Advertisement

ಹಳ್ಳಿಗಳ ಮನೆಗಳಿಗೂ ಕುಡಿಯಲು ನಳ್ಳಿ ನೀರು

01:52 AM Sep 18, 2020 | mahesh |

ಕುಂದಾಪುರ: ನಗರಗಳ ಮಾದರಿಯಲ್ಲಿ ಗ್ರಾಮಾಂತರದಲ್ಲಿ ಪ್ರತಿ ಮನೆಗೂ ನಳ್ಳಿ ನೀರಿನ ಸಂಪರ್ಕ ನೀಡಬೇಕೆಂಬ ಕೇಂದ್ರ ಸರಕಾರದ ಜಲಜೀವನ ಮಿಷನ್‌ (ಹರ್‌ ಘರ್‌ ಜಲ್‌) ಯೋಜನೆ ಈ ವರ್ಷವೇ ಕಾರ್ಯರೂಪಕ್ಕೆ ಬರಲಿದ್ದು 2020-21ನೇ ಸಾಲಿಗೆ ದ.ಕ., ಉಡುಪಿ ಜಿಲ್ಲೆಗೆ ಅನುದಾನ ಬಂದಿದೆ.

Advertisement

ಏನಿದು ಜಲಜೀವನ
2024ರ ಒಳಗೆ ದೇಶದ ಗ್ರಾಮಾಂತರ ಪ್ರದೇಶದ ಪ್ರತಿಮನೆಯೂ ನಳ್ಳಿಯ ಮೂಲಕ ಶುದ್ಧ ಕುಡಿಯುವ ನೀರು ಪಡೆಯಬೇಕೆಂದು ಬಯಸುವ ಯೋಜನೆ ಇದಾಗಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗುವುದು, ಕಲುಷಿತ, ಫ್ಲೋರೈಡ್‌ ಪೂರಿತ ನೀರು ಸೇವಿಸಿ ರೋಗ ರುಜಿನ ಉಂಟಾಗುವುದನ್ನು ತಡೆಯಲು, ಒಬ್ಬ ವ್ಯಕ್ತಿಗೆ ಕನಿಷ್ಠ 55 ಲೀ.ನಂತೆ 365 ದಿನವೂ ನೀರು ಒದಗಿಸಲಾಗುತ್ತದೆ. ಶೇ. 45 ಕೇಂದ್ರದ ಪಾಲಾಗಿದ್ದು ಶೇ. 45 ರಾಜ್ಯ ಸರಕಾರ ನೀಡಲಿದೆ. ಶೇ. 10 ಸ್ಥಳೀಯ ಗ್ರಾ.ಪಂ. ಸಂಪನ್ಮೂಲದಿಂದ ಭರಿಸಬೇಕಿದೆ. ರಾಜ್ಯದಲ್ಲಿ 15 ಲಕ್ಷ ಮನೆಗಳಿಗೆ ಸಂಪರ್ಕ ನೀಡಲು ಕೇಂದ್ರ 1,150 ಕೋ.ರೂ. ಅನುದಾನ ನೀಡಿದೆ. ಪ್ರಾರಂಭದಲ್ಲಿ ಜಲಮೂಲ ಲಭ್ಯ ಇರುವ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ನಳ್ಳಿ ನೀರಿಗೆ ಮೀಟರ್‌ ಅಳವಡಿಸಲಾಗುತ್ತದೆ. ಬಳಸಿದ ನೀರಿಗೆ ಪಂಚಾಯತ್‌ಗೆ ಹಣ ಪಾವತಿಸಬೇಕಿದೆ.

