ಭಾರತೀನಗರ: ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರುಕಟ್ಟೆ ಸಂಘ (ಟಿಎಪಿಸಿಎಂಎಸ್)ದ ಚುನಾವಣೆ ಸೆ.30ರಂದು ನಡೆಯಲ್ಲಿದೆ. ಮುಖಂಡರು ಹಾಗೂ ಕಾರ್ಯಕರ್ತತರೇ ಒಮ್ಮತದಿಂದ ಜಾ.ದಳ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಕೆ.ಎಂ.ದೊಡ್ಡಿಯ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿ, ಎಲ್ಲರೂ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಜಾ.ದಳ ಪಕ್ಷವನ್ನು ಬಲಪಡಿಸಬೇಕು. ಈ ಹಿಂದೆ ಆಯ್ಕೆ ಮಾಡಿದ ಅಭ್ಯರ್ಥಿಗಳು ಪಕ್ಷದಿಂದ ಗೆದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇನೆ ಎಂದರು.
ಎಲ್ಲರಿಗೂ ಅವಕಾಶ: ಮುಂದೆ ಸ್ಥಳೀಯ ಚುನಾವಣೆಗಳು ಬರಲಿದ್ದು, ಎಲ್ಲರಿಗೂ ಅವಕಾಶ ಸಿಗಲಿದೆ. ಕಾರ್ಯಕರ್ತರಿಂದ ಜಾ.ದಳ ಪಕ್ಷ ಗಟ್ಟಿಯಾಗಿದ್ದು, ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭ. ಜಿಲ್ಲೆಯಲ್ಲಿಯೇ ಮದ್ದೂರು ಟಿಎಪಿಸಿಎಂಎಸ್ ಮುಂಚೂಣಿಯಲ್ಲಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಅಭ್ಯರ್ಥಿಗಳ ಆಯ್ಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಪಕ್ಷಕ್ಕಾಗಿ ಕಾರ್ಯಕರ್ತರು ಶ್ರಮ: ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಪಕ್ಷಕ್ಕಾಗಿ ದುಡಿದ ಹೆಚ್ಚು ಕಾರ್ಯಕರ್ತರಿದ್ದಾರೆ. ಆದ್ದರಿಂದ ಎಲ್ಲರೂ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಒಗ್ಗಟ್ಟಿದ್ದರೆ ಪಕ್ಷಕ್ಕೆ ಬಲಬರುತ್ತದೆ. ಆ ನಿಟ್ಟಿನಲ್ಲಿ ಶಾಸಕರು ಅಭ್ಯರ್ಥಿಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಮದ್ದೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಮರಿ, ಜಾ.ದಳ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಕೆಸ್ತೂರು ದಾಸೇಗೌಡ, ನಗರಕೆರೆ ರಾಮಲಿಂಗಯ್ಯ, ನ.ಲಿ.ಕೃಷ್ಣ, ಎಚ್.ಎಂ.ಮರಿಮಾದೇಗೌಡ, ದೇವರನಹಳ್ಳಿ ವೆಂಕಟೇಶ್, ಕ್ಯಾತಘಟ್ಟದ ತಿಮ್ಮರಾಜು, ಸಬ್ಬನಹಳ್ಳಿ ಹೊನ್ನೇಗೌಡ, ಕೆ.ಟಿ.ಶೇಖರ್ ಹಾಜರಿದ್ದರು.