ಮೈಸೂರು ಜಿಲ್ಲೆಯಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ರಾಜಕೀಯ ಪಕ್ಷಗಳು ತಮ್ಮಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ನಂಜನಗೂಡು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಪಿರಿಯಾಪಟ್ಟಣ ಟಿಎಪಿಸಿಎಂಎಸ್‌ಯನ್ನು 20ವರ್ಷ ಬಳಿಕ ಜೆಡಿಎಸ್ ತನ್ನ ತೆಕ್ಕಗೆ ತೆಗೆದುಕೊಂಡಿದೆ. ಹುಣಸೂರಿನಲ್ಲಿ ಶಾಸಕ ಜಿ. ಟಿ.ದೇವೇಗೌಡ ಅವರ ಪುತ್ರ ಹರೀಶ್‌ಗೌಡ ಬಣ ಮೇಲುಗೈ ಸಾಧಿಸಿದೆ.ಎಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಹಿನ್ನಡೆಯಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತರು ಹೆಚ್ಚು ಸ್ಥಾನ ಪಡೆದಿದ್ದಾರೆ.
ಎಚ್.ಡಿ.ಕೋಟೆ:ಕಾಂಗ್ರೆಸ್ ಬೆಂಬಲಿತರಿಗೆ ಮುಖಭಂಗ :
ಎಚ್.ಡಿ.ಕೋಟೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭಾರೀ ಮುಖಭಂಗ ಅನುಭವಿಸಿದ್ದಾರೆ.
ಸಂಘದ ಎ ಶ್ರೇಣಿಯ 4 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡಿದ್ದಾರೆ. ಎ ಶ್ರೇಣಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಈಶ್ವರ್, ಗುಣಪಾಲ್, ಧನಂಜಯ ಹಾಗೂ ಶಿವಸ್ವಾಮಿ ಗೆಲುವು ಸಾಧಿಸಿದ್ದಾರೆ.
ಬಿ ಶ್ರೇಣಿಯ 8 ಸ್ಥಾನಗಳ ಪೈಕಿ ಜೆಡಿಎಸ್ -4, ಬಿಜೆಪಿ-3 ಹಾಗೂ ಕಾಂಗ್ರೆಸ್ 1 ಸ್ಥಾನ ಮಾತ್ರ ಪಡೆದುಕೊಂಡಿದೆ. ಬಿಶ್ರೇಣಿಯಲ್ಲಿಜೆಡಿಎಸ್‌ಬೆಂಬಲಿತಅಭ್ಯರ್ಥಿಗಳಾದ ಕೆಂಚಮ್ಮ, ನೂರ್ ಅಹಮ್ಮದ್, ಭುಜಂಗನಾಯ್ಕ, ಯೋಗ ನರಸಿಂಹೇಗೌಡ ಜಯಗಳಿಸಿದ್ದಾರೆ. ಇನ್ನು ಬಿಜೆಪಿ ಬೆಂಬಲಿತರಾಗಿದ್ದ ಮಾದಯ್ಯ ಹಾಗೂ ಬಸವರಾಜು ಹಾಗೂ ಲಲಿತಮ್ಮ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿದ್ದ ಸ್ಪರ್ಧಿಸಿದ್ದ ಮಾದಪ್ಪ ಆಯ್ಕೆಯಾಗಿದ್ದಾರೆ. ಈ ಚುನಾವಣೆಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಆರ್. ಮಂಜುನಾಥ್ ಕರ್ತವ್ಯ ನಿರ್ವಹಿಸಿದರೆ, ಸರ್ಕಲ್‌ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಿದ್ದರು.
