Advertisement

ಮುಂದುವರಿದ “ಟಾರ್ಗೆಟ್‌ ಸಿದ್ದರಾಮಯ್ಯ”: CM ವಿರುದ್ಧ ಎಚ್‌ಡಿಕೆ ವಾಗ್ಧಾಳಿ

09:09 PM Aug 09, 2023 | Team Udayavani |

ಬೆಂಗಳೂರು: “ಟಾರ್ಗೆಟ್‌ ಸಿದ್ದರಾಮಯ್ಯ’ ಮುಂದುವರಿಸಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಭ್ರಷ್ಟಾಚಾರ, ವರ್ಗಾವಣೆ ದಂಧೆ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬದಿಗಿಟ್ಟು ತಮ್ಮ ಭಾಷೆಯ, ಮಾನಸಿಕ ಸ್ಥಿತಿಯ ಬಗ್ಗೆ ಟೀಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಅಲ್ಲದೆ, ಗುತ್ತಿಗೆದಾರರಿಂದ ಕಾಂಗ್ರೆಸ್‌ ಟ್ಯಾಕ್ಸ್‌ ಹಾಗೂ ವೈಎಸ್‌ಟಿ ಟ್ಯಾಕ್ಸ್‌ ಸಂಗ್ರಹಿಸಲಾಗುತ್ತಿದೆ ಎಂದು ಪುನಃ ಆರೋಪಿಸಿದ್ದಾರೆ.

‘ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!’ ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೇಳಿಕೆ ಉಲ್ಲೇಖೀಸಿ ಕಾಂಗ್ರೆಸ್‌ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿರುವ ಕುಮಾರಸ್ವಾಮಿ, “ಇದೇ ಕೆಂಪಣ್ಣನವರ 40 ಪರ್ಸೆಂಟ್‌ ಆರೋಪವನ್ನೇ ಅಸ್ತ್ರ ಮಾಡಿಕೊಂಡು, ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ‘ಸಿದ್ದಕಲೆ’ ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಮುಖ್ಯಮಂತ್ರಿ ಕಚೇರಿಯ ಐದಾರು ಟಿಪ್ಪಣಿಗಳು ‘ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ’ ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ! ಎಂದು ಅವರು ಕಿಡಿಕಾರಿದ್ದಾರೆ. ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತದ ಕಥೆ ಏನು? 136 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ ‘ಅತಿ ಉಬ್ಬರ’ವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಸಿಐಡಿ ತಂಡದಿಂದ ತನಿಖೆ ಚುರುಕು
ಮಂಡ್ಯ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಲಂಚಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಸಹಾಯಕ ಕೃಷಿ ನಿರ್ದೇಶಕರು ಬರೆದಿದ್ದಾರೆನ್ನಲಾದ ದೂರು ಅರ್ಜಿಯ ತನಿಖೆ ಕೈಗೊಂಡಿರುವ ಸಿಐಡಿ ಅಧಿ ಕಾರಿಗಳು ಬುಧವಾರ ನಗರಕ್ಕೆ ಆಗಮಿಸಿ ಕೃಷಿ ಇಲಾಖೆಯಲ್ಲಿ ವಿಚಾರಣೆ ನಡೆಸಿದರು. ಮಂಡ್ಯ ನಗರಕ್ಕೆ ಆಗಮಿಸಿದ ಸಿಐಡಿ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ನೇತೃತ್ವದ ತಂಡಕ್ಕೆ ಪ್ರಕರಣವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾ ಕಾರಿ ಹಸ್ತಾಂತರ ಮಾಡಿದರು.

Advertisement

ಕೂಡಲೇ ಕಾರ್ಯ ಪ್ರವೃತ್ತರಾದ ಸಿಐಡಿ ಅಧಿ ಕಾರಿಗಳ ತಂಡ ನಗರದ ಜಿಲ್ಲಾ ಧಿಕಾರಿ ಕಚೇರಿಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಜಂಟಿ ಕೃಷಿ ನಿರ್ದೇಶಕ ವಿ.ಎಸ್‌.ಅಶೋಕ್‌ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ರಾಜ್ಯಪಾಲರಿಗೆ ಮೈಸೂರಿನಿಂದ ದೂರು ಅರ್ಜಿ ಅಂಚೆ ಮೂಲಕ ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು ಮೈಸೂರಿನತ್ತ ತೆರಳಿದರು.

ದಾಖಲೆ ರಹಿತ ಆರೋಪಗಳಿಂದ ಏನೂ ಮಾಡಲು ಸಾಧ್ಯವಿಲ್ಲ
ರಾಮನಗರ: ಚಲುವರಾಯಸ್ವಾಮಿ ಈಗಾಗಲೇ ಅವರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದು, ಸುಮ್ಮನೆ ಆರೋಪ ಮಾಡುವ ಬದಲು ಅದಕ್ಕೆ ಸಂಬಂಧಿಸಿದ ಸಾಕ್ಷಿ ನೀಡಬೇಕು ಎಂದು ಸಚಿವ ಕೆ.ಜೆ.ಜಾರ್ಜ್‌ ವಿರೋಧಪಕ್ಷಗಳಿಗೆ ಟಾಂಗ್‌ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ಸತ್ಯಾಸತ್ಯತೆ ತನಿಖೆಯಿಂದ ಹೊರ ಬರುತ್ತದೆ ಎಂದರು.

