ನಿಗಮದಡಿ ವಾಗ್ಧಾರಿಯಿಂದ ರಿಬ್ಬನಪಲ್ಲಿವರೆಗೆ ನಿರ್ಮಿಸಿದ ರಸ್ತೆಯನ್ನು ನಿರ್ವಹಿಸುವ ಜಿವಿಆರ್ ಇನ್ಫ್ರಾನವರ ಕಾರ್ಯವೈಖರಿ ಒಂದು ಝಲಕ್. ಮಹಾರಾಷ್ಟ್ರದ ವಾಗ್ಧಾರಿಯಿಂದ ತೆಲಂಗಾಣದ ರಿಬ್ಬನಪಲ್ಲಿವರೆಗೆ 120 ಕಿಮೀ ರಸ್ತೆ ನಿರ್ಮಿಸಿರುವ ಜಿವಿಆರ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಎಂಬ ಗುತ್ತಿಗೆ ಕಂಪನಿ ಪ್ರತಿನಿತ್ಯ ಲಕ್ಷಾಂತರ ರೂ. ಟೋಲ್ ವಸೂಲಿ ಮಾಡುತ್ತಿದೆ. ಆದರೆ ರಸ್ತೆಯನ್ನು
ಸರಿಯಾದ ನಿಟ್ಟಿನಲ್ಲಿ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ಎಡವಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿ ರಸ್ತೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇದ್ದ ಪಕ್ಷದಲ್ಲಿ ಟೋಲ್ ಸಹ ವಸೂಲಿ ಮಾಡುವಂತಿಲ್ಲ. ಆದರೆ ನೀಲಹಳ್ಳಿ, ಹೂಡಾ ಗೇಟ್, ಆಡಕಿ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳ ರಾಜ್ಯ ಹೆದ್ದಾರಿಯಲ್ಲಿ ತಗ್ಗು, ದಿನ್ನೆಗಳು ನಿರ್ಮಾಣಗೊಂಡಿವೆ. ಅಲ್ಲದೆ ರಸ್ತೆಯಲ್ಲಿ
ಪ್ರಯಾಣಿಸುವಾಗ ಹಡಗಿನಲ್ಲಿ ಪ್ರಯಾಣಿಸಿದ ಅನುಭವವಾಗುತ್ತಿದೆ ಎಂಬುದು ನಿತ್ಯ ಸಂಚಾರಿಗಳ ದೂರಾಗಿದೆ. ಅಲ್ಲದೆ ರಾಜ್ಯ ಹೆದ್ದಾರಿ ಯಿಂದ 150 ಮೀ. ದೂರದಲ್ಲಿ ಗೂಡಂಗಡಿಯಾಗಲಿ, ಹೋಟೆಲ್ ಅಥವಾ ಯಾವುದೇ ವ್ಯಾಪಾರ ನಡೆಸಲು ಅನುಮತಿ ಪಡೆಯಬೇಕು. ಆದರೆ ವಾಗ್ಧಾರಿಯಿಂದ ರಿಬ್ಬನಪಲ್ಲಿವರೆಗೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಅನೇಕ ಗೂಡಂಗಡಿಗಳು ತಲೆ ಎತ್ತಿವೆ. ಜಿವಿಆರ್ ಅಧಿಕಾರಿಗಳು ಮಾತ್ರ ಬೆರಳೆಣಿಕೆಯಷ್ಟು ಅಂಗಡಿಗಳಿಗೆ ಸೂಚನೆ ನೀಡಿ ಒಂದು ಕಣ್ಣಿಗೆ ಸುಣ್ಣ ಮತ್ತೂಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದ್ದಾರೆ. ಅಂಬುಲೆನ್ಸ್ ಸೇವೆ ಎಂದರೆ ?: ರಾಜ್ಯ ಹೆದ್ದಾರಿ ಸುರಕ್ಷತೆ ದೃಷ್ಟಿಯಿಂದ ರಸ್ತೆಯನ್ನು ನಿರ್ವಹಿಸುವ
ಗುತ್ತಿಗೆ ಕಂಪನಿಗಳು ಅಂಬುಲೆನ್ಸ್ ಸೇವೆ ಕಲ್ಪಿಸಬೇಕು. ಆದರೆ ಜಿವಿಆರ್ ಮಾತ್ರ ನಾಮಕಾವಾಸ್ತೆ ಎಂಬಂತೆ ಅಂಬುಲೆನ್ಸ್ ಸೇವೆ ಒದಗಿಸುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬಹುತೇಕ ಅಪಘಾತಗಳಲ್ಲಿ ಸರ್ಕಾರದ ಅಂಬುಲೆನ್ಸ್‌ಗಳೇ ಹೆಚ್ಚು ಸೇವೆ ನೀಡಿವೆ.
ಶೌಚಾಲಯ ಎಲ್ಲಿ?: ರಾಜ್ಯ ಹೆದ್ದಾರಿಗಳಲ್ಲಿ ಬೃಹತ್ ಗಾತ್ರದ ವಾಹನಗಳ ಚಾಲಕರ ಅನುಕೂಲಕ್ಕೆಂದು ಲಾರಿ ಯಾರ್ಡ್ ಹೆಸರಿನಲ್ಲಿ
ಹೆಚ್ಚಿನ ರಸ್ತೆ ನಿರ್ಮಿಸಲಾಗುತ್ತದೆ. ಅದರಲ್ಲಿ ಸೂಕ್ತ ರೀತಿಯ ಶೌಚಾಲಯವನ್ನು ಕಲ್ಪಿಸಬೇಕು. ಅದರಂತೆ ಮೊದಲಿಗೆ ಜಿವಿಆರ್ ಶೌಚಾಲಯ ನಿರ್ಮಿಸಿದ್ದು, ಮೂರೇ ತಿಂಗಳಲ್ಲಿ ನೆಲಕಚ್ಚಿದೆ. ಒಟ್ಟಾರೆಯಾಗಿ ರಸ್ತೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಪ್ರಯಾಣಿಕರಿಂದ ಟೋಲ್ ವಸೂಲಿ ಮಾಡುತ್ತಿರುವ ಜಿವಿಆರ್ ಇನ್ಫ್ರಾ ಪ್ರೈ.ಲಿ. ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.
Advertisement
ಶಿವಕುಮಾರ ಬಿ. ನಿಡಗುಂದಾ