Advertisement

ಪೂರ್ಣ ಸೇವೆಗೆ ಟಾರ್ಗೆಟ್‌ 2021

11:38 AM Jun 23, 2018 | Team Udayavani |

ಬೆಂಗಳೂರು: ಪ್ರಸ್ತುತ ಕೈಗೆತ್ತಿಕೊಂಡ 160 ಕಿ.ಮೀ. ಉದ್ದದ “ನಮ್ಮ ಮೆಟ್ರೋ’ ಮಾರ್ಗವನ್ನು 2021ರ ಅಂತ್ಯದ ವೇಳೆಗೆ ಸೇವೆಗೆ ಸಿದ್ಧಗೊಳಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಸೂಚನೆ ನೀಡಿದರು.

Advertisement

ಆರು ಬೋಗಿಯ ಮೆಟ್ರೋ ರೈಲಿಗೆ ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. 42 ಕಿ.ಮೀ. ಉದ್ದದ ಮೊದಲ ಹಂತ ಪೂರ್ಣಗೊಂಡು ಈಗಾಗಲೇ ಒಂದು ವರ್ಷ ಆಗಿದೆ. 2ನೇ ಹಂತವನ್ನು ಆದ್ಯತೆ ಮೇಲೆ ಮಾಡಿ ಮುಗಿಸಬೇಕು.

ಉಳಿದಂತೆ 2ಎ ಮತ್ತು 2ಬಿ ಅನ್ನು ಕೂಡ ತ್ವರಿತವಾಗಿ ನಿರ್ಮಿಸಬೇಕು. 2021ರ ಅಂತ್ಯಕ್ಕೆ ಸುಮಾರು 160 ಕಿ.ಮೀ. ಉದ್ದದ ಈ ಎಲ್ಲ ಮಾರ್ಗಗಳು ಸಾರ್ವಜನಿಕ ಸೇವೆಗೆ ಅಣಿಯಾಗಬೇಕು ಎಂದು ಗಡುವು ನೀಡಿದರು. ಈ ಮೊದಲು 2021ರ ಅಂತ್ಯಕ್ಕೆ ನಿಗಮವು 72 ಕಿ.ಮೀ. ಉದ್ದದ ಎರಡನೇ ಹಂತವನ್ನು ಪೂರ್ಣಗೊಳಿಸುವ ಗುರಿ ಮಾತ್ರ ಹೊಂದಿತ್ತು.

ಅಷ್ಟೇ ಅಲ್ಲ, ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಹೊರವರ್ತುಲ ಪೆರಿಫ‌ರಲ್‌ ರಸ್ತೆ ಮತ್ತು ಸ್ಯಾಟಲೈಟ್‌ ಟೌನ್‌ಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ಅನಿವಾರ್ಯ ಎಂದು ಹೇಳಿದರು. 

ಸರಿಯಾಗಿ ಒಂದು ವರ್ಷದ ನಂತರ…: ನಗರದಲ್ಲಿ ಹಲವಾರು ಸಮಸ್ಯೆಗಳಿವೆ. ಅವೆಲ್ಲವುಗಳಿಗೂ ನಿಗದಿತ ಅವಧಿಯಲ್ಲಿ ಪರಿಹಾರ ಕಲ್ಪಿಸಲಾಗುವುದು. ಮಹಿಳೆಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 2006ರ ಜೂನ್‌ 20ರಂದು ಮೊದಲ ಹಂತದ ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆ ನಡುವಿನ ಮೆಟೋ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದೆ.

Advertisement

ಬರೋಬ್ಬರಿ 12 ವರ್ಷಗಳ ನಂತರ ಅದೇ ಮಾರ್ಗದಲ್ಲಿ ಇಂದು ಹೆಚ್ಚುವರಿ ಮೂರು ಬೋಗಿಗಳ ಸೇರ್ಪಡೆಗೆ ಚಾಲನೆ ನೀಡುತ್ತಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಪ್ರಸ್ತುತ ನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ 3.5ರಿಂದ 4 ಲಕ್ಷ ಇದೆ. ಎರಡನೇ ಹಂತ ಪೂರ್ಣಗೊಂಡ ನಂತರ ನಿತ್ಯ 20 ಲಕ್ಷ ಜನ ಸಂಚರಿಸಲಿದ್ದಾರೆ.

