Advertisement

ರಸ್ತೆ ಬದಿ ಬಾಡುವ ಗಿಡಗಳಿಗೆ ಟ್ಯಾಂಕರ್‌ ನೀರು ಆಸರೆ

03:39 PM Mar 17, 2022 | Team Udayavani |

ಸಿಂಧನೂರು: ಸಾಂಕೇತಿಕವಾಗಿ ಗಿಡ ನೆಡುವುದು ಹಾಗೂ ಪರಿಸರದ ಬಗ್ಗೆ ಹತ್ತಾರು ಪ್ರತಿಜ್ಞೆಗಳನ್ನು ಮಾಡಿ ಮೈ ಮರೆಯುವುದು ಸಾಮಾನ್ಯ. ಇಲ್ಲೊಬ್ಬ ಪರಿಸರ ಪ್ರೇಮಿ ತಾವು ನೆಟ್ಟ ಗಿಡಗಳಿಗೆ ಬೇಸಿಗೆ ಹಿನ್ನೆಲೆಯಲ್ಲಿ ಹಗಲಿರುಳು ನೀರು ಪೂರೈಸುವ ಮೂಲಕ ಕಾಳಜಿ ಪ್ರದರ್ಶಿಸಿದ್ದಾರೆ.

Advertisement

ತಾಲೂಕನ್ನು ಹಸಿರು ಸಿಂಧನೂರು ಮಾಡಲು ಮಾಡಲು ಶ್ರಮಿಸುತ್ತಿರುವ ಹಲವರ ಪ್ರಯತ್ನಕ್ಕೆ ಬಲಿಷ್ಠ ಜೊತೆಯಾಗಿರುವ ನೆಕ್ಕಂಟಿ ಸುರೇಶ್‌ ಅವರು, ವೈಯಕ್ತಿಕವಾಗಿ ಗಿಡಗಳನ್ನು ಪೋಷಿಸಲು ಆರಂಭಿಸಿದ್ದಾರೆ. ಗೊಬ್ಬರ ಹಾಕಿ, ಸಸಿಗಳಿಗೆ ವೈಯಕ್ತಿಕವಾಗಿ ಹಣ ವ್ಯಯಿಸಿರುವ ಪರಿಸರ ಪ್ರೇಮಿ ಸುರೇಶ್‌, ಅವುಗಳನ್ನು ಉಳಿಸಿಕೊಳ್ಳಲು ಬೇಸಿಗೆ ಹೊತ್ತಿನಲ್ಲಿ ಬೆವರಿಳಿಸಲಾರಂಭಿಸಿದ್ದಾರೆ.

ಏನಿದು ಪರಿಸರ ಕಾಳಜಿ?

ಕಳೆದ ಆರು ತಿಂಗಳ ಹಿಂದೆ ವೈಯಕ್ತಿಕವಾಗಿ ಹಣ ವ್ಯಯಿಸುವ ಮೂಲಕ ತಾಲೂಕಿನ ಹಲವು ಗ್ರಾಮೀಣ ರಸ್ತೆಗಳಲ್ಲಿ ಹಸಿರು ಚಿಗುರಿಸಲು ಪಣ ತೊಟ್ಟಿದ್ದರು. ಇದರ ಭಾಗವಾಗಿ ತಾಲೂಕಿನ ಡೊಣ್ಣಿ ಕ್ಯಾಪ್‌, ಕುರುಕುಂದಿ, ಹೊಸಳ್ಳಿ (ಇಜೆ), ಸಿಂಧನೂರು ನಗರ ವ್ಯಾಪ್ತಿಯ ವೆಂಕಟೇಶ್ವರ ನಗರ, ಆದರ್ಶ ಕಾಲೋನಿ, ಮಹೆಬೂಬಿಯಾ ಕಾಲೋನಿ, ಬಪ್ಪೂರು ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಬರೋಬ್ಬರಿ 3 ಸಾವಿರ ಗಿಡಗಳನ್ನು ತಮ್ಮ ವೆಂಕಟೇಶ್ವರ ಆಗ್ರೋ ಸರ್ವೀಸ್‌ ಸಿಬ್ಬಂದಿಯನ್ನು ಬಳಸಿಕೊಂಡು ನೆಟ್ಟಿದ್ದರು. ಸಹಜವಾಗಿಯೇ ಆರಂಭಿಕ ಉತ್ಸಾಹವಾಗದೇ ಬದ್ಧತೆಯನ್ನು ಮುಂದುವರಿಸಿದ ಪರಿಣಾಮ ಬೇಸಿಗೆಯಲ್ಲೂ ನೆಟ್ಟ ಗಿಡಗಳಿಗೆ ನೀರು ದೊರೆಯಲಾರಂಭಿಸಿದೆ.

