Advertisement

ಕೈಕಂಬ : 4ನೇ ಮಹಡಿಯಲ್ಲಿ ಟೆರೇಸ್‌ ಕೃಷಿ ಮಾಡಿದ ಕಟ್ಟಡ ಮಾಲಕ

11:41 PM Mar 02, 2021 | Team Udayavani |

ಬಂಟ್ವಾಳ: ಕೃಷಿ ಮಾಡ ಬೇಕಾದರೆ ಸ್ಥಾಕಷ್ಟು ಸ್ಥಳ ಬೇಕು, ನಗರ ಪ್ರದೇಶದಲ್ಲಿ ಇದು ಅಸಾಧ್ಯವೆಂಬುದು ಸಾಕಷ್ಟು ಮಂದಿಯ ಅಭಿಪ್ರಾಯ. ಆದರೆ ಬಿ.ಸಿ.ರೋಡ್‌ನ‌ ಕೈಕಂಬದಲ್ಲಿ ವಾಣಿಜ್ಯ ಸಂಕೀರ್ಣವೊಂದರ ಮಾಲಕ 4ನೇ ಮಹಡಿಯ ಮೇಲಿನ ಖಾಲಿ ಸ್ಥಳದಲ್ಲಿ ಹತ್ತಾರು ಬಗೆಯ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ.

Advertisement

ಕೈಕಂಬ ಜಂಕ್ಷನ್‌ನಲ್ಲಿರುವ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ಮಾಲಕ ಡಾ| ಗೋವರ್ಧನ್‌ ರಾವ್‌ ಅವರೇ ಟೆರೇಸ್‌ ಕೃಷಿ ಮಾಡಿರುವ ಕೃಷಿಕ. ಇವರ ಟೆರೇಸ್‌ ಮೇಲಿರುವಷ್ಟು ಗಿಡಗಳು ಎಕರೆಗಟ್ಟಲೇ ಸ್ಥಳವಿರುವ ಕೃಷಿಕರ ಬಳಿಯೂ ಇರಲಾರದು! 4ನೇ ಮಹಡಿಗೆ ಮಣ್ಣು, ಗೊಬ್ಬರವನ್ನು ಹೊತ್ತುಕೊಂಡು ಹೋಗಿಯೇ ಕೃಷಿ ಮಾಡಿರುವುದು ಇವರ ಹೆಗ್ಗಳಿಕೆ.

ಡಾ| ಗೋವರ್ಧನ್‌ ರಾವ್‌ ಸೌದಿ ಅರೇಬಿಯಾದ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿದ್ದು, 2019ರಲ್ಲಿ ನಿವೃತ್ತಿ ಹೊಂದಿ ಮನೆಗೆ ಆಗಮಿಸಿದ್ದರು. ಕೈಕಂಬದ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲೇ ಅವರ ಮನೆಯಿದ್ದು, ಪ್ರಾರಂಭದಲ್ಲಿ ಮನೆಯ ಮಹಡಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದರು. ಬಳಿಕ ಸಮಯ ಕಳೆಯುವುದಕ್ಕಾಗಿ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ಕೃಷಿಯನ್ನು ಆರಂಭಿಸಿದರು.

4 ಸಾವಿರ ಚ.ಅಡಿ ವಿಸ್ತೀರ್ಣ
ವಾಣಿಜ್ಯ ಸಂಕೀರ್ಣದ 4ನೇ ಮಹಡಿಯಲ್ಲಿ ಸುಮಾರು 4 ಸಾವಿರ ಚದರ ಅಡಿ ವಿಸೀರ್ಣದಲ್ಲಿ ಇವರ ಕೃಷಿ ವಿಸ್ತರಿಸಿಕೊಂಡಿದೆ.

ವಿವಿಧ ಬಗೆಯ ತರಕಾರಿ, ಹೂಗಳು
ಟೊಮ್ಯಾಟೊ, ಹಿರೇಕಾಯಿ, ಸೋರೆ ಕಾಯಿ, ಅಲಸಂಡೆ, ಅರಿವೆ, ಬಸಳೆ, ಮೆಣಸು, ಗೆಣಸು, ಬದನೆ, ಈರುಳ್ಳಿ ಮೊದಲಾದ ತರಕಾರಿ ಗಿಡಗಳಿವೆ. ಚೆಂಡು ಹೂವು, ಗುಲಾಬಿ ಸೇರಿದಂತೆ ಹತ್ತಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಚಿಕ್ಕು, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬುನೇರಳೆ, ಪೇರಳೆ, ಬುಗರಿ ಹಣ್ಣು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳು ಕೂಡ ಇವರ ಬಳಿ ಇದ್ದು, ಈಗಾಗಲೇ ಫಸಲು ಬಿಡುತ್ತಿವೆ.

Advertisement

ಸಾವಯವ ಗೊಬ್ಬರ
ಮಣ್ಣು, ಕೊಳೆತ ತರಕಾರಿ, ಬೆಲ್ಲ, ಸೆಗಣಿ ಮೊದಲಾದ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಳಿದಂತೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕುವ ಕಾರ್ಯ ನಿರ್ವಹಿಸುತ್ತಾರೆ. ಪ್ರಾರಂಭದಲ್ಲಿ ಮಣ್ಣು, ಗೊಬ್ಬರವನ್ನು ತಾವೇ ಹೊತ್ತುಕೊಂಡು 86 ಮೆಟ್ಟಿಲು ಹತ್ತಿ ಕೊಂಡು ಹೋಗುತ್ತಿದ್ದು, ಪ್ರಸ್ತುತ ಅದಕ್ಕೆ ರಾಟೆಯ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಗೆ ಬಿಸಿಲು ಬೀಳದಂತೆ ರಕ್ಷಿಸಲು ಹಸಿರು ನೆಟ್‌ನ ವ್ಯವಸ್ಥೆ ಕೂಡ ಮಾಡಿದ್ದಾರೆ.

– ಕಿರಣ್ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next