Advertisement

Tanush Kotian: ಮುಂಬಯಿ ತಂಡದಲ್ಲಿ ಮಿಂಚಿದ ಉಡುಪಿ ಕ್ರಿಕೆಟಿಗ ತನುಷ್‌ ಕೋಟ್ಯಾನ್‌

12:13 PM Feb 28, 2024 | Team Udayavani |

ಕಾಪು: ಉಡುಪಿ ಜಿಲ್ಲೆಯ ಪಾಂಗಾಳ ಮೂಲದ, ಪ್ರಸ್ತುತ ಮುಂಬಯಿ ರಣಜಿ ತಂಡದ ಆಲ್‌ರೌಂಡರ್‌ ಆಗಿ ಮಿಂಚುತ್ತಿರುವ ತನುಷ್‌ ಕೋಟ್ಯಾನ್‌ ಅವರ ಸಾಧನೆ ಕಂಡು ತುಳುನಾಡು ಮತ್ತು ಕರಾವಳಿ ಕರ್ನಾಟಕದ ಮುಂಬಯಿಗರೆಲ್ಲರೂ ಹೆಮ್ಮೆಪಟ್ಟಿದ್ದಾರೆ.

Advertisement

ಪಾಂಗಾಳ ವಿಜಯಾ ಬ್ಯಾಂಕ್‌ ಬಳಿಯ ತುಳ್ಳಿಮಾರ್‌ ಹೌಸ್‌ನ ಕರುಣಾಕರ್‌ ಕೋಟ್ಯಾನ್‌ ಮತ್ತು ಹೆಜಮಾಡಿ ಕೋಡಿ ನಡಿಕುದ್ರು ಮಲ್ಲಿಕಾ ಕೋಟ್ಯಾನ್‌ ದಂಪತಿಯ ಪುತ್ರನೇ ತನುಷ್‌.

ದೈವ, ದೇವರ ಬಗ್ಗೆ ನಂಬಿಕೆ
ಮುಂಬಯಿಯಲ್ಲೇ ಹುಟ್ಟಿ ಬೆಳೆದಿರುವ ತನುಷ್‌ಗೆ ತನ್ನ ತಂದೆ-ತಾಯಿಯ ಹುಟ್ಟೂರು, ದೈವ ದೇವರುಗಳ ಬಗ್ಗೆ ಅಪಾರ ಭಕ್ತಿ. ಕಳೆದ ಜನವರಿಯಲ್ಲಿ ಹೆತ್ತವರ ಜತೆಗೆ ಪಾಂಗಾಳಕ್ಕೆ ಆಗಮಿಸಿ, ದೈವ-ದೇವರು, ನಾಗದೇವರ ವಾರ್ಷಿಕ ತನು ತಂಬಿಲ, ಪಂಚ ಪರ್ವಾದಿಗಳಲ್ಲಿ ಪಾಲ್ಗೊಂಡಿದ್ದರು. ಕಳೆದ ಜನವರಿ ತಿಂಗಳಲ್ಲಿ ಪಡುಬಿದ್ರಿ ಬೀಡು ಬಳಿಯಿರುವ ಕೊಗ್ಗ ಬನದಲ್ಲಿ ತನುಷ್‌ ಪರವಾಗಿ ನಾಗದೇವರಿಗೆ ನವಕ ಪ್ರಧಾನ ಹೋಮ, ನವಗ್ರಹ ಪೂಜೆ, ಕಾಳಸರ್ಪ ದೋಷ ನಿವಾರಣೆಗಾಗಿ ವಿಶೇಷ ಪೂಜೆ ನಡೆಸಲಾಗಿತ್ತು. ಇದರಲ್ಲಿ ಸ್ವತಃ ತನುಷ್‌ ಭಾಗವಹಿಸಿದ್ದರು.

ತನುಷ್‌ ಕಟಪಾಡಿ ಅಚ್ಚಡ ಸಲ್ಪಾ ಬಡಾವಣೆಯಲ್ಲಿ ಫ್ಲಾಟ್‌ ಖರೀದಿಸಿದ್ದು, ಊರಿಗೆ ಬಂದಾಗ ಪಾಂಗಾಳ, ನಡಿಕುದ್ರು ಮತ್ತು ಕಟಪಾಡಿ ಅಚ್ಚಡದ ಸಲ್ಪಾ ಬಡಾವಣೆಯಲ್ಲಿ ವಾಸವಿರುತ್ತಾರೆ.

