ವಿಜಯಪುರ: ಜಿಲ್ಲೆಯ ಕೊಲಾರ ಪಟ್ಟಣದ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಟಂಟಂ ವಾಹನ, ಬಸ್ ಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಡಿದ್ದಾರೆ. ಘಟನೆ ಖಂಡಿಸಿ ಸ್ಥಳೀಯರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ, ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪಘಾತ ಸಂಭವಿಸಿದಾಗ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮತ್ತಿಬ್ಬರು ಮೃತಪಟ್ಟಿದ್ದು, ಘಟನೆಯಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಕೊಲಾರ ಪಟ್ಟಣದಲ್ಲಿ ಪೊಲೀಸರು ವಾಹನಗಳ ದಾಖಲೆ ಪರಿಶೀಲಿಸುತ್ತಿದ್ದರು. ಇದನ್ನು ದೂರದಿಂದಲೇ ಗಮನಿಸಿದ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಟಂಟಂ ವಾಹನ ಚಾಲಕ, ಪೋಲೀಸರಿಂದ ತಪ್ಪಿಸಿಕೊಳ್ಳಲು ವೇಗ ಹೆಚ್ಚಿಸಿದಾಗ ಎದುರಿಗೆ ಬರುತ್ತಿದ್ದ ಸರಕಾರಿ ಸಾರಿಗೆ ಸಂಸ್ಥೆಯ ಬಸ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಇನ್ನೂ ಹಲವರು ಗಂಭೀರ ಗಾಯಗೊಂಡಿದ್ದು,ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆಯಲ್ಲಿ ಮೃತರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ದುರ್ಘಟನೆಗೆ ಪೊಲೀಸರು ವಾಹನ ಚಾಲಕರಿಗೆ ಕೊಡುತ್ತಿರುವ ಕಿರುಕುಳ ಕಾರಣ ಎಂದು ಕುಪಿತರಾದ ಸ್ಥಳೀಯರು ಕೊಲಾರ ಪಿಎಸ್ ಐ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೊಶ ವ್ಯಕ್ತಪಡಿಸಿದ್ದು, ಸಾರಿಗೆ ಬಸ್ ಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನತೆ ಯಿಂದ ಕೂಡಿದ್ದು. ಕೊಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.