ಅವರ ಸಂಸ್ಕೃತಿ ತೋರಿಸುತ್ತದೆ: ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಗ್ಗೆ ಲಘುವಾಗಿ ಟ್ವೀಟ್‌ ಮಾಡಿರುವ ಬಗ್ಗೆ ಪ್ರತಿಕ್ರಿಸಿದ ಜಾರ್ಜ್‌, ಮುಖ್ಯಮಂತ್ರಿ ಬಗ್ಗೆ ಆರೀತಿ ಮಾತನಾಡುವುದು ಅವರ ಸಂಸ್ಕೃತಿ ತಿಳಿಸುತ್ತದೆ. ಯಾರೇ ಮುಖ್ಯಮಂತ್ರಿ ಯಾದರೂ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯಪಾಲರನ್ನು ಭೇಟಿಯಾದ ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ತಾವು ಲಂಚದ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ ಬೆನ್ನಲ್ಲೇ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಬುಧವಾರ ರಾಜಭವನಕ್ಕೆ ಧಾವಿಸಿ, ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟೀಕರಣದೊಂದಿಗೆ ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆ ಶಾಸಕರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ.ಎಂ. ಉದಯ್‌ಗೌಡ, ದಿನೇಶ್‌ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ರಾಮಕೃಷ್ಣ, ಕೆ.ಬಿ. ಚಂದ್ರಶೇಖರ್‌ ಅವರೊಂದಿಗೆ ಮಧ್ಯಾಹ್ನ 2ರ ಸುಮಾರಿಗೆ ರಾಜಭವನಕ್ಕೆ ತೆರಳಿದ ಸಚಿವ ಚಲುವರಾಯಸ್ವಾಮಿ, ಸುಮಾರು 20 ನಿಮಿಷಕ್ಕೂ ಅಧಿಕ ಹೊತ್ತು ಸಮಾಲೋಚನೆ ನಡೆಸಿದರು. ಈ ವೇಳೆ ತಮ್ಮ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಂಡು ಪರಿಶೀಲನೆ ಅಥವಾ ತನಿಖೆಗೆ ಸೂಚಿಸಿದ್ದರೆ ಸೂಕ್ತವಾಗಿತ್ತು. ಏಕಾಏಕಿ ಪರಿಶೀಲನೆಗೆ ಸೂಚಿಸಿದ್ದರಿಂದ ಸರ್ಕಾರ ಮತ್ತು ತಮಗೆ ತುಸು ಮುಜುಗರ ಉಂಟುಮಾಡಿದೆ ಎಂದು ಗಮನಕ್ಕೆ ತಂದಿರುವುದಾಗಿ ಮೂಲಗಳು ತಿಳಿಸಿವೆ.

ಜೆಡಿಎಸ್‌ ಸೃಷ್ಟಿ-ಸಚಿವರ ಆರೋಪ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, “ನನ್ನ ವಿರುದ್ಧ ಪತ್ರ ಬರೆದವರು ಯಾರು? ಅವರ ಮನೆಯ ವಿಳಾಸ ಯಾವುದೂ ಗೊತ್ತಾಗುತ್ತಿಲ್ಲ. ಪತ್ರದಲ್ಲಿ “ಕುಮಾರಸ್ವಾಮಿ ನಮ್ಮ ನಾಯಕರು’ ಎಂದು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಈ ಪತ್ರವನ್ನು ಜೆಡಿಎಸ್‌ನವರೇ ಸೃಷ್ಟಿಸಿದ್ದಾರೆಂಬುದು ಸ್ಪಷ್ಟ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯಪಾಲರಿಗೆ ಅನಾಮಧೇಯ ಪತ್ರ ಹೋಗಿದೆ. ಪತ್ರದಲ್ಲಿ ಯಾವುದೇ ವಿಷಯ ಸ್ಪಷ್ಟತೆಯಿಂದ ಕೂಡಿಲ್ಲ. ಪಕ್ಷದ ಘನತೆ ಗೌರವ ಹಾಳು ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಪತ್ರ ಬರೆದ ರೂವಾರಿ ಯಾರು? ಏನೂ ಗೊತ್ತಿಲ್ಲ. ಸದ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದೆ.
-ಪಿ.ಎಂ.ನರೇಂದ್ರ ಸ್ವಾಮಿ, ಶಾಸಕ

 

*****
ಇಂಥ ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ ಸಿದ್ದರಾಮಯ್ಯನವರೇ? ಸರ್ಕಾರಿ ಉದ್ಯೋಗಿಗಳು, ಅವರ ಕುಟುಂಬದವರ ಕಣ್ಣೀರಿನ ಶಾಪ ನಿಮಗೆ ತಟ್ಟದಿರುವುದೇ? ಮಾನಸಿಕ ಸ್ಥಿಮಿತತೆ ಎಂದರೆ ಸರ್ಕಾರಿ ಉದ್ಯೋಗಿಗಳನ್ನು ಕಾಸಿಗಾಗಿ ಎಡೆಬಿಡದೆ ಕಾಡುವುದೇ? ಅಥವಾ ಇದೇನಾ ಸಾಮಾಜಿಕ ನ್ಯಾಯ? ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿ¨ªಾರೆ ಕುಮಾರಸ್ವಾಮಿ ಅವರು.

 

Advertisement

Udayavani is now on Telegram. Click here to join our channel and stay updated with the latest news.

Next