Advertisement

ಶಿಷ್ಟಾಚಾರ ಪಾಲಿಸದ ಅಧಿಕಾರಿಗಳಿಗೆ ತರಾಟೆ

08:43 PM Dec 11, 2019 | Lakshmi GovindaRaj |

ತುಮಕೂರು: ಅಧಿಕಾರಿಗಳು ಶಿಷ್ಟಾಚಾರ ಅನುಸರಿಸಬೇಕೆಂದು ಹಲವಾರು ಬಾರಿ ಹೇಳಿದರೂ ಅನುಸರಿಸುತ್ತಿಲ್ಲ. ಕೃಷಿ ಭವನ ನಿರ್ಮಾಣ ಕುರಿತ ಮಾಹಿತಿ ನೀಡುವಂತೆ ತಿಳಿಸಿದರೂ ಮಾಹಿತಿ ನೀಡದ ಭೂಸೇನಾ ನಿಗಮದ ಅಧಿಕಾರಿಗೆ ನೋಟಿಸ್‌ ನೀಡುವಂತೆ ಸಿಇಒಗೆ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್‌ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಮಾಹಿತಿ ಕೇಳಿದಾಗ ತಿಳಿಸಬೇಕೆಂದು ಹಲವಾರು ಬಾರಿ ತಿಳಿಸಿದ್ದೇವೆ. ಜನಪ್ರತಿನಿಧಿಗಳಿಗೆ ಏನು ಕೆಲಸ ನಡೆಯುತ್ತಿದೆ ಎನ್ನುವುದು ತಿಳಿಯದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

Advertisement

ವಾಪಸ್‌ ಹೋಗಿ: ಹಲವು ಬಾರಿ ಕರೆಮಾಡಿ ಮಾಹಿತಿ ನೀಡುವಂತೆ ತಿಳಿಸಿದರೂ ಈವರೆಗೂ ಮಾಹಿತಿ ನೀಡಿಲ್ಲವೆಂದು ಭೂಸೇನಾ ನಿಗಮದ ಅಧಿಕಾರಿ ಹನುಮಂತರಾಯಪ್ಪ ವಿರುದ್ಧ ಗರಂ ಆದ ಜಿಪಂ ಅಧ್ಯಕ್ಷೆ “ಎಲ್ಲಿಂದ ಬಂದಿದ್ದಿರಾ, ಎಷ್ಟು ತಿಂಗಳಾಯ್ತು’ ಎಂದು ಪ್ರಶ್ನಿಸಿದಾಗ, “ನಾನು ಬಂದು ಆರು ತಿಂಗಳಾಯ್ತು, ಚಿತ್ರದುರ್ಗದಿಂದ ಬಂದಿದ್ದೇನೆ’ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು. ಶಿಷ್ಟಾಚಾರ ಗೊತ್ತಿಲ್ಲವೆಂದರೆ ವಾಪಸ್‌ ಹೋಗಿ ಎಂದು ಖಡಕ್ಕಾಗಿ ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ನೀರಿನ ಸಮಸ್ಯೆ ಹೆಚ್ಚಳ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌, ಜಿಲ್ಲೆಯಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 34,9,407 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 4 ಬಹು ಗ್ರಾಮ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, 1 ಬಹುಗ್ರಾಮ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಪಾವಗಡ ತಾಲೂಕಿನಲ್ಲಿ 30 ಆರ್‌ಒ ಪ್ಲಾಂಟ್‌ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಸಣ್ಣ-ಪುಟ್ಟ ಸಮಸ್ಯೆಗಳಿದ್ದರೆ ತುರ್ತಾಗಿ ಬಗೆಹರಿಸಬೇಕು ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಪ್‌ ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಾಗಿದೆಯೇ ಎಂಬ ಮಾಹಿತಿ ನೀಡಬೇಕು ಎಂದು ಸಿಇಒ ಶುಭಾಕಲ್ಯಾಣ್‌ಎಲ್ಲಾ ಇಒಗಳಿಗೆ ಸೂಚಿಸಿದರು. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ತುಮಕೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಚಿರತೆ ಮಹಿಳೆಯನ್ನು ತಿಂದಿದ್ದು, ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಡಿಎಫ್ಒ ಗಿರೀಶ್‌, ಮೃತಪಟ್ಟ ಮಹಿಳೆಗೆ ಈಗಾಗಲೇ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, 5 ವರ್ಷದವರೆಗೂ 2 ಸಾವಿರ ರೂ.ನಂತೆ ಮಾಸಾಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಕಣಕುಪ್ಪೆ ಮತ್ತು ದೊಡ್ಡಮರಳವಾಡಿ ವ್ಯಾಪ್ತಿಯಲ್ಲಿ ಒಟ್ಟು 16 ಬೋನ್‌ ಇಡಲಾಗಿದೆ. ಚಿರತೆ ಕಾಣಿಸಿಕೊಳ್ಳುವ ವ್ಯಾಪ್ತಿಯಲ್ಲಿ ಬೋನ್‌ ಅಳವಡಿಸಿ ಮತ್ತು ದಟ್ಟವಾದ ಪೊದೆ ಸ್ವತ್ಛಗೊಳಿಸಬೇಕು ಎಂದು ಉಪಾಧ್ಯಕ್ಷೆ ಸೂಚಿಸಿದರು.