ಅಷ್ಟರಮಟ್ಟಿಗೆ ಸಂಚಾರದಟ್ಟಣೆ ಕಡಿಮೆ ಆಗಲಿದೆ. ಆದರೆ, ಅಷ್ಟೊತ್ತಿಗೆ ಇನ್ನೂ ಎಷ್ಟು ವಾಹನಗಳು ಸೇರ್ಪಡೆಗೊಂಡಿರುತ್ತವೋ ಗೊತ್ತಿಲ್ಲ ಎಂದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹದೀìಪ್‌ಸಿಂಗ್‌ ಪುರಿ ಮಾತನಾಡಿದರು. ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಸಂಪತ್‌ರಾಜ್‌, ಉಪ ಮೇಯರ್‌ ಪದ್ಮಾವತಿ, ಬಿಬಿಎಂಪಿ ಸದಸ್ಯರಾದ ನೇತ್ರಾ ನಾರಾಯಣ್‌, ಲಕ್ಷ್ಮೀನಾರಾಯಣ್‌, ಶಿವರಾಜ್‌, ಬಿಇಎಂಎಲ್‌ ಅಧ್ಯಕ್ಷ ಡಿ.ಕೆ.ಹೋಟಾ ಉಪಸ್ಥಿತರಿದ್ದರು. 

ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು?: “ನಮ್ಮ ಮೆಟ್ರೋ’ ಮೊದಲ ಹಂತದ ಮಾರ್ಗದ ಉದ್ದ ಅಷ್ಟೇ ಇರುತ್ತದೆ. ಮೆಟ್ರೋ ರೈಲುಗಳ ಸಂಖ್ಯೆಯೂ ಈಗಿರುವಷ್ಟೇ ಇರಲಿದೆ. ಆದರೆ, ಮುಂದಿನ ಒಂದು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ದುಪ್ಪಟ್ಟಾಗಲಿದೆ! 

ಅಂದರೆ, 2019ರ ಜೂನ್‌ ವೇಳೆಗೆ ಎಲ್ಲ 50 ರೈಲುಗಳು ಆರು ಬೋಗಿಗಳಾಗಿ ಮಾರ್ಪಡಲಿವೆ. ಇದರಿಂದ ಪ್ರಸ್ತುತ ಮೂರೂವರೆ ಲಕ್ಷ ಇರುವ ಪ್ರಯಾಣಿಕರ ಸಂಖ್ಯೆ ಏಳು ಲಕ್ಷ ತಲುಪಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದರು.

ಈಗಾಗಲೇ 3 ಬೋಗಿಗಳನ್ನು ಬಿಇಎಂಎಲ್‌ ಹಸ್ತಾಂತರಿಸಿದೆ. ಮೊದಲ ಹಂತದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ಪ್ರಮಾಣಪತ್ರ ಸೇರಿದಂತೆ ಹಲವು ಪರೀಕ್ಷೆಗಳ ಅವಶ್ಯಕತೆ ಇತ್ತು. ಹಾಗಾಗಿ, ಸಾರ್ವಜನಿಕ ಸೇವೆಗೆ ಅಣಿಗೊಳಿಸಲು ಮೂರು ತಿಂಗಳು ಬೇಕಾಯಿತು ಎಂದು ಸಮಜಾಯಿಷಿ ನೀಡಿದರು. 

ಇನ್ಮುಂದೆ ಸೇರ್ಪಡೆಯಾಗುವ ಮೆಟ್ರೋ ಬೋಗಿಗಳಿಗೆ ಇದಾವುದರ ಅಗತ್ಯ ಇರುವುದಿಲ್ಲ. ಹಾಗಾಗಿ, ಉಳಿದ 147 ಬೋಗಿಗಳು ಬರುವ ವರ್ಷ ಜೂನ್‌ ಅಂತ್ಯಕ್ಕೆ ಸೇರ್ಪಡೆ ಆಗಲಿವೆ. 1,466 ಕೋಟಿ ವೆಚ್ಚದಲ್ಲಿ ಈ ಬೋಗಿಗಳು ಸಿದ್ಧಗೊಳ್ಳುತ್ತಿವೆ ಎಂದು ತಿಳಿಸಿದರು. 

ಪ್ರಸ್ತುತ ಮೊದಲ ಹಂತದಲ್ಲಿ ನಿತ್ಯ ಸರಾಸರಿ 3.50 ಲಕ್ಷ ಜನ ಪ್ರಯಾಣ ಮಾಡುತ್ತಿದ್ದು, ಸುಮಾರು ಒಂದು ಕೋಟಿ ರೂ. ಆದಾಯ ಬರುತ್ತಿದೆ. ಪ್ರಯಾಣಿಕರ ಸಂಖ್ಯೆ ಕೆಲವೊಮ್ಮೆ 4 ಲಕ್ಷ ದಾಟಿದ ಉದಾಹರಣೆಗಳೂ ಇವೆ. ಟ್ರಿಪ್‌ಗ್ಳ ಸಂಖ್ಯೆ ಆರಂಭದಲ್ಲಿ 216 ಇದ್ದದ್ದು, ಈಗ 298ಕ್ಕೆ ತಲುಪಿದೆ ಎಂದರು. 

