Advertisement

Target Ilyas ; ಕಲ್ಲಾಪುವಿನಲ್ಲಿ ಸಮೀರ್‌ ಹತ್ಯೆ ಪ್ರಕರಣ: ನಾಲ್ವರು ವಶಕ್ಕೆ

01:15 AM Aug 14, 2024 | Team Udayavani |

ಉಳ್ಳಾಲ: ಟಾರ್ಗೆಟ್‌ ಇಲ್ಯಾಸ್‌ ಕೊಲೆಗೆ ಪ್ರತಿಕಾರವಾಗಿ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಕಡಪ್ಪರ ಸಮೀರ್‌ ಹತ್ಯೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ ಪೊಲೀಸರಿಗೆ, ಈ ಕೊಲೆಯಲ್ಲಿ ಐವರು ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದು, ಇಲ್ಯಾಸ್‌ ಪತ್ನಿಯ ಸಹೋದರ ಮೊಹಮ್ಮದ್‌ ನೌಷದ್‌ ಈ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಆತನ ತಂಡ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ.

Advertisement

ಕಡಪ್ಪರ ಸಮೀರ್‌ ತನ್ನ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪಂಪ್‌ವೆಲ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ತೆರಳುವ ಸಂದರ್ಭದಲ್ಲಿ ಕಲ್ಲಾಪುವಿನ ವಾಣಿಜ್ಯ ಸಂಕೀರ್ಣದ ಬಳಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಸಮೀರ್‌ನನ್ನು ಕಾರಿನಲ್ಲಿ ಬಂದಿದ್ದ ಅಪರಿಚಿತರ ತಂಡ ತಲವಾರಿನಿಂದ ತಲೆ ಮತ್ತು ಕುತ್ತಿಗೆಗೆ ಕಡಿದು ಪರಾರಿಯಾಗಿತ್ತು.ಇಲ್ಯಾಸ್‌ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿತ್ತು ಎಂಬ ಪ್ರಾಥಮಿಕ ಮಾಹಿತಿಯಂತೆ ಕಮಿಷನರ್‌ ಅನುಪಮ ಅಗರವಾಲ್‌ ನೇತೃತ್ವದ‌ ತಂಡ ಹಲವರನ್ನು ವಶಕ್ಕೆ ತೆಗೆದುಕೊಂಡು ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಕೊಲೆ ಕಣ್ಣಾರೆ ಕಂಡಿದ್ದ ನೌಷಾದ್‌: ದಾವೂದ್‌, ಸಮೀರ್‌ ಕಡಪ್ಪರ ನೇತೃತ್ವದಲ್ಲಿ 2018ರ ಜ. 13ರಂದು ಬೆಳ್ಳಂಬೆಳಗ್ಗೆ ಮಂಗಳೂರಿನ ಫ್ಲ್ಯಾಟ್‌ನಲ್ಲಿ ಇಲ್ಯಾಸ್‌ ಮಲಗಿದ್ದ ವೇಳೆಯೇ ನುಗ್ಗಿ ಕೊಲೆ ಮಾಡಿ ಪರಾರಿಯಾಗಿತ್ತು. ಮನೆಯಲ್ಲಿ ಇಲ್ಯಾಸ್‌ ಅವರ ಅತ್ತೆ ಆಸ್ಮತ್‌, ಬಾವ ಮೊಹಮ್ಮದ್‌ ನೌಷದ್‌ ಮತ್ತು ಇಲ್ಯಾಸ್‌ನ ಸಣ್ಣ ಮಗು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಆದರೆ ಕೊಲೆ ಕೇಸ್‌ 2013ರ ಡಿಸೆಂಬರ್‌ನಲ್ಲಿ ಖುಲಾಸೆಯಾದ ಹಿನ್ನೆಲೆಯಲ್ಲಿ ಇಲ್ಯಾಸ್‌ನ ತಂಡ ಪ್ರತಿಕಾರಕ್ಕಾಗಿ ಕಾದಿತ್ತು. ಕೊಲೆ ನಡೆದ ಸಂದರ್ಭದಲ್ಲಿಯೇ ಇಲ್ಯಾಸ್‌ನ ದೊಡ್ಡ ಬಾವ ಫಾರೂಕ್‌ ಕೊಲೆಗೆ ಸ್ಕಚ್‌ ರೂಪಿಸಿರುವ ಮಾಹಿತಿಯನ್ನು ಪೊಲೀಸರು ಪಡೆದು ಆ ಸಂದರ್ಭದಲ್ಲಿ ಕಾಲಿಗೆ ಶೂಟ್‌ ಮಾಡಿ ಆರೋಪಿಗಳನ್ನು ಹಿಮ್ಮೆಟ್ಟಿಸಿದ್ದರು. ಆದರೆ ಕೊಲೆಯನ್ನು ಕಣ್ಣಾರೆ ಕಂಡಿದ್ದ ನೌಷಾದ್‌ ಈ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕೊಲೆಯಲ್ಲಿ ನೌಷದ್‌ನೊಂದಿಗೆ ನಾಟೇಕಲ್‌ನ ನಿಯಾಝ್, ಬಜಾಲ್‌ನ ತನ್ವೀರ್‌, ಪಡುಬಿದ್ರೆಯ ಇಕ್ಬಾಲ್‌ ಸಹಕರಿಸಿರುವ ಮಾಹಿತಿಯಂತೆ ಆವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಮೀರ್‌ನನ್ನು ಚಿನ್ನ ದರೋಡೆ ವಿಚಾರದಲ್ಲಿ ಉಪ್ಪಳದ ತಂಡ ಕೊಲೆ ನಡೆಸಿರಬೇಕು ಎಂದು ಶಂಕಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಈ ಹತ್ಯೆ ಇಲ್ಯಾಸ್‌ ಕೊಲೆಗೆ ಪ್ರತಿಕಾರವಾಗಿ ನಡೆದಿರುವುದು ದೃಡಪಟ್ಟಿದೆ. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next