Advertisement

ಏಳು ವರ್ಷಗಳ ಹಿಂದಿನ ಪರಿಶ್ರಮಕ್ಕೆ ಈಗ ಸಾರ್ಥಕತೆ 

10:05 PM Sep 05, 2021 | Team Udayavani |

ಒಂದು ಅದಮ್ಯ ಕನಸಿನೊಂದಿಗೆ 2014ರ ಸೆಪ್ಟಂಬರ್‌ನಲ್ಲಿ ನೆಟ್ಟ “ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಸ್ಕೀಂ’ (ಟಾಪ್ಸ್‌) ಎಂಬ ಗಿಡ, ಈಗ ಫ‌ಲ ಕೊಡಲಾರಂಭಿಸಿದೆ. ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ  ಏಳು ಪದಕಗಳು ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ 19 ಪದಕಗಳು ಲಭಿಸಿವೆ.  ಈವರೆಗಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗಳಿಸಿದ್ದು ಕೇವಲ 12 ಪದಕ. ಈ ಬಾರಿಯ ಪ್ಯಾರಾಲಿಂಪಿಕ್ಸ್‌ ಒಂದರಲ್ಲೇ 19 ಪದಕಗಳನ್ನು ತನ್ನದಾಗಿಸಿಕೊಂಡಿರುವುದು ವಿಶೇಷ.

Advertisement

ಭಾರತದ ಸ್ವಾತಂತ್ರಾéನಂತರ ಇಲ್ಲಿಯವರೆಗೆ 19 ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದೆ. ಈಗ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌, ಭಾರತ ಭಾಗವಹಿಸಿದ 19ನೇ ಒಲಿಂಪಿಕ್ಸ್‌. 1948ರ ಲಂಡನ್‌ ಒಲಿಂಪಿಕ್ಸ್‌ನಿಂದ ಹಿಡಿದು, 2008ರ ಬೀಜಿಂಗ್‌ ಒಲಿಂಪಿಕ್ಸ್‌ವರೆಗೆ ಭಾರತ ಗಳಿಸಿದ್ದು ಕೇವಲ 15 ಪದಕಗಳು. ಅದರಲ್ಲೂ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಮೂರು ಪದಕ ಬಂದಿದ್ದು ಬಿಟ್ಟರೆ ಅದಕ್ಕೂ ಹಿಂದಿನ ಎಲ್ಲ ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಬರುತ್ತಿದ್ದುದು ಹೆಚ್ಚೆಂದರೆ ಒಂದು ಪದಕ ಮಾತ್ರ! ಅದರಲ್ಲೂ 1984ರ ಲಾಸ್‌ ಏಂಜಲೀಸ್‌, 1988ರ ಸಿಯೋಲ್‌ ಹಾಗೂ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ಗಳಲ್ಲಿ ಭಾರತದ್ದು ಸತತ ಶೂನ್ಯ ಸಾಧನೆ! ಆದರೆ ಬೀಜಿಂಗ್‌ ಒಲಿಂಪಿಕ್ಸ್‌ನಿಂದ ಭಾರತ ಕೊಂಚ ಚೇತರಿಕೆ ದಾಖಲಿಸಿತು. ಅದು 90ರ ದಶಕ ಪೂರ್ತಿ ಭಾರತದ ಇಡೀ ಯುವೋತ್ಸಾಹವನ್ನೇ ನುಂಗಿ ನೀರು ಕುಡಿದಿದ್ದ ಕ್ರಿಕೆಟ್‌ನ ಗುಂಗಿನಿಂದ ಭಾರತ ಹೊರಬರುತ್ತಿರುವುದಕ್ಕೆ ಸಾಕ್ಷಿ ಒದಗಿಸಿತು.

ಇದನ್ನು ಮನಗಂಡ ಕೇಂದ್ರ ಸರಕಾರ, ಭಾರತೀಯ ಕ್ರೀಡಾ ರಂಗಕ್ಕೆ ಹೊಸ ಕಾಯಕಲ್ಪ ನೀಡಲು ನಿರ್ಧರಿಸಿ, “ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ’ (ಟಾಪ್ಸ್‌) ಸ್ಕೀಂ ಯೋಜನೆ ಜಾರಿಗೊಳಿಸಿತು. ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಕ್ರೀಡಾಳುಗಳನ್ನು ಆಯ್ಕೆ ಮಾಡಿ, ಅವರಿಗೆ ಉನ್ನತ ಮಟ್ಟದ ತರಬೇತಿ, ಸೌಕರ್ಯಗಳನ್ನು ಕಲ್ಪಿಸುವುದೇ ಈ ಯೋಜನೆಯ ಉದ್ದೇಶ.

