ಸಿರಿಗೆರೆ: ಭಾರತೀಯ ಭಾಷೆಗಳಿಗೆ ವಿಶೇಷ ಮನ್ನಣೆ ಇದ್ದು, ಸಂಸ್ಕೃತ ಭಾಷೆ ಜಗತ್ತಿನ ಮೊದಲ ಭಾಷೆಯಂತೆ ಕಂಗೊಳಿಸುತ್ತಿದೆ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಹಾಗೂ ಬೆಂಗಳೂರಿನ ವಾಗ್ದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ. ಹರೀಶ್ ಹೇಳಿದರು.
ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ “ಆದಿಕವಿ’ ಹಾಗೂ “ವಾಗ್ದೇವಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ಸಂಶೋಧನಾ ಆಳಗಳಿಗೆ ಇಳಿದು ಪಕ್ವವಾಗಿವೆ. ಜಗತ್ತಿನಲ್ಲಿ ಶಬ್ದಗಳಿಗೆ ಮೊಟ್ಟ ಮೊದಲು ಅಕ್ಷರ ರೂಪ ಕೊಟ್ಟವರು ಭಾರತೀಯರು ಎಂಬ ಹೆಮ್ಮೆ ನಮ್ಮದು. ಅಂತಃಶಕ್ತಿಯನ್ನು ನಮ್ಮೊಳಗೆ ಬೆಳೆಸಿಕೊಳ್ಳುವುದರಿಂದ ದೊಡ್ಡದಾಗಿ ಬೆಳೆಯಲು ಸಾಧ್ಯ. ಭಾರತೀಯರು ಜಗತ್ತಿನ ಅತಿ ಬುದ್ಧಿವಂತ ಸಂಕುಲ. ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಭಾರತೀಯರು ಮೂಲ ಸತ್ವಗಳನ್ನು ಇನ್ನೂ ಭದ್ರವಾಗಿ ಬೆಳೆಸಿಕೊಳ್ಳಬೇಕು ಎಂದರು.
“ಆದಿಕವಿ’ ಪ್ರಶಸ್ತಿ ಸ್ವೀಕರಿಸಿದ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಾಹಿತ್ಯ, ಸಂಸ್ಕೃತಿಯ ಆರಾಧಕರಾದ ಅಖೀಲ ಭಾರತೀಯ ಸಾಹಿತ್ಯ ಪರಿಷದ್ ಪ್ರೀತಿ ಮತ್ತು ಮಮತೆಯಿಂದ ನೀಡುತ್ತಿರುವ “ಆದಿಕವಿ’ ಪ್ರಶಸ್ತಿಯನ್ನು ನಮ್ಮ ಮಠದ ಪರಿಶುದ್ಧ ಮನಸ್ಸಿನ ಭಕ್ತರು ಮತ್ತು ಅಭಿಮಾನಿಗಳ ಅನುಪಸ್ಥಿತಿಯಲ್ಲಿ ಸ್ವೀಕರಿಸುತ್ತಿದ್ದೇವೆ. ಈ ಪ್ರಶಸ್ತಿ ಪ್ರಕಟವಾದ ನಂತರ ಇದನ್ನು ಸ್ವೀಕರಿಸುವುದರಿಂದ ಲೌಕಿಕ ಭಾವಗಳಿಗೆ ನಾವು ಒಳಗಾಗುತ್ತೇವೇನೋ ಎಂಬ ಭಾವ ನಮ್ಮನ್ನು ಕಾಡಿತ್ತು ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಲು ತುದಿಗಾಲಲ್ಲಿ ನಿಂತಿದ್ದ ಸಾವಿರಾರು ಭಕ್ತರ ಮನವೊಲಿಸಿದ್ದೇವೆ. ಕಳೆದ ಹತ್ತು ತಿಂಗಳುಗಳಿಂದ ತೀವ್ರವಾಗಿ ಕಾಡುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯದ ಹೊಣೆಗಾರಿಕೆಯನ್ನು ನಿರ್ವಹಿಸುವ ಸಂದರ್ಭ ಒದಗಿಬಂದಿದೆ. ಹಾಗಾಗಿ ಈ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಯಿತು. ಇಲ್ಲದಿದ್ದರೆ ಅಭಿಮಾನಿ ಶಿಷ್ಯರು ನೂರಾರು ವಾಹನಗಳಲ್ಲಿ ಇಂದು ಸಿರಿಗೆರೆಗೆ ಆಗಮಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಕೆ.ಆರ್. ವೇಣುಗೋಪಾಲ ಮಾತನಾಡಿ, ತರಳಬಾಳು ಶ್ರೀಗಳು ನಾಡಿನಾದ್ಯಂತ ಸುಮಾರು 200ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದನ್ನು ಕೇಳಿ ನಾನು ಬೆರಗಾಗಿದ್ದೇನೆ. ಅವರಿಗೆ ಕಂಪ್ಯೂಟರ್ ಮತ್ತು ಸಂಸ್ಕೃತದಲ್ಲಿ ಆಳವಾದ ಜ್ಞಾನವಿದೆ ಎಂದರು. ವಿದ್ಯಾರ್ಥಿಗಳು ಸಾಮಾಜಿಕ ವ್ಯಸನಗಳಿಂದ ದೂರವಿರಬೇಕು. ಯೋಗ, ಧ್ಯಾನ, ಪ್ರಾಣಾಯಾಮ, ನಡಿಗೆ, ಉತ್ತಮ ಆಹಾರ, ಸುಖಕರವಾದ ನಿದ್ರೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಖ್ಯಾತ ಸಂಸ್ಕೃತ ವಿದ್ವಾಂಸ ಡಾ| ಶಂಕರ್ ರಾಜಾರಾಮನ್ ಅವರಿಗೆ “ವಾಗ್ದೇವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ನಾಕೀಕೆರೆ ತಿಪ್ಪೇಸ್ವಾಮಿ, ವಿದ್ಯಾಂಸ ಶಂಕರ್ ರಾಜಾರಾಮನ್ ಪರಿಚಯ ಮಾಡಿಕೊಟ್ಟರು. ಅಖೀಲ ಭಾರತೀಯ ಸಾಹಿತ್ಯ ಪರಿಷದ್ ಪದಾಧಿಕಾರಿಗಳಾದ ರಘುನಂದನ್ ಭಟ್, ಡಾ| ಹನುಮಂತ ಮಳಲಿ, ಜಯರಾಮ್ ಪಾಲ್ಗೊಂಡಿದ್ದರು.