ದೇವನಹಳ್ಳಿ: ಜಿಲ್ಲೆಯಲ್ಲಿ ಪರಿಸರ ರಕ್ಷಣೆ ಹಾಗೂ ಅರಣ್ಯ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿಯ 6 ಲಕ್ಷ ಸಸಿ ನೆಡುವ ಗುರಿಯನ್ನು ಅರಣ್ಯ ಇಲಾಖೆ ರೂಪಿಸಿದೆ. ಅರಣ್ಯ ಇಲಾಖೆ ವಾರ್ಷಿಕ ಅರಣ್ಯಾಭಿವೃದ್ಧಿ ಯೋಜನೆ ಮತ್ತು ಭವಿಷ್ಯದ ಅರಣ್ಯ ಯೋಜನೆ ಅಡಿಯಲ್ಲಿ ಒಟ್ಟು 735.33 ಎಕರೆಯಲ್ಲಿ 8, 12, 10 ಮತ್ತು 16, 14 ಮತ್ತು 20 ಅಡಿ ಎತ್ತರದ ಸಸಿ ಬೆಳೆಸಲಾಗಿದೆ.
ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಮೌಲ್ಯಯುತ ತಳಿಯ ಸಸಿಗಳನ್ನು ಅರಣ್ಯ ಕೃಷಿ ಯೋಜನೆ ಅಡಿ ನೀಡಲು ಮುಂದಾಗಿದೆ. ಹೊಸ ಸಸಿಗಳಿಗೆ ಗುಣಿ ತೋಡುವ ಕಾರ್ಯ ನಡೆದಿದೆ. 4 ತಾಲೂಕು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರಸ್ತುತ 20,266 ಚ.ಕಿ.ಮೀ. ಪ್ರದೇಶವಿದ್ದು, ಈ ಪೈಕಿ ಒಟ್ಟು 18,642 ಹೆಕ್ಟೇರ್‌ನಲ್ಲಿ ಮೀಸಲು ಪ್ರದೇಶವಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಶೇ.08.03ರಷ್ಟು ಅರಣ್ಯ ಪ್ರದೇಶವನ್ನು ಮತ್ತಷ್ಟು ವಿಸ್ತರಿಸುವ ಇಲಾಖೆ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿ 2,175.66 ಹೆಕ್ಟೇರ್ ಸಾಮಾಜಿಕ ಅರಣ್ಯ ಪ್ರದೇಶ, 16,476.26 ಮೀಸಲು ಅರಣ್ಯ ಒಟ್ಟು 18,662 ಹೆಕ್ಟೇರ್ ಅರಣ್ಯ ವಿದ್ದರೂ 09 ಲಕ್ಷ ಜನ ಸಂಖ್ಯೆ ದಾಟಿರುವ ಜಿಲ್ಲೆಯಲ್ಲಿ ಸಮಾಂತರ ಅರಣ್ಯ ಪ್ರದೇಶ ಕನಿಷ್ಠ ಶೇ.22ರಷ್ಟು ಇರಬೇಕು.
ದೊಡ್ಡಬಳ್ಳಾಪುರ 7783.60 ಹೆಕ್ಟೇರ್, ನೆಲಮಂಗಲ 3927.61 ಹೆಕ್ಟೇರ್, ಹೊಸಕೋಟೆ 3626.25 ಹೆಕ್ಟೇರ್ ಹೊರತು ಪಡಿಸಿದರೆ ದೇವನಹಳ್ಳಿ ತಾಲೂಕಿನಲ್ಲಿರುವ ಬೆಟ್ಟಕೋಟೆ 282.77, ಯತ್ತಿಗಾನಹಳ್ಳಿ 215.06, ಗಂಗಮುತ್ತನಹಳ್ಳಿ 65.95 ಒಟ್ಟು 564.33 ಹೆಕ್ಟೇರ್ ಅರಣ್ಯ ಪ್ರದೇಶ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ದೇವನಹಳ್ಳಿ ತಾ.ಅತೀ ಕಡಿಮೆ 3105.44 ಹೆಕ್ಟೇರ್‌ನಲ್ಲಿ ಮಾತ್ರವಿದೆ.
ರೈತರು, ಮುಂಗಾರಿನಲ್ಲಿ ತಮಗೆ ವಿತರಿಸುವ ಸಸಿ ನೆಟ್ಟು ಇಲಾಖೆಗೆ ಸಹಕರಿಸಬೇಕು. ಜತೆಗೆ ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿಯ ಖಾಲಿ ಜಾಗದಲ್ಲಿ ನೆಡುತೋಪು ಅಭಿವೃದ್ಧಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಆಂಥೋನಿ ಮರಿಯಪ್ಪ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ
* ಎಸ್.ಮಹೇಶ್