ಅವ್ಯವಸ್ಥೆ ಆಗರ: ಪಟ್ಟಣದಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪಕ್ಕದ ರೈಸ್ ಮಿಲ್ ಸಭಾಂಗಣದಲ್ಲಿ ಮತದಾನಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿರಲಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ಪಕ್ಷಗಳ ಪರವಾಗಿ ರಸ್ತೆ ಬದಿಯಲ್ಲಿಯೇ ಶಾಮಿಯಾನಗಳನ್ನು ಅಳವಡಿಸಿ,ರಸ್ತೆಯ ಎರಡು ಬದಿಗಳಲ್ಲಿ ಮತಯಾಚನೆ ಮಾಡುತ್ತಿದ್ದರಿಂದ ವಾಹನಗಳ ಸಂಚಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬೈಕ್ ಸವಾರರು ಕೆಲ ಕಾಲ ಸಾಕಷ್ಟು ಕಿರಿಕಿರಿ ಅನುಭವಿಸಿದರು. ರಾಜಕೀಯ ಪಕ್ಷಗಳ ನಾಯಕ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. ಮತದಾನ ನಡೆಯುತ್ತಿದ್ದಾಗ ಪಕ್ಷಗಳ ಬೆಂಬಲಿತರು,ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ತಪ್ಪಿದ ಅನಾಹುತ: ರಸ್ತೆ ಮಾರ್ಗವಾಗಿ ಬರುತ್ತಿದ್ದ ಎತ್ತಿನ ಗಾಡಿಯೊಂದು ಮತದಾನದ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಜನಸಂದಣಿ ಮತ್ತು ಜನರ ಕೂಗಾಟಕ್ಕೆ ಬೆದರಿದ ಹೆತ್ತುಗಳು ದಿಕ್ಕಾಪಾಲಾಗಿ ಓಡಲಾರಂಭಿಸಿದವು.ಆ ಸಂದರ್ಭದಲ್ಲಿ ಸಾರ್ವಜನಿಕರು ರಾಸುಗಳನ್ನು ಹಿಡಿದು ಎತ್ತಿನಗಾಡಿಯನ್ನು ನಿಯಂತ್ರಿಸಲು ಯತ್ನಿಸಿದಾಗ ಮತ್ತಷ್ಟು ಬೆದರಿ, ಎತ್ತಿನ ಗಾಡಿ ಸಮೇತ ಕಂಗೆಟ್ಟು ದಿಕ್ಕಾಪಾಲಾಗಿ ಓಡಿ, ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದವು. ಇದರಿಂದ ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ನಂಜನಗೂಡು:ಕಾಂಗ್ರೆಸ್ ಜಯಭೇರಿ :
ನಂಜನಗೂಡು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಬಂಡಾಯ ಎದ್ದಿದ್ದ ಕಾಂಗ್ರೆಸ್ ಬೆಂಬಲಿತರು (ಡಾ.ಎಚ್ .ಸಿ.ಮಹದೇವಪ್ಪ ಬಣ) ಒಂದು ಸ್ಥಾನವನ್ನೂ ಗೆಲ್ಲಲಾಗದೆ ಸೋಲು ಅನುಭವಿಸಿದ್ದಾರೆ. ಬಿಜೆಪಿಯಿಂದ ಮಾಜಿ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತ್ರ ಗೆದ್ದಿದ್ದಾರೆ.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿ ಶ್ರೇಣಿ ಯಿಂದ 1,022 ಮತ ಹಾಗೂ ಎ ಶ್ರೇಣಿಯಿಂದ 27 ಮತಗಳಿದ್ದು, ಎಲ್ಲವೂ ಚಲಾವಣೆಯಾದವು. ಬಿಜೆಪಿಯ ಸಿಂಧುವಳ್ಳಿಕೆಂಪಣ್ಣ ಹಾಗೂ ಕಾಂಗ್ರೆಸ್ ನ ಕುರಹಟ್ಟಿ ಮಹೇಶ್ ಬಣದ ನಡುವೆ ನೇರ ಹಣಾಹಣಿ ನಡೆದಿದ್ದು, ಎಚ್.ಸಿ.ಮಹದೇವಪ್ಪನವರ ಬೆಂಬಲಿಗರ ಬಣ ಮೊದಲ ಬಾರಿಗೆಕಣಕ್ಕೆ ಇಳಿದಿತ್ತು. ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಎ ಶ್ರೇಣಿಯ ಎಲ್ಲಾ 4 ಸ್ಥಾನಗಳನ್ನೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪಡೆದುಕೊಂಡರು. ಬಿ ಶ್ರೇಣಿಯ 8 ಸ್ಥಾನಗಳ ಪೈಕಿ ಕಾಂಗ್ರೆಸ್ 7 ಹಾಗೂ ಬಿಜೆಪಿ 1 ಸ್ಥಾನ ಪಡೆದಿದೆ.
