ಈ ಹಿಂದೆ “ತರ್ಲೆ ವಿಲೇಜ್’ ಸಿನಿಮಾ ನಿರ್ದೇಶಿಸಿದ್ದ ಕೆ.ಎಂ.ರಘು, ಹಾಸ್ಯ ನಟ ಮಿತ್ರ ಅವರನ್ನು ಪ್ರಧಾನವಾಗಿಟ್ಟುಕೊಂಡು “ಪರಸಂಗ’ ಎಂಬ ಚಿತ್ರ ಮಾಡಿದ್ದರು. ಆ ಬಳಿಕ ರಘು ಮತ್ತೂಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಯಾವ ಬಗೆಯ ಚಿತ್ರ, ಅದರ ಹೆಸರೇನು, ಯಾರೆಲ್ಲಾ ಇರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ.
ಹೌದು, ನಿರ್ದೇಶಕ ಕೆ.ಎಂ.ರಘು ಈಗ “ತರ್ಲೆ ಕಾಲೇಜ್’ ಎಂಬ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಹಿಂದೆ “ತರ್ಲೆ ವಿಲೇಜ್’ ಮೂಲಕ ಹಳ್ಳಿ ಸೊಗಡನ್ನು ಕಟ್ಟಿಕೊಡುವ ಮೂಲಕ ತಕ್ಕಮಟ್ಟಿಗೆ ಗಮನಸೆಳೆದಿದ್ದ ರಘು, ಈಗ “ತರ್ಲೆ ಕಾಲೇಜ್’ ಮೂಲಕ ಯುವಕರ ಕಥೆ ಹೇಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ್ ಎನ್. ಪೂಜಾರಿ ಅವರು ನಿರ್ಮಾಪಕರು. ಅವರಿಗೆ ಇದು ಮೊದಲ ಸಿನಿಮಾ.
ಚಿತ್ರದ ಪ್ರಮುಖ ಆಕರ್ಷಣೆ ಅಂದರೆ, ಖಳನಟ ರವಿಶಂಕರ್. ಹಾಗಂತ, ರವಿಶಂಕರ್ ಇಲ್ಲಿ ವಿಲನ್ ಅಲ್ಲ. ಅವರಿಲ್ಲಿ ಪ್ರಿನ್ಸಿಪಾಲ್ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ತರ್ಲೆ ಹುಡುಗರ ಕಥೆ ಇಲ್ಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಚಿತ್ರದ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ಕೆ.ಎಂ.ರಘು, “ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕಿರಿಕ್ ಹುಡುಗರನ್ನು ನೋಡಿದ ಜನರಿಗೆ “ತರ್ಲೆ ಕಾಲೇಜ್’ನಲ್ಲಿ ಅಂಥದ್ದೇ ಹುಡುಗರನ್ನು ಕಾಣಬಹುದು.
ಹಾಗಂತ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾಲೇಜಿನಲ್ಲಿ ಲಾಸ್ಟ್‌ಬೆಂಚ್‌ನಲ್ಲಿ ಕುಳಿತುಕೊಳ್ಳುವ ಸ್ಟೂಡೆಂಟ್ಸ್‌ಗೆ ದಡ್ಡರು ಎಂಬ ಹಣೆಪಟ್ಟಿ ಇದೆ. ಅಂತಹ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.35 ರಷ್ಟು ಮಾತ್ರ ಅಂಕ ಪಡೆದು, ಕೇವಲ ತೇರ್ಗಡೆಯಾಗುವುದು ಸಹಜ. ಇಲ್ಲಿ ಹೇಳಹೊರಟಿರುವ ವಿಷಯ ಕೂಡ ಶೇ.35 ರಷ್ಟು ಅಂಕ ಪಡೆದ ಲಾಸ್ಟ್ ಬೆಂಚ್ ಸ್ಟುಡೆಂಟ್ಸ್ ಬಗ್ಗೆ. ಶೇ.35 ರಷ್ಟು ಮಾರ್ಕ್ಸ್ ಪಡೆದ ತರ್ಲೆ ಹುಡುಗರನ್ನು ತಿದ್ದಿ, ಅವರಿಗೊಂದು ಹೊಸ ವೇದಿಕೆ ರೂಪಿಸುವ ಪ್ರಿನ್ಸಿಪಾಲ್ ಕಥೆ ಇಲ್ಲಿದೆ.
ಕೇವಲ ಶೇ.35 ರಷ್ಟು ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ಹಾಗೂ ಕಾಲೇಜ್‌ಗೆ ಅಡ್ಮಿಷನ್ ಮಾಡಿಸಿಕೊಳ್ಳುವ ಪ್ರಿನ್ಸಿಪಾಲ್, ಶೇ.36 ರಷ್ಟು ಅಂಕ ಪಡೆದ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಯಾಕೆ, ಶೇ.35 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನೇ ತಮ್ಮ ಹಾಸ್ಟೆಲ್, ಕಾಲೇಜ್‌ಗೆ ಸೇರಿಸಿಕೊಳ್ಳುತ್ತಾರೆ ಎಂಬುದೇ ಕಥೆ. ಇಲ್ಲಿ ನಾಲ್ವರು ಹೀರೋಗಳಿದ್ದಾರೆ. ಅವರಿಗೆ ನಾಲ್ವರು ನಾಯಕಿಯರೂ ಇರುತ್ತಾರೆ’ ಎಂದು ವಿವರ ಕೊಡುವ ನಿರ್ದೇಶಕರು, ಹೊಸ ಪ್ರತಿಭಾವಂತರೇ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ.
ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್‌ಗಳನ್ನು ಯಾವತ್ತೂ ಕಡೆಗಣಿಸಬೇಡಿ ಎಂಬ ಸಣ್ಣ ಸಂದೇಶದೊಂದಿಗೆ ಹಾಸ್ಯ ಬೆರೆಸಿ, ಒಂದೊಳ್ಳೆಯ ಚಿತ್ರ ಕಥೆಯೊಂದಿಗೆ ಸಿನಿಮಾ ಮಾಡುತ್ತಿರುವ ನಿರ್ದೇಶಕರು, ಈಗಾಗಲೇ ಸ್ಕ್ರಿಪ್ಟ್ ಮುಗಿಸಿದ್ದು, ಸೆಟ್‌ಗೆ ಹೋಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರೀಕರಣಕ್ಕೆ ಹೋಗುವ ಯೋಚನೆ ಅವರದು.