ಬೆಂಗಳೂರು: ಪ್ಯಾರಿಸ್‌ನಲ್ಲಿ ನಡೆಯಲಿ ರುವ 2024ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿ ಇರಿಸಿಕೊಂಡು ಆಯ್ಕೆ ಮಾಡಲಾದ ರಾಜ್ಯದ 75 ಕ್ರೀಡಾಪಟುಗಳಿಗೆ ವಿದೇಶದಲ್ಲಿ ತರಬೇತಿ ಒದಗಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮ ವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡೋತ್ಸವ ಮತ್ತು ಯೋಗಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಇರುವ ಕ್ರೀಡಾಪಟುಗಳನ್ನು ಈಗಾಗಲೇ ಆಯ್ಕೆ ಮಾಡಿ ಸಮರ್ಥ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಕೆಲವರಾದರೂ ಪದಕಗಳನ್ನು ಹೊತ್ತು ತರಬೇಕು ಎನ್ನುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆಮುಂದೆ ಹೋಗಿ, ಆ ಕ್ರೀಡಾಪಟುಗಳನ್ನು ವಿದೇಶ ಗಳಿಗೆ ಕಳುಹಿಸಿ ವಿಶೇಷ ತರಬೇತಿ ಕೊಡಿಸುವ ಚಿಂತನೆ ಇದೆ. ಈ ದಿಸೆಯಲ್ಲಿ ಮುಂಬರುವ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೋಚ್‌ಗಳ ಕೊರತೆ
ರಾಜ್ಯದಲ್ಲಿ ಈಗ ಅನುಭವಿ ಕೋಚ್‌ಗಳ ಕೊರತೆ ಕಾಡುತ್ತಿದೆ. ವಿವಿಧ ಕ್ರೀಡೆಗಳಲ್ಲಿ ಅನುಭವಿ ಕೋಚ್ ಗಳು ಮುಂದೆ ಬಂದರೆ, ಅಂತಹವರಿಗೆ ಪ್ರೋತ್ಸಾಹ ನೀಡಲಾಗುವುದು. ಕಿರಿಯರ ಒಲಿಂಪಿಕ್ಸ್ ಈಗಾಗಲೇ ಯಶಸ್ವಿಯಾಗಿ ನಡೆದಿದ್ದು, ಮುಂದೆ ಮಂಗಳೂರಿನಲ್ಲಿ ಹಿರಿಯರ ಒಲಿಂಪಿಕ್ಸ್ ಏರ್ಪಡಿ ಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಎಂಟು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಆ. 15ರಂದು ಚಾಲನೆ ನೀಡಲಾಗಿದೆ. ಅದರ ಅನ್ವಯ ಪ್ರತೀ ಗ್ರಾಮದಲ್ಲಿ ತಲಾ 30 ಯುವಜನರ ಸಂಘಗಳನ್ನು ಗುರುತಿಸಿ, ಏಳೂವರೆ ಲಕ್ಷ ರೂ.ಗಳಿಂದ ಹತ್ತು ಲಕ್ಷ ರೂ.ಗಳವರೆಗಿನ ವೆಚ್ಚದ ಯೋಜನೆಗಳನ್ನು ನೀಡಿ, ಸಂಘಕ್ಕೆ ಒಂದೂವರೆ ಲಕ್ಷ ರೂ. ವರೆಗೆ ಅನುದಾನವನ್ನು ಸರಕಾರವೇ ಭರಿಸಲಿದೆ. ಅಲ್ಲದೆ ಈ ಸಂಘಗಳಿಗೆ ವಿವಿಧ ಉತ್ಪನ್ನಗಳ ತಯಾರಿಗೆ ತರಬೇತಿ, ತಯಾರಿಕೆ ಮತ್ತು ಮಾರುಕಟ್ಟೆ ಜೋಡಣೆಯನ್ನು ಕಲ್ಪಿಸುವ ಯೋಜನೆಯಿದೆ. ಸ್ವಯಂ ಉದ್ಯೋಗಿಗಳಾಗಿ ಇತರರಿಗೆ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಈ ವಿನೂತನ ಯೋಜನೆ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಂಸ್ಕೃತಿಯ ಸೊಗಡಿಗೆ ಆದ್ಯತೆ
ಕ್ರೀಡೆ ಮತ್ತು ಸಂಸ್ಕೃತಿಯ ಸೊಗಡಿರುವ ರಾಜ್ಯದ ಆಯಾ ಪ್ರದೇಶಗಳ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಉದಾಹರಣೆಗೆ, ಕರಾವಳಿ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಓಟದ ಸ್ಪರ್ಧೆ, ಹೋರಿ ಬೆದರಿಸುವ ಸ್ಪರ್ಧೆ, ಕುಸ್ತಿ, ಸೈಕಲ್ ರೇಸ್, ಮೋಟಾರ್ ಸೈಕಲ್ ರೇಸ್, ಕಾರು ರ್ಯಾಲಿಗಳು, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲಾಗುತ್ತದೆ. ಒಟ್ಟಾರೆಯಾಗಿ “ಕ್ರೀಡಾ ಕರ್ನಾಟಕ’ವನ್ನಾಗಿ ರೂಪಿಸಲು ಪ್ರಯತ್ನಗಳು ನಡೆದಿವೆ ಎಂದರು.