ಬಹುತೇಕ ಮನೆಗಳಲ್ಲಿಲ್ಲ
ಕೇಂದ್ರ ಸರಕಾರ ಬಜೆಟ್‌ನಲ್ಲಿ 3.6 ಲಕ್ಷ ಕೋ.ರೂ.ಗಳನ್ನು ಈ ಯೋಜನೆಗಾಗಿ ಘೋಷಿಸಿತ್ತು. ದೇಶದ ಗ್ರಾಮಾಂತರದ 18.9 ಕೋಟಿ ಮನೆಗಳ ಪೈಕಿ 5.38 ಕೋಟಿ ಮನೆಗಳಿಗಷ್ಟೇ ನಳ್ಳಿ ಸಂಪರ್ಕ ಇದೆ. 13.54 ಕೋಟಿ ಅಂದರೆ ಶೇ. 71ರಷ್ಟು ಮನೆಗಳಿಗೆ ಸಾರ್ವಜನಿಕ ನಳ್ಳಿ ನೀರಿಲ್ಲ. ಸೆ. 8ರ ಅಂಕಿ-ಅಂಶದಂತೆ ರಾಜ್ಯದಲ್ಲಿ 89.61 ಲಕ್ಷ ಮನೆಗಳ ಪೈಕಿ 25.9 ಲಕ್ಷ ಮನೆಗಳಿಗೆ ನಳ್ಳಿ ನೀರಿದೆ. 63.6 ಲಕ್ಷ ಮನೆಗಳಿಗೆ ಸಂಪರ್ಕವಾಗಬೇಕಿದೆ. ದ.ಕ. ಜಿಲ್ಲೆಯಲ್ಲಿ 2.9 ಲಕ್ಷ ಮನೆಗಳ ಪೈಕಿ 1.46 ಲಕ್ಷ ಮನೆಗಳಿಗೆ ನಳ್ಳಿ ನೀರಿದ್ದರೆ, ಉಡುಪಿ ಜಿಲ್ಲೆಯಲ್ಲಿ 2.44 ಲಕ್ಷ ಮನೆಗಳ ಪೈಕಿ 66 ಸಾವಿರ ಮನೆಗಳಲ್ಲಿ ಮಾತ್ರ ನಳ್ಳಿ ಸಂಪರ್ಕ ಇದೆ. ದ.ಕ.ದಲ್ಲಿ ಶೇ. 50 ಹಾಗೂ ಉಡುಪಿಯಲ್ಲಿ ಶೇ. 27 ಮನೆಗಳು ಸ್ಥಳೀಯಾಡಳಿತದಿಂದ ನೀರು ಪಡೆಯುತ್ತವೆ. ಇಡೀ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತ್ಯಂತ ಕಡಿಮೆ ಶೇ. 6ರಷ್ಟು ಮನೆಗಳಿಗೆ ಸಂಪರ್ಕ ಹೊಂದಿದೆ.

ಅನುದಾನ
ದ.ಕ. ಜಿಲ್ಲೆಯ 215 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನವಾಗಬೇಕಿದ್ದು 160 ಕೋ.ರೂ. ಬಂದಿದೆ. ಉಡುಪಿ ಜಿಲ್ಲೆಗೆ 236 ಕೋ.ರೂ. ಬಂದಿದ್ದು 250 ಗ್ರಾಮಗಳಲ್ಲಿ ಅನುಷ್ಠಾನವಾಗಲಿದೆ. ಯೋಜನೆ 2023ರಲ್ಲಿ ಪೂರ್ಣವಾಗಬೇಕಿದ್ದು ಉಳಿಕೆಯಾಗುವ ಮನೆಗಳ ಸಂಪರ್ಕಕ್ಕೆ ಇನ್ನೆರಡು ವರ್ಷಗಳಲ್ಲಿ ಕಂತಿನಲ್ಲಿ ಅನುದಾನ ಬರಲಿದೆ. ಯೋಜನೆಯಲ್ಲಿ ಈಗ ಕೆರೆ, ಬಾವಿ, ಕೊಳವೆಬಾವಿಯಂತಹ ಜಲಮೂಲ ಸೃಷ್ಟಿಗೆ ಹಣ ಇರುವುದಿಲ್ಲ. ಆದರೆ ಜಲಮರುಪೂರಣ, ನೀರಿನ ಮೂಲದ ರಕ್ಷಣೆ, ಮಳೆ ನೀರು ಸಂಗ್ರಹ, ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಸೇರಿದಂತೆ ಜಲಸಂಪನ್ಮೂಲ ವೃದ್ಧಿಗೆ ಇದೇ ಯೋಜನೆ ರೂಪುರೇಷೆಗಳನ್ನು ಒಳಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮನೆಗಳಷ್ಟೇ ಅಲ್ಲದೇ ಪಂಚಾಯತ್‌ ಕಟ್ಟಡ, ಶಾಲೆ, ಅಂಗನವಾಡಿ, ಆಸ್ಪತ್ರೆ, ಸಮೂಹ ವಸತಿಯ ಕಟ್ಟಡಗಳಿಗೂ ನೀರು ದೊರೆಯಲಿದೆ.

250 ಗ್ರಾಮಗಳಲ್ಲಿ ಅನುಷ್ಠಾನಕ್ಕಾಗಿ 236 ಕೋ.ರೂ. ಅನುದಾನ ಬಂದಿದ್ದು ಪಂಚಾಯತ್‌ ಹಂತದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ.
ಪ್ರೀತಿ ಗೆಹಲೋಟ್‌, ಉಡುಪಿ ಜಿ.ಪಂ. ಸಿಇಒ

Advertisement

160 ಕೋ.ರೂ. ಅನುದಾನ ಮಂಜೂರಾಗಿದ್ದು 215 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.
ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ,

55 ಲೀ. ಒಬ್ಬ ವ್ಯಕ್ತಿಗೆ ಕನಿಷ್ಠ ನೀರು
365 ದಿನವೂ ಸರಬರಾಜು
2023ಕ್ಕೆ ಯೋಜನೆ ಪೂರ್ಣ

Advertisement

Udayavani is now on Telegram. Click here to join our channel and stay updated with the latest news.

Next