Advertisement

75 ಕ್ಷೇತ್ರಗಳಲ್ಲಿ ಗೆಲ್ಲುವೆವು; 2024ಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಗುರಿ

10:23 PM May 29, 2022 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ತಿಯಾದ ಮೇಲೆ ಈಗ ಜ್ಞಾನವಾಪಿ, ಮಥುರಾ, ವೃಂದಾವನ್‌, ವಿಂಧ್ಯವಾಸಿನಿ ಧಾಮ, ನೈಮಿಷ ಧಾಮದ ವಿಚಾರಗಳು ಮುನ್ನೆಲೆಗೆ ಬರಲಿವೆ. ಜತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 75ರಲ್ಲಿ ಜಯ ಸಾಧಿಸಲೇ ಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

ಲಕ್ನೋದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉತ್ತರ ಪ್ರದೇಶ ಬಿಜೆಪಿ ಘಟಕದ ಒಂದು ದಿನದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಮಾತುಗಳನ್ನಾಡಿದ್ದಾರೆ. ಗಮನಾರ್ಹವೆಂದರೆ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡ ಬಳಿಕ ನಡೆದ ಮೊದಲ ಸಮಾವೇಶ ಇದಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯ ಶುರುವಾದ ಬಳಿಕ ಕಾಶಿಯಲ್ಲಿ ಅದ್ಧೂರಿಯಾಗಿ ವಿಶ್ವನಾಥ ದೇಗುಲ ಪುನರ್‌ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ, ನೈಮಿಷ ಧಾಮದ ಅಭಿವೃದ್ಧಿ ವಿಚಾರಗಳು ಮುನ್ನೆಲೆಗೆ ಬರಲಿವೆ. ಹೀಗಾಗಿ, ಈ ನಿಟ್ಟಿನಲ್ಲಿ ನಾವೆಲ್ಲರೂ ಮುಂದೆ ಸಾಗಬೇಕಾಗಿದೆ ಎಂದು ಹೇಳಿದ್ದಾರೆ.

75 ಸ್ಥಾನಗಳು:
ಮುಂದಿನ ಲೋಕಸಭೆ ಚುನಾವಣೆಗಾಗಿ ಈಗಿನಿಂದಲೇ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ರಾಜ್ಯದ 80 ಲೋಕಸಭಾ ಕ್ಷೇತ್ರಗಳ ಪೈಕಿ 75ರಲ್ಲಿ ಜಯ ಸಾಧಿಸುವುದು ಅಗತ್ಯ. ಅದಕ್ಕಾಗಿ ಗುರಿ ಹಾಕಿಕೊಂಡು ಕೆಲಸ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೊರೊನಾ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೂಮ್ಮೆ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ ಎಂದಿದ್ದಾರೆ. 2017ರಲ್ಲಿ ಬಿಜೆಪಿ ಗೆದ್ದ ಬಳಿಕ ರಾಜ್ಯದ ಮೇಲೆ ದೇಶದ ಇತರ ಭಾಗದ ಜನರ ಅಭಿಪ್ರಾಯವೇ ಬದಲಾಗಿದೆ ಎಂದರು.

Advertisement

ತೊಂದರೆಯಾಗುತ್ತಿತ್ತು:
ಉ.ಪ್ರ.ದಲ್ಲಿನ ಧಾರ್ಮಿಕ ಸ್ಥಳಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಯಿಸಿದ ಕ್ರಮವನ್ನು ಸಮರ್ಥಿಸಿದ ಮುಖ್ಯಮಂತ್ರಿ, ಅವುಗಳಿಂದ ಜನರಿಗೆ ತೊಂದರೆಯಾಗುತ್ತಿತ್ತು. ಆ ಕಾರಣಕ್ಕಾಗಿಯೇ ಅವುಗಳನ್ನು ತೆಗೆಸಲಾಯಿತು. ಹನುಮಾನ್‌ ಜಯಂತಿ, ರಾಮ ನವಮಿ, ಈದ್‌ಉಲ್‌ಫಿತರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದವು. ಹೀಗಾಗಿ, ಉ.ಪ್ರ.ದಲ್ಲಿ ಕಾನೂನು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದರು.

2024ರ ಜನವರಿಗೆ ರಾಮ ಲಲ್ಲ
ಮೂರ್ತಿ ಸ್ಥಾಪನೆ
ಅಯೋಧ್ಯೆ:ಸದ್ಯ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ 2024ರ ಜ.24ರಂದೇ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಹೀಗೆಂದು ತಾತ್ಕಾಲಿಕ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಅವರು ಭಾನುವಾರ ತಿಳಿಸಿದ್ದಾರೆ. ಆ ದಿನ ಬಹಳ ಮಹತ್ವದ್ದು ಮತ್ತು ಪವಿತ್ರವಾದದ್ದು.

ಇಡೀ ಕ್ಷೇತ್ರದ ಕಾಮಗಾರಿ 2025ಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಿದ್ದಾರೆ. ಇದಲ್ಲದೆ, ರಾಮ ಮಂದಿರದ ಗರ್ಭಗುಡಿಯ ನಿರ್ಮಾಣ ಕಾರ್ಯ ಜೂ.1ರಿಂದ ಶುರುವಾಗಲಿದೆ. ಅದಕ್ಕಾಗಿ ಐದು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳು ಇವೆ ಎಂದು ತಿಳಿಸಿದ್ದಾರೆ.

2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next