Advertisement

ಉಡುಪಿ:ಹೊಟೇಲ್‌ಗ‌ಳಿಗೆ ತಟ್ಟಿದ ನೀರಿನ ಬಿಸಿ –ಹೆಚ್ಚಿದ ಟ್ಯಾಂಕರ್‌ಗಳ ಓಡಾಟ

06:36 PM Mar 20, 2023 | Team Udayavani |

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಹೊಟೇಲ್‌ ಗಳಿಗೆ ನೀರಿನ ಬಿಸಿ ತಟ್ಟಲಾರಂಭಿಸಿದೆ. ಈಗಾಗಲೆ ಬಿಸಿಲಿನ ತಾಪಮಾನಕ್ಕೆ ಜಲಮೂಲಗಳು ಬರಿದಾಗುತ್ತಿದ್ದು, ಹೊಟೇಲ್‌ ಮಾಲಕರು ನೀರಿನ ಟ್ಯಾಂಕರ್‌ ಮೊರೆ ಹೋಗುತ್ತಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ನೀರಿನ ಸಮಸ್ಯೆ ಇಷ್ಟೊಂದು ಗಂಭೀರ ಮಟ್ಟದಲ್ಲಿ ಇರಲಿಲ್ಲ.

Advertisement

ರವಿವಾರ ಮುಂಜಾನೆ ಸುರಿದ ಸಣ್ಣ ಮಳೆ ಆಶಾಭಾವ ಮೂಡಿಸಿದರೂ ಮುಂದಿನ ಪರಿಸ್ಥಿತಿ ಅಂದಾಜಿಸುವುದು ತುಸು ಕಷ್ಟವೇ. ಒಂದೆರಡು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಲ್ಲಿ ನೀರಿನ ಸಮಸ್ಯೆಯಿಂದ ಪಾರಾಗಬಹುದು. ಈಗಾಗಲೆ ಕೆಲವು ಎತ್ತರದ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಹಿರಿಯಡಕದಲ್ಲಿ ಸ್ವರ್ಣಾನದಿಗೆ ಕಟ್ಟಲಾದ ಬಜೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಶಿರೂರು ಡ್ಯಾಂನಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ಇಳಿದಿರುವುದು ಇನ್ನೊಂದು ಆತಂಕ ಸೃಷ್ಟಿಸಿದೆ. ಸದ್ಯ ಜೂನ್‌ ತಿಂಗಳ ವರೆಗೆ ನೀರಿಗೆ ಸಮಸ್ಯೆಯಾಗದಂತೆ ನಗರಸಭೆ ಸಾರ್ವ ಜನಿಕರಿಗೆ ಅಭಯ ನೀಡಿದೆ. ಆದರೂ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರುತ್ತಿದೆ.

ಮಣಿಪಾಲ, ಉಡುಪಿ, ಮಲ್ಪೆ ವ್ಯಾಪ್ತಿಯಲ್ಲಿ ಸಣ್ಣ ಹೊಟೇಲ್‌, ಕ್ಯಾಂಟಿನ್‌, ರೆಸ್ಟೋರೆಂಟ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಲಾಡ್ಜ್ ಸೇರಿ ಒಟ್ಟು 1500 ಸಂಸ್ಥೆಗಳು ಕಾರ್ಯಚರಿಸುತ್ತಿದೆ. ನಿತ್ಯ 7ರಿಂದ 8 ಎಂಎಲ್‌ಡಿಯಷ್ಟು ನೀರಿನ ಬಳಕೆ ಪ್ರಮಾಣ ಹೊಟೇಲ್‌ ಉದ್ಯಮ ಅಗತ್ಯವಾಗಿದೆ. ನಗರಸಭೆ ನೀರಿನ ಸಂಪರ್ಕ ಹೊಂದಿರುವ ಹೊಟೇಲ್‌ಗ‌ಳಿಗೆ ಸದ್ಯದ ಸಿಗುತ್ತಿರುವ ನೀರು ಎಲ್ಲಿಯೂ ಸಾಲುತ್ತಿಲ್ಲ. ಬಹುತೇಕ ಹೊಟೇಲ್‌ ಸ್ವಂತ ಜಲಮೂಲವನ್ನು ಹೊಂದಿದ್ದರೂ ಅಲ್ಲಿಯೂ ನೀರು ಸಂಪೂರ್ಣ ಬರಿದಾಗಿದ್ದು, ಹೊಟೇಲ್‌ ಮಾಲಕರಲ್ಲಿ ಆತಂಕ ಉಂಟು ಮಾಡಿದೆ. ಇತ್ತ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಕರೆ ಮಾಡಿದರೂ ಅಗತ್ಯ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಹೊಟೇಲ್‌ ಮಾಲಕರು. ಅಲ್ಲದೇ ಸರ್ವಿಸ್‌ ಅಪಾರ್ಟ್‌ಮೆಂಟ್‌, ಪಿಜಿ ನಡೆಸುವವರಿಗೂ
ನೀರಿನ ಸಮಸ್ಯೆ ದೊಡ್ಡ ತಲೆ ನೋವು ಆಗಿ ಪರಿಣಮಿಸಿದೆ.