ತಂದೆ ಕರುಣಾಕರ್‌ ಕೋಟ್ಯಾನ್‌ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ವಿಶೇಷ ಆಸಕ್ತಿ. ಮುಂಬಯಿ ಟಾಟಾ ನ್ಪೋರ್ಟ್ಸ್ ನಲ್ಲಿ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ ಅವಕಾಶ ತಪ್ಪಿದಾಗ ಕೋಚ್‌ ಆಗಿ, ರಣಜಿಯಲ್ಲಿ ಅಂಪಾಯರ್‌ ಆಗಿ ಕ್ರಿಕೆಟ್‌ ಸೇವೆ ಮುಂದುವರಿಸಿದ್ದರು. ತನಗೆ ತಲುಪಲಾಗದ ಗುರಿಯೆಡೆಗೆ ಮಗನನ್ನು ಸಜ್ಜುಗೊಳಿಸಿದರು. ಮಗನನ್ನು ಮುಂಬಯಿ ರಣಜಿ ತಂಡಕ್ಕೆ ಸೇರ್ಪಡೆಗೊಳಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

Advertisement

ಮೊಮ್ಮಗನ ಪರಾಕ್ರಮಕ್ಕೆ ಹೆಮ್ಮೆ
ಮೊಮ್ಮಗನ ಕ್ರಿಕೆಟ್‌ ಸಾಧನೆಯನ್ನು ಕಂಡು ಖುಷಿಯಾಗುತ್ತಿದೆ. ನಮಗೆ ಮೊಮ್ಮಗನ ಸಾಧನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಮುಂದೆ ಆತ ಐಪಿಎಲ್‌ ಮತ್ತು ಭಾರತ ಕ್ರಿಕೆಟ್‌ ತಂಡಕ್ಕೂ ಸೇರ್ಪಡೆಗೊಂಡು ದೊಡ್ಡ ಸಾಧನೆ ಮಾಡುವಂತಾಗಲಿ ಎಂದು ಪಾಂಗಾಳ ತುಳ್ಳಿಮಾರ್‌ ಹೌಸ್‌ನಲ್ಲಿ ವಾಸವಿರುವ ಕುಟುಂಬದ ದೈವದ ಮುಕ್ಕಾಲ್ದಿ ಕೆ.ಕೆ. ಪೂಜಾರಿ ಅವರ ಆಶಯವಾಗಿದೆ.

ಮಗನ ಸಾಧನೆಗೆ ಖುಷಿ
ಕಳೆದ 3 ವರ್ಷಗಳಿಂದ ರಣಜಿ ತಂಡದಲ್ಲಿರುವ ತನುಷ್‌ ನಿರಂತರ ಸಾಧನೆ ಮಾಡುತ್ತಿದ್ದಾನೆ. 4 ತಿಂಗಳ ಹಿಂದೆ ದಕ್ಷಿಣ ವಲಯ ವಾಣಿಜ್ಯ ತೆರಿಗೆ ವಿಭಾಗಕ್ಕೆ ಆಯ್ಕೆಯಾಗಿದ್ದ ತನುಷ್‌ ಗೋವಾಕ್ಕೆ ಪೋಸ್ಟಿಂಗ್‌ ಪಡೆದಿದ್ದು, ಈಗ ರಣಜಿ ಪಂದ್ಯದಲ್ಲಿ ಪ್ರಥಮ ಶತಕ ಬಾರಿಸಿದ್ದಾನೆ. ಈ ಸಾಧನೆಯ ಹಿಂದೆ ಮಗನ ಕಠಿಮ ಪರಿಶ್ರಮ, ಪ್ರಯತ್ನ ಮತ್ತು ಹೋರಾಟದ ಮನೋಭಾವ ಮುಖ್ಯ ಪಾತ್ರ ನಿರ್ವಹಿಸಿದೆ ಎನ್ನುತ್ತಾರೆ ತಂದೆ-ತಾಯಿ.

·ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next