ಗಿಡಗಳಿಗೆ ನಿತ್ಯವೂ ನೀರು

Advertisement

ತಾವೇ ಖರ್ಚು ವ್ಯಯಿಸಿ ಒಂದು ಟ್ಯಾಂಕರ್‌ ರೂಪಿಸಿ, 3 ಸಾವಿರ ಗಿಡಗಳಿಗೆ ನೀರುಣಿಸುವ ಕೆಲಸಕ್ಕೆ ಮೂರ್‍ನಾಲ್ಕು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈಗಾಗಲೇ 6 ಅಡಿಯ ಗಿಡಗಳನ್ನು ಖರ್ಚು ವ್ಯಯಿಸಿ ತರಿಸಿ ಹಾಕಿರುವುದರಿಂದ ಅವುಗಳು ಬಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಅರಣ್ಯ ಇಲಾಖೆಯವರು ಪೂರೈಕೆ ಮಾಡಲಾಗದ ಸಸಿಗಳನ್ನು ಹಾಕಿರುವುದು ಗಮನಾರ್ಹ.

ನೇರಳೆ, ಬೇವಿನ ಗಿಡ, ಹತ್ತಿ ಹಣ್ಣು ಸೇರಿದಂತೆ ಹೂವಿನ ಗಿಡಗಳನ್ನು ರಸ್ತೆಯ ಬದಿಗಳಲ್ಲಿ ಹಾಕಲಾಗಿದೆ. ಅವುಗಳು ಬಿರುಬೇಸಿಗೆಯ ಹಿನ್ನೆಲೆಯಲ್ಲಿ ಬಾಡುತ್ತಿರುವಾಗಲೇ ನೆರವಿಗೆ ಧಾವಿಸಿದ ಪರಿಣಾಮ ರಸ್ತೆ ಬದಿಯ ಗಿಡಗಳು ಮತ್ತೆ ಮರುಜೀವ ಪಡೆಯಲಾರಂಭಿಸಿವೆ.ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ಕಾಡಿದಾಗ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾನೆ.

ಆರು ತಿಂಗಳ ಹಿಂದೆ 6 ಅಡಿ ಎತ್ತರದ ಸಸಿಗಳನ್ನು ಹೊರ ರಾಜ್ಯಗಳಿಂದ ತರಿಸಿದ್ದೆ. ಅವುಗಳನ್ನು ಉಳಿಸಲು ಟ್ಯಾಂಕರ್‌ ನೀರು ಪೂರೈಸಿ, ರಕ್ಷಣೆ ಮಾಡಲಾಗುತ್ತಿದೆ. ಖರ್ಚು-ವೆಚ್ಚದ ಮಾತು ಬೇಡ. ನನ್ನ ಕನಸಿನ ಯೋಜನೆ ಯಶಸ್ವಿಯಾಗಬೇಕಿದೆ. -ನೆಕ್ಕಂಟಿ ಸುರೇಶ್‌, ಉದ್ಯಮಿ, ಸಿಂಧನೂರು

ಆಂಧ್ರ ಪ್ರದೇಶದ ರಾಜಮಂಡ್ರಿ ಯಿಂದ ಕಳೆದ 6 ತಿಂಗಳ ಹಿಂದೆ ಪ್ರತಿ ಸಸಿಗೆ 300 ರೂ. ಕೊಟ್ಟು 3 ಸಾವಿರ ಸಸಿ ತರಿಸಿದ್ದರು. ಅಂದು 9 ಲಕ್ಷ ರೂ. ಖರ್ಚು ಮಾಡಿದ್ದರು. ಮತ್ತೂ ಮುಂದುವರಿಸಿ, ಗೊಬ್ಬರ ಹಾಕಿ, ನೀರು ಹಾಕಲು ಟ್ಯಾಂಕರ್‌ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಶ್ಲಾಘನೀಯ. -ಅವಿನಾಶ್‌ ದೇಶಪಾಂಡೆ, ಕಾರ್ಯದರ್ಶಿ, ಜೀವ ಸ್ಪಂದನಾ ಟ್ರಸ್ಟ್‌, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next