ಹೆಚ್ಚಿದ ಟ್ಯಾಂಕರ್‌ಗಳ ಓಡಾಟ
ನೀರಿನ ಕೊರತೆಯಾಗುತ್ತಿದ್ದಂತೆ ಎಲ್ಲ ಕಡೆಗಳಿಂದಲೂ ಖಾಸಗಿ ಟ್ಯಾಂಕರ್‌ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ 12 ಸಾವಿರ ಲೀ. ಟ್ಯಾಂಕರ್‌ ನೀರಿಗೆ 1,600 ರೂ. ದರ ವಿಧಿಸಿ ನೀರನ್ನು ಮಾರಾಟ ಮಾಡಲಾಗುತ್ತದೆ. ಪ್ರಮುಖ ಜಲಮೂಲವಾಗಿರುವ ಇಂದ್ರಾಳಿ ಮೂರ್ನಾಲ್ಕು ಬಾವಿಗಳಿಂದ ನೀರನ್ನು ತೆಗೆದು ನಗರದ ಹಲವು ಕಡೆಗಳಿಗೆ ನೀರು ಪೂರೈಸುತ್ತಾರೆ ಟ್ಯಾಂಕರ್‌ ಮಾಲಕರು. ಅಪಾರ್ಟ್‌ಮೆಂಟ್‌, ಹೊಟೇಲ್‌ಗ‌ಳಿಂದ ನಿತ್ಯ 30ರಿಂದ 40 ಕರೆಗಳು ಟ್ಯಾಂಕರ್‌ ಮಾಲಕರಿಗೆ ಬರುತ್ತಿದೆ ಆದರೆ ಬೇಡಿಕೆಯಷ್ಟು ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಟ್ಯಾಂಕರ್‌ ಮಾಲಕರು.

ಕೃಷ್ಣ ಮಠಕ್ಕೆ ಸದ್ಯಕ್ಕಿಲ್ಲ ನೀರಿನ ಸಮಸ್ಯೆ
ಉಡುಪಿ ಶ್ರೀ ಕೃಷ್ಣಮಠದಲ್ಲಿ ಅಡುಗೆ, ಸ್ವಚ್ಛತೆ, ದಿನ ಬಳಕೆಗೆ ಸಂಬಂಧಿಸಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಗತ್ಯತೆ ಇದ್ದು, ಮಿತ ಬಳಕೆಗೆ ಒತ್ತು ನೀಡಲಾಗುತ್ತಿದೆ. ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ನಗರಸಭೆ ನೀರು ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಸದ್ಯದ ನೀರಿನ ಬಳಕೆ ಮತ್ತು ಅಗತ್ಯತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಟ್ಯಾಂಕರ್‌ ನೀರು ತರಿಸುವ ಬಗ್ಗೆ ಪರ್ಯಾಯ ಶ್ರೀಗಳು ಚಿಂತನೆ ನಡೆಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿದೆ.

Advertisement

ಪರಿಸ್ಥಿತಿ ಸುಧಾರಣೆ ಕಾಣುವ ವಿಶ್ವಾಸ
ನಗರದಲ್ಲಿ ಈಗಾಗಲೆ ಕೆಲವು ಹೊಟೇಲ್‌ಗ‌ಳಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ರವಿವಾರ ಕೊಂಚ ಮಳೆಯಾಗಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಾಣುವ ವಿಶ್ವಾಸವಿದೆ. ಈಗಾಗಕೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ನಗರಸಭೆ ನೀರು ಪೂರೈಕೆ ಪ್ರಮಾಣವು ಕಡಿಮೆಯಾದ ಹಿನ್ನೆಲೆಯಲ್ಲಿ ಬಹುತೇಕ ಹೊಟೇಲ್‌ ಮಾಲಕರಿಗೆ ಹೊಟೇಲ್‌ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. ಹೆಚ್ಚಿನವರು ಖಾಸಗಿ ಟ್ಯಾಂಕರ್‌ ಗಳ ಮೂಲಕ ನೀರು ತರಿಸುತ್ತಿದ್ದಾರೆ. -ಡಾ| ತಲ್ಲೂರು ಶಿವರಾಮ ಶೆಟ್ಟಿ,
ಅಧ್ಯಕ್ಷರು, ಜಿಲ್ಲಾ ಹೊಟೇಲ್‌ ಮಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next