ಎ ಶ್ರೇಣಿ:ಕಾಂಗ್ರೆಸ್ ಬೆಂಬಲಿತರಾದ ಹಳ್ಳಿಕೆರೆ ಹುಂಡಿ ಶಿವಕುಮಾರ್, ಕಸುವಿನಹಳ್ಳಿಯ ಕೆ.ಎಂ. ಶಿವಮೂರ್ತಿ, ಹುಳಿಮಾವಿನ ಪರಶಿವಮೂರ್ತಿ, ಗೆಜ್ಜಗನಹಳ್ಳಿಯ ಮಹೇಶ್ ಗೆಲುವು ಸಾಧಿಸಿದ್ದಾರೆ.
ಬಿ ಶ್ರೇಣಿ: ಸಾಮಾನ್ಯ ಕ್ಷೇತ್ರದಿಂದ ಕೆ.ಜಿ.ಮಹೇಶ್ ಕುರಹಟ್ಟಿ, ನಂಜನಗೂಡು ನಗರ ಕ್ಷೇತ್ರದಿಂದ ಎನ್.ಎಂ.ಮಂಜುನಾಥ್, ಮೀಸಲು ಕ್ಷೇತ್ರದಿಂದ ವಿಜಯಕುಮಾರ್, ಮಹಿಳಾ ಕ್ಷೇತ್ರದಿಂದ ಮಂಜುಳಾ ಮತ್ತು ಸುನಂದ ಬಸವರಾಜು, ಎಸ್‌ಟಿ ಮೀಸಲಿನಿಂದ ಸರ್ವೇಶ, ಬಿಸಿಎಂಎನಿಂದ ಕೆ.ರಾಜು,ಬಿಜೆಪಿಯಿಂದ ಸಾಮಾನ್ಯ ಕ್ಷೇತ್ರದಿಂದ ಸಿಂಧುವಳ್ಳಿ ಕೆಂಪಣ್ಣ ಜಯ ಗಳಿಸಿದರು.
ಪಿರಿಯಾಪಟ್ಟಣ: 20 ವರ್ಷ ಬಳಿಕ ಜೆಡಿಎಸ್ ತೆಕ್ಕೆಗೆ :
ಪಿರಿಯಾಪಟ್ಟಣ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೀನಾಯವಾಗಿ ಸೋಲನುಭವಿಸಿದ್ದಾರೆ.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್‌ನ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. 6 ಸಾಮಾನ್ಯ ಕ್ಷೇತ್ರಗಳಿಗೆ (ಎ ವರ್ಗ) ಜೆಡಿಎಸ್ ಬೆಂಬಲಿತ ಕೆ.ಕುಮಾರ, ಪಿ.ವಿ.ಜಲೇಂದ್ರ,ಜವರಪ್ಪ, ಎಚ್.ಡಿ.ವಿಜಯ, ಎಸ್.ವಿ.ತಿಮ್ಮೇಗೌಡ, ಮುಕೇಶ್ ಕುಮಾರ್, ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಸರ್ವಮಂಗಳಾ, ಸುನೀತಾ, ಪರಿಶಿಷ್ಟ ಜಾತಿ ಮೀಸಲಿನಲ್ಲಿ ಎಸ್.ರಾಮು, ಪರಿಶಿಷ್ಟ ಪಂಗಡ ಮೀಸಲಿನಲ್ಲಿ ತಿಮ್ಮನಾಯಕ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲಿನಲ್ಲಿ ಡಿ.ಎ. ನಾಗೇಂದ್ರ, ಮತ್ತು ಕಾಂಗ್ರೆಸ್‌ನ ಪಿ.ಎಂ. ಮಹದೇವ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್ ಮಾತ ನಾಡಿ, ಕಳೆದ 20 ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಟಿಎಪಿಸಿಎಂಎಸ್ ಆಡಳಿತ ಮಂಡಳಿಯನ್ನು ಜೆಡಿಎಸ್ ಅಭ್ಯರ್ಥಿಗಳುತಮ್ಮ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದುರಾಡಳಿತ, ಭ್ರಷ್ಟಾಚಾರ ನಡೆದಿದ್ದರಿಂದ ಜನರು ರೋಸಿ ಹೋಗಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತರಿಗೆ ಅಭೂತಪೂರ್ವ ಗೆಲುವನ್ನು ನೀಡುವ ಮೂಲಕ ಭ್ರಷ್ಟಚಾರಿಗಳನ್ನು ಕಿತ್ತೂಗೆದಿದ್ದಾರೆ.
