Advertisement

ಶಿರಾಡಿಯಲ್ಲಿ ಸುರಂಗ ಮಾರ್ಗ ಅನುಷ್ಠಾನದ ಗುರಿ: ಪುತ್ತೂರಿನಲ್ಲಿ ಡಿ.ವಿ. ಸದಾನಂದ ಗೌಡ

12:56 AM May 22, 2022 | Team Udayavani |

ಪುತ್ತೂರು: ಶಿರಾಡಿ ಘಾಟಿ ರಸ್ತೆಯಲ್ಲಿ 17 ಕಿ.ಮೀ. ದೂರ ಸುರಂಗ ಮಾರ್ಗ ನಿರ್ಮಾಣಕ್ಕೆ ಸರ್ವೇ ನಡೆದು ವಿಸ್ತೃತ ಯೋಜನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯ ಶೀಘ್ರ ಅನುಷ್ಠಾನವೇ ನಮ್ಮೆಲ್ಲರ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ನೈಋತ್ಯ ರೈಲ್ವೇಯ ಮೈಸೂರು ವಿಭಾಗ, ಪುತ್ತೂರು ಎಪಿಎಂಸಿಗಳ ಜಂಟಿ ಆಶ್ರಯದಲ್ಲಿ ಶನಿವಾರ ಪುತ್ತೂರು ಎಪಿಎಂಸಿ ರಸ್ತೆಯ ರೈಲ್ವೇ ಕ್ರಾಸಿಂಗ್‌ನಲ್ಲಿ ನಿರ್ಮಿಸಲಾಗುವ 13.60 ಕೋ.ರೂ. ವೆಚ್ಚದ ಅಂಡರ್‌ಪಾಸ್‌ ಯೋಜನೆಗೆ ಗುದ್ದಲಿ ಪೂಜೆ, ಕಾಮಗಾರಿಗೆ ಚಾಲನೆ, ನವೀಕೃತ ವಸತಿಗೃಹ ಉದ್ಘಾಟನೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮದ ಸಭಾವೇದಿಕೆಯಲ್ಲಿ ಅವರು ಮಾತನಾಡಿದರು.

ಅಡಿಕೆ ಬೆಳೆಗಾರ ಮುಖದಲ್ಲಿ ನಗು
ಕೇಂದ್ರ ಸರಕಾರವು ಕಳಪೆ ಅಡಿಕೆ ಆಮದು ನಿಯಂತ್ರಣ ಸಹಿತ ಹಲವು ಉಪಕ್ರಮಗಳ ಮೂಲಕ ಇಂದು ಅಡಿಕೆಗೆ ಉತ್ತಮ ಧಾರಣೆ ಸಿಗುವಂತೆ ಮಾಡಿದೆ. ನಾನು ನಕ್ಕಂತೆ ಅಡಿಕೆ ಬೆಳೆಗಾರರು ನಗುತ್ತಿದ್ದಾರೆ ಎಂದು ಡಿವಿಎಸ್‌ ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಮೋದಿ ಸರಕಾರ ಬಂದ ಬಳಿಕ ರೈಲ್ವೇ ಇಲಾಖೆಯು ವೇಗ ಪಡೆದಿದೆ ಎಂದರು. ಪುತ್ತೂರಿನ ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕ ಸಂಜೀವ ಮಠಂದೂರು ಅವರ ಸತತ ಪ್ರಯತ್ನ ಕಾರಣ ಎಂದು ಶ್ಲಾಘಿಸಿದರು.

ಸಚಿವ ಎಸ್‌. ಅಂಗಾರ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ವಿ.ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌, ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಮತ್ತು ಎಪಿಎಂಸಿ ನಿರ್ದೇಶಕರು ಉಪಸ್ಥಿತರಿದ್ದರು.

Advertisement

ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ಎನ್‌.ಎಸ್‌. ವಂದಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
ಪದ್ಮಶ್ರೀ ಪುರಸ್ಕೃತರಾದ ಮಹಾಲಿಂಗ ನಾಯ್ಕ ಅಮೈ, ಹರೇಕಳ ಹಾಜಬ್ಬ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಪ್ರಶಾಂತ ರೈ ಕೈಕಾರ, ಕೃಷಿ ಸಾಹಸಿ ಲಕ್ಷ್ಮೀ ಎರ್ಕಮನೆ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮಾನಿಸಿದರು. ರೈಲ್ವೇ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಕಾರಣಕರ್ತರಾದ ದಿನೇಶ್‌ ಮೆದು, ಡಿವಿಎಸ್‌, ನಳಿನ್‌ ಕುಮಾರ್‌, ಸಂಜೀವ ಮಠಂದೂರು ಅವರನ್ನು ಸಮ್ಮಾನಿಸಲಾಯಿತು.

 

 

Advertisement

Udayavani is now on Telegram. Click here to join our channel and stay updated with the latest news.

Next