2 ಸಾವಿರ ಜನ ಒಮ್ಮೆಲೆ ಪ್ರಯಾಣ: “ನಮ್ಮ ಮೆಟ್ರೋ’ ಸಾಮರ್ಥ್ಯ ಶನಿವಾರದಿಂದ ದುಪ್ಪಟ್ಟುಗೊಳ್ಳಲಿದ್ದು, 2000 ಜನ ಒಮ್ಮೆಲೆ ಪ್ರಯಾಣಿಸಬಹುದು! ಪ್ರಸ್ತುತ ಮೂರು ಬೋಗಿಗಳ ರೈಲಿನಲ್ಲಿ ಅಬ್ಬಬ್ಟಾ ಎಂದರೆ 975 ಜನ ಪ್ರಯಾಣಿಸಬಹುದು.

ಆದರೆ, ಆರು ಬೋಗಿಗಳ ರೈಲಿನ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ 2004. ಹೆಚ್ಚುವರಿ ಬೋಗಿಗಳನ್ನು ಒಳಗೊಂಡ ಈ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. 

ಹೆಚ್ಚು ಸಂಚಾರದಟ್ಟಣೆ ಇರುವ ಮಾರ್ಗದಲ್ಲಿ ಅಂದರೆ ಇಂದಿರಾನಗರದಿಂದ ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಈ ನೂತನ ಆರು ಬೋಗಿಗಳ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದೆ. ಉಳಿದಂತೆ ಯಥಾಪ್ರಕಾರ ಮೂರು ಬೋಗಿಗಳ ರೈಲು ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೋಗಿಗಳ ಸಂಖ್ಯೆ ದುಪ್ಪಟ್ಟಾಗುವುದರಿಂದ ಮೆಟ್ರೋ ವೇಗದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿಯೂ ಈ ರೈಲು ಸಂಚರಿಸುತ್ತದೆ ಎಂದು ತಾಂತ್ರಿಕ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಮೊದಲ ಬೋಗಿ ಮಹಿಳೆಗೆ: ಆರು ಬೋಗಿಗಳಲ್ಲಿ ಮೊದಲ ಬೋಗಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಮಹೇಂದ್ರ ಜೈನ್‌ ಸ್ಪಷ್ಟಪಡಿಸಿದರು. ಈಗಾಗಲೇ ಎಲ್ಲ ಮೆಟ್ರೋ ರೈಲುಗಳಲ್ಲಿ ಮೊದಲೆರಡು ಪ್ರವೇಶ ದ್ವಾರಗಳು ಮಹಿಳೆಯರಿಗೆ ಮೀಸಲಿವೆ. ಆರು ಬೋಗಿಗಳ ಮೆಟ್ರೋದಲ್ಲಿನ ಮೊದಲ ಬೋಗಿಯು ಈ ಮೊದಲೇ ಘೋಷಿಸಿದಂತೆ ಮಹಿಳೆಯರಿಗೆ ಮೀಸಲಿರಲಿದೆ. ಇದರಿಂದ ಮಹಿಳೆಯರು ನಿರಾತಂಕವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದರು.

ವಾರಾಂತ್ಯದಲ್ಲಿ ಲಭ್ಯ ಇಲ್ಲ!: ಆರು ಬೋಗಿಗಳ ಮೆಟ್ರೋ ರೈಲು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಸೇವೆ ಸಲ್ಲಿಸಲಿದೆ. ಹೀಗಾಗಿ ವಾರಾಂತ್ಯದ ದಿನಗಳಲ್ಲಿ ಯಥಾ ಪ್ರಕಾರ ಮೂರು ಬೋಗಿ ಹೊಂದಿರುವ ಮೆಟ್ರೋ ರೈಲುಗಳು ಸಂಚರಿಸಲಿವೆ. ಹೆಚ್ಚುವರಿ ಬೋಗಿಗಳು ಪೂರೈಕೆ ಆಗುವವರೆಗೂ ಇದು ಮುಂದುವರಿಯಲಿದೆ.

* 2004 – 6 ಬೋಗಿಗಳಲ್ಲಿ ಹೋಗಬಹುದಾದ ಪ್ರಯಾಣಿಕರು
* 975 – ಪ್ರಯಾಣಿಕರು ಈಗಿರುವ ಮೆಟ್ರೋ ಸಾಮರ್ಥ್ಯ
* 8.83 ಕೋಟಿ ರೂ. – ಪ್ರತಿ ಒಂದು ಬೋಗಿ ನಿರ್ಮಾಣಕ್ಕೆ ತಗಲುವ ವೆಚ್ಚ
* 1,466 ಕೋಟಿ ರೂ.- 150 ಬೋಗಿಗಳ ನಿರ್ಮಾಣಕ್ಕೆ ತಗುಲುವ ವೆಚ್ಚ

Advertisement

Udayavani is now on Telegram. Click here to join our channel and stay updated with the latest news.

Next