ನೂತನ ನಿರ್ದೇಶಕರು ರೈತರಿಗೆ ಸಕಾಲದಲ್ಲಿ ರಸಗೊಬ್ಬರ, ಬಿತ್ತನೆ ಜೀಜಗಳು ಮತ್ತಿತರಸೌಲಭ್ಯ ನೀಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಹುಣಸೂರು: ಹರೀಶ್‌ಗೌಡ ಬಣಮೇಲುಗೈ :
ಹುಣಸೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಪುತ್ರ ಹರೀಶ್‌ಗೌಡ ಅವರ ಬೆಂಬಲಿತ ತಂಡ ಮೇಲುಗೈ ಸಾಧಿಸಿದೆ.
ಇದೇ ಪ್ರಥಮ ಬಾರಿಗೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಆಯ್ಕೆಯಾಗುವ ಮೂಲಕ ಜೆಡಿಎಸ್ ಭಾರೀ ಮುಖಭಂಗ ಅನುಭವಿಸಿದೆ. ಹರೀಶ್‌ಗೌಡ ಬಣವು7 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ನಗರದಬಾಲಕರಪದವಿಪೂರ್ವಕಾಲೇಜಿನಲ್ಲಿ ಸ್ಥಾಪಿಸಿದ್ದ 5 ಮತಗಟ್ಟೆಗಳಲ್ಲಿ 12 ನಿರ್ದೇಶಕರ ಸ್ಥಾನಕ್ಕೆ ಮತದಾನ ನಡೆಯಿತು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ಪ್ರತಿನಿಧಿಸಿದ್ದ ನಂತರದಲ್ಲಿ ಕಳೆದ ನಾಲ್ಕುದಶಕಗಳಿಂದ ಜೆಡಿಎಸ್ ತೆಕ್ಕೆಯಲ್ಲಿದ್ದ ಟಿಎಪಿಸಿಎಂಎಸ್ ಇದೇ ಪ್ರಥಮ ಬಾರಿಗೆ ಮೂರು ಪಕ್ಷಗಳ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಈ ಚುನಾವಣೆಯನ್ನು ಶಾಸಕ ಎಚ್ .ಪಿ.ಮಂಜುನಾಥ್, ಜಿ.ಡಿ. ಹರೀಶ್‌ಗೌಡ ಹಾಗೂ ಎಂಎಲ್‌ಸಿ ಎಚ್. ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೀನಾಯ ಸೋಲುಅನುಭವಿಸಿದ್ದು, ಹಾಲಿ ಅಧ್ಯಕ್ಷ ವೆಂಕಟೇಶ್ ಮಾತ್ರ ಆಯ್ಕೆಗೊಂಡರು.
ಅವಿರೋಧವಾಗಿ ಆಯ್ಕೆ: ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ.ಸಿ.ಪೆಂಪೇಗೌಡ, ಶ್ರೀಗೌಡ, ಪ್ರೇಮಕುಮಾರ್ ಹಾಗೂ ರೇವಣ್ಣಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ವೆಂಕಟೇಶ್ ಜಿ.ಎಚ್.ವೆಂಕಟೇಶ್ (705), ಎಚ್. ಎನ್.ಚಂದ್ರಶೇಖರ್ (718) ಮತಪಡೆದು ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಎಚ್.ಟಿ.ಬಾಬು (572), ರಮೇಶ (543), ಬಸವಲಿಂಗಯ್ಯ (493) ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲಿನಿಂದ ನಾಗರಾಜು ಬಿ. (564) ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ರತ್ನಾ ಬಿ.ಎಸ್.(586), ಸುಜಾತ (535) ಮತಗಳಿಸಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಐ.ಇ. ಬಸವರಾಜ್ ಕಾರ್ಯನಿರ್ವಹಿಸಿದರು. ದೇವರಾಜ ಮೂರ್ತಿ ಇದ್ದರು. ವೃತ್ತ ನಿರೀಕ್ಷಕ ಪೂವಯ್ಯ, ಎಸ್.ಐ.ಲತೇಶ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಒಟ್ಟು 1337 ಸದಸ್ಯರ ಪೈಕಿ 1,272 ಮಂದಿ ಮತಚಲಾಯಿಸಿದ್ದು, ಶೇ.95.13ರಷ್ಟುಮತದಾನ ನಡೆದಿದೆ. 143 ಮತಗಳು ತಿರಸ್ಕೃತಗೊಂಡು, 1129 ಮತಗಳು ಸಿಂಧು ಆಗಿದೆ ಎಂದು ತಹಶೀಲ್ದಾರ್ ಬಸವರಾಜ್ ತಿಳಿಸಿದರು