ವಿಶಾಖಪಟ್ಟಣ: ‘ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುವಾಗ ಆ ರಾಜ್ಯದ ಬಗ್ಗೆ ಪಾಕಿಸ್ಥಾನದ ಬಳಿ ಮಾತುಕತೆ ನಡೆಸುವ ಜರೂರತ್ತಾದರೂ ಏನಿದೆ? ಹಾಗೇನಾದರೂ ಪಾಕ್ ಬಳಿ ಮಾತನಾಡಲೇಬೇಕು ಎನ್ನುವ ಹಾಗಿದ್ದರೆ ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಯಾವಾಗ ಭಾರತಕ್ಕೆ ಬಿಟ್ಟುಕೊಡುತ್ತೀರಿ ಎಂಬುದರ ಬಗ್ಗೆ ಮಾತಾಡಬೇಕಷ್ಟೆ’.
– ಇದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಡಕ್ ಮಾತು.
ನೌಕಾ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸ ಲಾಗಿದ್ದ ಸಮಾರಂಭ ದಲ್ಲಿ ಮಾತನಾಡಿದ ಅವರು, ಬರುವ ಅಕ್ಟೋಬರ್‌ನಲ್ಲಿ ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧವಾಗಲಿದೆ ಎಂದು ಅಲ್ಲಿನ ರೈಲ್ವೇ ಸಚಿವ ಶೇಖ್ ರಶೀದ್ ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
‘ಭಾರತ ಎಂದಿಗೂ ಯಾರ ಮೇಲೂ ದಾಳಿ ಮಾಡುವುದಿಲ್ಲ. ಆದರೆ ತನ್ನ ತಂಟೆಗೆ ಬಂದವರಿಗೆ ತಕ್ಕ ಶಾಸ್ತಿ ಮಾಡದೆ ಬಿಡುವುದಿಲ್ಲ’ ಎಂದು ಪಾಕಿಸ್ಥಾನಕ್ಕೆ ಎಚ್ಚರಿಸಿದರು. ಜತೆಗೆ ನಮ್ಮ ನೆರೆರಾಷ್ಟ್ರವೊಂದು ಭಯೋತ್ಪಾದಕರಿಗೆ ಧನ ಸಹಾಯ, ತರಬೇತಿ ನೀಡಿ ನಮ್ಮ ವಿರುದ್ಧ ಛೂ ಬಿಡುತ್ತಿದೆ. ಇದು ಭವಿಷ್ಯದಲ್ಲಿ ತನಗೇ ಮಾರಕವಾಗಲಿದೆ ಎಂಬ ಅರಿವಿಲ್ಲದೆ ಇಂಥ ಕೆಲಸ ಮಾಡುತ್ತಿರುವ ಅದು, ಇನ್ನಾದರೂ ಆ ಸತ್ಯವನ್ನು ಅರ್ಥೈಸಿಕೊಳ್ಳಬೇಕಿದೆ’ ಎಂದು ಹೇಳಿದರು.
ಭಾರತ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಗೊಳಿಸುತ್ತಿದೆ ಎಂದರೆ ಅದು ಯುದ್ಧಕ್ಕಲ್ಲ, ತನ್ನ ಸುರಕ್ಷತೆಗಾಗಿ ಮಾತ್ರ. ಇದುವರೆಗೂ ಭಾರತ ಯಾವುದೇ ದೇಶದ ಮೇಲೂ ತಾನೇ ಹೋಗಿ ದಾಳಿ ನಡೆಸಿಲ್ಲ. ನಾವು ಶಾಂತಿ ಪ್ರಿಯರು. ಹಿಂದೆ ಹಲವಾರು ಮಂದಿ ಇಲ್ಲಿಗೆ ಬಂದರು, ನಮ್ಮನ್ನು ಆಳಿದರು, ನಮ್ಮನ್ನು ನಾಶ ಮಾಡಿದರು, ನಮ್ಮ ಸಂಪತ್ತನ್ನು ಲೂಟಿ ಮಾಡಿದರು, ನಮಗೆ ಮೋಸವನ್ನೂ ಮಾಡಿದರು ಎಂದು ವೆಂಕಯ್ಯ ನಾಯ್ಡು ಆಕ್ರೋಶ ಭರಿತವಾಗಿಯೇ ನುಡಿದರು.