾರ್ಚ್ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಕ್ರೋಢೀಕರಿಸಿ ಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದರು.
ಭದ್ರಾ ಜಲಾಶಯದಲ್ಲಿ 71.5 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಭದ್ರಾ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ 4,000 ಕ್ಯೂಸೆಕ್ ನೀರನ್ನು ಹರಿಸಬಹುದಾಗಿದೆ. ಕ್ರಸ್ಟ್ ಗೇಟ್‌ಗಳ ಮೂಲಕ 1,20,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬಹುದಾದ ಸಾಮರ್ಥ್ಯವಿದೆ. ಭದ್ರಾ ಜಲಾಶಯ ನಿರ್ಮಾಣ ಪೂರ್ಣಗೊಂಡ ನಂತರ 2018ರಲ್ಲಿ ಮಾತ್ರ 90,000 ಕ್ಯೂಸೆಕ್ ನೀರನ್ನು ನದಿ ಪಾತ್ರದಲ್ಲಿ ಹರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದಾಗ ಆಗಬಹುದಾದ ಅನಾಹುತಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ವಿಪತ್ತು ನಿರ್ವಹಣೆಗೆ ಸರ್ಕಾರದ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದೆ. ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರು ಉಪವಿಭಾಗದ ಅಧಿಕಾರಿಗಳ ಸಂರ್ಪಕ ಸಾಧಿಸಲು ಅನುಕೂಲವಾಗುವಂತೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಭೆಯಲ್ಲಿ ಭದ್ರಾ ಜಲಾಶಯದ ಎಇಇ ನಟರಾಜ್ ಪಾಟೀಲ್, ಬಿಎಲ್ಆರ್‌ಬಿಸಿ ಎಇಇ ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.