ಪದಕ ಗೆಲ್ಲಬಲ್ಲ ಪ್ರತಿಯೊಬ್ಬ ಕ್ರೀಡಾಪಟುವಿಗೆ ಮಾಸಿಕ 50,000 ರೂ. ವರೆಗಿನ ಭತ್ತೆ ಜತೆಗೆ ವಿಶ್ವದರ್ಜೆಯ ತರಬೇತಿ ಪಡೆಯುವ, ವಿಶ್ವ­ದರ್ಜೆಯ ಕ್ರೀಡಾ ಸಾಮಗ್ರಿಗಳನ್ನು ಹೊಂದುವ ಅನುಕೂಲವನ್ನು ಈ ಯೋಜನೆಯಡಿ ಕಲ್ಪಿಸಲಾಯಿತು. 2018-19ರಿಂದ ಇಲ್ಲಿಯವರೆಗೆ ಟಾಪ್ಸ್‌ ಯೋಜನೆಗಾಗಿ ಸುಮಾರು 765 ಕೋಟಿ ರೂ. ಮೀರಿ ಖರ್ಚು ಮಾಡಿದೆ. ಕ್ರೀಡಾಳುಗಳನ್ನು ಬೆಳೆಸಲು ಸರಕಾರ ಪಟ್ಟ ಪರಿಶ್ರಮದ ಫ‌ಲವನ್ನು ನಾವಿಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೋಡುತ್ತಿದ್ದೇವೆ.

ಇದರ ಜತೆಗೆ ಕ್ರೀಡೆಗಳ ಬಗ್ಗೆ ಬದಲಾದ ಸಾಮಾಜಿಕ ಧೋರಣೆಯೂ ಈ ಸಾಧನೆಗೆ ಪರೋಕ್ಷವಾಗಿ ತನ್ನದೇ ಆದ ಪ್ರೇರಣೆ ನೀಡಿದೆ. ಪದಕ ಗೆದ್ದವರಿಗೆ ಹಲವಾರು ಸಾಮಾಜಿಕ ಸಂಘ- ಸಂಸ್ಥೆಗಳು ಪ್ರಶಸ್ತಿ, ಫ‌ಲಕಗಳನ್ನು ನೀಡಿ ಸಮ್ಮಾನಿಸುತ್ತಿದ್ದಾರೆ. ವಿವಿಧ ರಾಜ್ಯ ಸರಕಾರಗಳು ಪದಕ ವಿಜೇತರಿಗೆ ಉತ್ತಮ ಸರಕಾರಿ ನೌಕರಿ, ಕೋಟಿ­ಗಟ್ಟಲೆ ನಗದು ಪುರಸ್ಕಾರ ನೀಡುತ್ತಿವೆ. ಕರ್ನಾಟಕ ಸರಕಾರ ಇತ್ತೀಚೆಗೆ ಸರಕಾರಿ ನೌಕರಿಗಳಲ್ಲಿ ಕ್ರೀಡಾಳುಗಳಿಗೆ ಶೇ. 2ರಷ್ಟು ಮೀಸಲಾತಿ ಕಲ್ಪಿಸಿದೆ. ಇಂಥ ಎಲ್ಲ ವಿಚಾರಗಳೂ ಭಾರತದ ಕ್ರೀಡಾ ಚಿತ್ರಣವನ್ನೇ ಬದಲಿಸಿದೆ. ಇವೆಲ್ಲದರ ಶ್ರೇಯಸ್ಸು “ಟಾಪ್ಸ್‌’ ಯೋಜನೆಗೆ ಸಲ್ಲಬೇಕಿದೆ. ಈಗ ಫ‌ಲ ಬಿಡುತ್ತಿರುವ ಮರ, ಮುಂದೆ ಹೆಮ್ಮರವಾಗಿ ಮತ್ತಷ್ಟು ಕ್ರೀಡಾಳುಗಳಿಗೆ ಆಶ್ರಯ ತಾಣವಾಗಲೆಂಬುದೇ ಎಲ್ಲರ ಹಾರೈಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next