Advertisement

ವಿಮೆ ಹಣ ಶೀಘ್ರ: ತೋಟಗಾರಿಕೆ ಇಲಾಖೆಯಡಿ ಹವಾಮಾನ ಆಧಾರಿತ ವಿಮೆ ಯೋಜನೆಯಲ್ಲಿ ಒಟ್ಟು 16388 ಪ್ರಕರಣಗಳ ಪೈಕಿ 6922 ಪ್ರಕರಣಗಳಿಗೆ ಒಟ್ಟು 13,6,451 ಲಕ್ಷ ರೂ. ರೈತರ ಖಾತೆಗಳಿಗೆ ಪಾವತಿಯಾಗಿದ್ದು, ಬಾಕಿಯಿರುವ 9466 ಪ್ರಕರಣಗಳಿಗೆ 26,2,266 ಲಕ್ಷ ರೂ. ರೈತರಿಗೆ ಪಾವತಿಯಾಗಬೇಕು. ಪ್ರಕರಣಗಳಿಗೆ ಬೆಳೆ ಸಮೀಕ್ಷೆಗೂ ಹಾಗೂ ನೋಂದಣಿ ಸಮಯದಲ್ಲಿ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆ ಆಗದ ಕಾರಣ ರೈತರಿಗೆ ಹಣ ಪಾವತಿಯಾಗಿಲ್ಲ.

ಬೆಳೆ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಹಣ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌.ನಟರಾಜ್‌ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 287 ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು, ಅದರಲ್ಲಿ 139 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿದ್ದು, 144 ಪ್ರಗತಿಯಲ್ಲಿದೆ ಎಂದು ಹೇಳಿದರು.

ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ನವ್ಯಬಾಬು ಮಾತನಾಡಿ, ಸ್ವತ್ಛಭಾರತ್‌ ಮಿಷನ್‌ ಯೋಜನೆಯಡಿ ಶೌಚಗೃಹ ದುರಸ್ತಿಗೆ ಕ್ರಮವಹಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ ಕಲಿಕೆಗೆ ಒತ್ತು ನೀಡಬೇಕು ಎಂದರು. ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು. ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದಾರೆ. ಕೆಲವು ಮಹಿಳೆಯರು ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಹೆಚ್ಚುವರಿ ಪ್ರವೇಶ: ತುಮಕೂರು ಹಾಗೂ ತಿಪಟೂರು ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ಬೇಡಿಕೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೇಡಿಕೆ ಇಲ್ಲದಿರುವ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ಹೆಚ್ಚು ಬೇಡಿಕೆ ಇರುವ ವಿದ್ಯಾರ್ಥಿನಿಲಯಗಳಿಗೆ ವರ್ಗಾಯಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಅನುಮತಿ ಪಡೆದು ಒಟ್ಟು 665 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರನಾಯ್ಕ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬೆಳಗ್ಗೆ-ಸಂಜೆ ವಿಶೇಷ ತರಗತಿ ಮಾಡಲಾಗುತ್ತಿದೆ. ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಗುರುತಿಸಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವ ಕೋಣೆ ಸ್ವತ್ಛವಾಗಿಡಲಾಗುತ್ತಿದೆ. ಅಡುಗೆ ಮಾಡಲು ಆರ್‌ಒ ಪ್ಲಾಂಟ್‌ಗಳ ನೀರನ್ನೇ ಬಳಸಲು ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ.
-ಎಂ.ಆರ್‌.ಕಾಮಾಕ್ಷಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next