ತಾಂಜಾನಿಯಾ: ಇಲ್ಲಿಯ ಮೂರು ಸಂಸದರು ತೀರಿಕೊಂಡ ಬಳಿಕ ವಿಪಕ್ಷ ಸದಸ್ಯರು ಸಂಸತ್ತನ್ನು ಅಮಾನತಿನಲ್ಲಿಟ್ಟು ಎಲ್ಲ ಸಂಸದರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 11 ದಿನಗಳಲ್ಲಿ ಮೂವರು ಸಂಸದರು ಅಸುನೀಗಿದ್ದು, ಕಾರಣ ಇನ್ನೂ ಅಸ್ಪಷ್ಟವಾಗಿದೆ. ವಿಪಕ್ಷ ಚಡೆಮಾದ ಮುಖ್ಯಸ್ಥ ಫ್ರೀಮನ್ ಎಂಬೊವೆ ಮಾತನಾಡಿ, ಸರಕಾರ ಜನಪ್ರತಿನಿಧಿಗಳ ಸಾವಿನ ಕಾರಣವನ್ನು ಮುಚ್ಚಿಟ್ಟಿದೆ. ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಸಂಸದರು ಹಾಗೂ ತಾಂಜಾನಿಯಾದ ನೂರಾರು ಜನರು ಕೋವಿಡ್‌ಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಕಠಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೀಗಾಗಿ, ಕನಿಷ್ಠ 21 ದಿನಗಳ ಕಾಲ ಸಂಸತ್ತನ್ನು ಅಮಾನತಿನಲ್ಲಿಟ್ಟು ಎಲ್ಲ ಸಂಸದರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ತಮ್ಮ ಪಕ್ಷದ ಸಂಸದರು ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳದೆ ಕನಿಷ್ಠ ಎರಡು ವಾರಗಳ ಕಾಲ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಅವರು ಸೂಚನೆ ನೀಡಿದ್ದಾರೆ.
ತಾಂಜಾನಿಯಾದ ಕಾನೂನು ಮತ್ತು ಸಂಸದೀಯ ಸಚಿವ ಆಗಸ್ಟಿನ್ ಮಹಿಗಾ (74) ಕಳೆದ ಶುಕ್ರವಾರ ಮೃತಪಟ್ಟಿದ್ದರು. ಎ. 20ರಂದು ಗೆರ್‌ಟ್ರೂಡ್ ರಾಕಟರೆ ಹಾಗೂ ಎ. 29ರಂದು ರಿಚಾರ್ಡ್ ಎನ್‌ಡಸ್ಸಾ ಸಾವನ್ನಪ್ಪಿದ್ದರು. ಸರಕಾರ ಈ ಮೂವರು ಸಂಸದರ ಸಾವಿಗೆ ನಿಖರ ಕಾರಣವನ್ನು ಇನ್ನೂ ತಿಳಿಸಿಲ್ಲ. ಆದರೆ, ಕಳೆದ ತಿಂಗಳು ಓರ್ವ ಸಂಸದರು ಕೋವಿಡ್ ವೈರಸ್‌ಗೆ ತುತ್ತಾಗಿದ್ದು ಖಚಿತಪಟ್ಟಿತ್ತು. ಈವರೆಗೆ ತಾಂಜಾನಿಯಾದಲ್ಲಿ 480ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಒಂಭತ್ತು ದಿನಗಳಲ್ಲಿ ಸರಕಾರ ನೀಡಿದ ಈ ಏಕೈಕ ಮಾಹಿತಿ ಕಳೆದ ಬುಧವಾರ ಹೊರಬಿದ್ದಿದೆ. ಜನರಲ್ಲಿ ಭಯ ಮೂಡಿಸಬಾರದು ಎಂದು ಅಲ್ಲಿನ ಅಧ್ಯಕ್ಷ ಜಾನ್ ಮಾಗುಫುಲಿ ಅವರ ಸೂಚನೆ ಮೇರೆಗೆ ಎ. 22ರಿಂದ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಸರಕಾರ ಬಹಿರಂಗಪಡಿಸುತ್ತಿಲ್ಲ. ಶಾಲೆ – ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ಜನರು ಕೆಲಸ ಮಾಡುವುದನ್ನು ಹಾಗೂ ಚರ್ಚ್ ಹಾಗೂ ಮಸೀದಿಗಳಿಗೆ ಹೋಗುವುದನ್ನು ನಿಲ್ಲಿಸಿಲ್ಲ. ಹೀಗಾಗಿ, ಮಾರುಕಟ್ಟೆ, ವಾಣಿಜ್ಯ ಚಟುವಟಿಕೆ ತಡೆಯಿಲ್ಲದೆ ನಡೆದಿವೆ.