Advertisement

ಪ್ರತಿಭಾವಂತ ಕಲಾವಿದೆ ಕು|ತನ್ವಿ  ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ

12:34 PM Aug 22, 2017 | |

ಮುಂಬಯಿ: ಮಕ್ಕಳು ಯಾವತ್ತೂ ಯಶಸ್ಸಿನ ಬಗ್ಗೆ ಯೋಚಿಸುವವರಾಗಿರಬೇಕು. ಪೋಷಕರು ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರಬೇಕು. ಯಶಸ್ಸು ಮತ್ತು ಪ್ರೋತ್ಸಾಹಗಳ ಸಮ್ಮಿಳಿತದಿಂದ ಮಕ್ಕಳು ಶ್ರಮಪಟ್ಟಲ್ಲಿ ಯಾವುದೇ ಕಠಿಣತೆಯನ್ನು ಸಾಧಿಸಬಹುದು ಎಂಬುವುದಕ್ಕೆ ಕು| ತನ್ವಿ ಎಲ್ಲರಿಗೂ ನಿದರ್ಶನ. ಬದುಕು ಕಟ್ಟುವಾಗ  ಹಲವಾರು ಕನಸುಗಳನ್ನು ಕಾಣುವುದು ಅನಿವಾರ್ಯ. ಆದರೆ ಕನಸನ್ನು ಸಾಕ್ಷಾತ್ಕಾರಗೊಳಿಸುವ ಹಂಬಲ ಎಲ್ಲರಿಗೂ ಇರಬೇಕು ಎಂದು ನೃತ್ಯಗುರು, ವಿಮರ್ಶಕ ವಿಜಯ ಶಂಕರ್‌ ಅವರು  ಅಭಿಪ್ರಾಯಪಟ್ಟರು.

Advertisement

ಆ. 20ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದ ದುಬೈ ಉದ್ಯಮಿ ಸುಂದರ್‌ ಕಾಂಚನ್‌ ಮತ್ತು ಶಶಿಕಲಾ ಕಾಂಚನ್‌ ದಂಪತಿಯ ಪುತ್ರಿ ಕು| ತನ್ವಿ ಕಾಂಚನ್‌ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಭರತನಾಟ್ಯಕ್ಕೆ ಮಹೋನ್ನತ ಸ್ಥಾನಮಾನವಿದೆ. ತನ್ವಿಯವರಿಗೆ ಮುಂದೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದ್ದು, ಭಾರತ ದೇಶದ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸಬೇಕು. ಅವರ ಕೀರ್ತಿ ಎಲ್ಲೆಡೆ ಹರಡಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಅರುಣೋದಯ ಕಲಾನಿಕೇತನ ಮುಂಬಯಿ ಇದರ ನಿರ್ದೇಶಕಿ, ನೃತ್ಯಗುರು ವಿದುಷಿ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಅವರು ಮಾತನಾಡಿ, ಕು| ತನ್ವಿ ಸಫಲತೆಗಾಗಿ ಪಟ್ಟ ಶ್ರಮ ಅಪಾರವಾಗಿದೆ. ಜೊತೆಗೆ ಮಾತಾಪಿತರ ಪ್ರೋತ್ಸಾಹವೂ ಇಲ್ಲಿ ಮೆಚ್ಚುವಂತಹದ್ದು. ಭರತನಾಟ್ಯದ ಮೂಲಕ ಸಾಂಸ್ಕೃತಿಕ ಲೋಕಕ್ಕೆ ತನ್ವಿ ನೀಡಿದ ಕೊಡುಗೆ ಇತರ ಮಕ್ಕಳಿಗೆ ಮಾದರಿಯಾಗಲಿ. ಭವಿಷ್ಯದಲ್ಲಿ ಕು| ತನ್ವಿ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು.

ಇನ್ನೋರ್ವ ಅತಿಥಿ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌ ಉಪ್ಪೂರು ಅವರು ಮಾತನಾಡಿ, ಭರತನಾಟ್ಯ ವಿಶ್ವಾಸಾತ್ಮಕ, ಸಾಂಸ್ಕೃತಿಕ ಸೌಂದರ್ಯ ಕಲೆಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ, ಸಂಗೀತದಲ್ಲಿನ ಸಂಶೋಧನಾತ್ಮಕ ಕಲೆಯಾಗಿದೆ. ಪ್ರಪಂಚಕ್ಕೆ ಶ್ರೀ ಕೃಷ್ಣನೋರ್ವನೇ ಅಧಿಪತಿಯಾಗಿರುವ ಈ ನೃತ್ಯಕ್ಕೆ ತನ್ವಿಯನ್ನು ಅವರ ಮಾತಾಪಿತರು ಅರ್ಪಿಸಿದ್ದಾರೆ. ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

Advertisement

ಗೌರವ ಅತಿಥಿಯಾಗಿ ಪಾಲ್ಗೊಂಡ ಮೊಗವೀರ ವ್ಯವಸ್ಥಾಪಕ ಮಂಡಳಿಯ  ಟ್ರಸ್ಟಿ ಪುರಂದರ ಎನ್‌. ಸುವರ್ಣ ಹೊಸಬೆಟ್ಟು ಅವರು ಮಾತನಾಡಿ, ಸುಮಾರು 180 ಸಾಂಸ್ಕೃತಿಕ ನೃತ್ಯ ಕಲೆಗಳಲ್ಲಿ ಭರತನಾಟ್ಯವು ಅತ್ಯಂತ ಪ್ರಮುಖ ನೃತ್ಯಕಲೆಯಾಗಿದೆ. ಯಾವುದೇ ಅಡೆತಡೆಯಿಲ್ಲದೆ ತನ್ವಿಯ ಭರತನಾಟ್ಯ ಕಲೆಗೆ ಸಹಕಾರ ನೀಡಿದ ಮಾತಾಪಿತರು ನಿಜವಾಗಲೂ ಧನ್ಯರು. ಇದೊಂದು ಸುರತ್ಕಲ್‌ ಮತ್ತು ಎರ್ಮಾಳ್‌ ಕುಟುಂಬಸ್ಥರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತನ್ವಿಯ ನೃತ್ಯ ನಿರ್ದೇಶನದ ಮಾರ್ಗದರ್ಶಿ, ನೃತ್ಯಗುರು, ವಿದುಷಿ ರೋಹಿಣಿ ಅನಂತ್‌ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಜೀವನದ ಕಠಿಣತೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಬಲ್ಲ ವ್ಯಕ್ತಿಗೆ ಯಶಸ್ಸು ಶತಃಸಿದ್ಧ. ಈ ನಿಟ್ಟಿನಲ್ಲಿ ತನ್ವಿಯ ಸಾಧನೆ ಮೆಚ್ಚುವಂತದ್ದು. ಕಿರಿಯ ವಯಸ್ಸಿನಲ್ಲಿ ಅವಳು ಬೆಳೆದ ಹಾದಿಯಿಂದ ಭರತನಾಟ್ಯದ ಆಸೆ, ಚಿಂತನೆಗಳು ಕೈಗೊಡುವಂತೆ ಮಾಡಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಶೀತಲ್‌ ಕೋಟ್ಯಾನ್‌ ಸ್ವಾಗತಿಸಿದರು. ಪುಷ್ಪಾಂಜಲಿ ನೃತ್ಯದೊಂದಿಗೆ ತನ್ವಿ ಅವರಿಂದ ವಿವಿಧ ಭರತನಾಟ್ಯ ನೃತ್ಯಗಳು ನಡೆದವು. ಅಲರಿಪು, ದೇವರನಾಮ, ಪದಂ, ತಿಲ್ಲಣ ಇತ್ಯಾದಿ ವಿವಿಧ ನಾಟ್ಯಗಳಿಂದ ಕಲಾಭಿಮಾನಿಗಳನ್ನು ರಂಜಿಸಿದರು. ಹಿನ್ನೆಲೆ ಗಾಯನದಲ್ಲಿ ರಂಜನಿ ಗಣೇಶನ್‌, ಮೃದಂಗದಲ್ಲಿ ವಿದ್ವಾನ್‌ ಶಂಕರ ನಾರಾಯಣ, ವಯೋಲಿನ್‌ನಲ್ಲಿ ಎಸ್‌. ಆರ್‌. ಬಾಲಸುಬ್ರಹ್ಮಣ್ಯಂ, ಕೊಳಲಿನಲ್ಲಿ ಭಾಸ್ಕರ್‌ ನಾಗರಾಜನ್‌, ಧನುಷ್‌ ಅವರು ಸಹಕರಿಸಿದರು.

ಕೀರ್ತನ ಕೃಷ್ಣನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ನಾಟ್ಯ ಪ್ರವೀಣೆ ಕು| ತನ್ವಿ ಅವರು ವಂದಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ 

Advertisement

Udayavani is now on Telegram. Click here to join our channel and stay updated with the latest news.

Next