ವಿಜಯಪುರ: ಧರ್ಮಸ್ಥಳ ಕ್ಷೇತ್ರದ ಬಳಿಕ ರಾಜ್ಯದ ಅತ್ಯಂತ ಪ್ರತಿಷ್ಠಿತ ಹಾಗೂ ಭಕ್ತರ ಪಾಲಿನ ಇಷ್ಟಾರ್ಥ ಸಿದ್ದಿ ದೇವತಾ ಕ್ಷೇತ್ರ ಎನಿಸಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಕ್ಷೇತ್ರದಲ್ಲೂ ಜಲಕ್ಷಾಮ ಎದುರಾಗಿದೆ. ಒಂದೆಡೆ ಬಿರು ಬಿಸಿಲು ಮತ್ತೂಂದೆಡೆ ನೀರಿನ ಅಭಾವ ಇದ್ದರೂ ಶ್ರೀ ಕ್ಷೇತ್ರಕ್ಕೆ ವರದಾನಿ ದಾನಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕೊರತೆ ಆಗಿಲ್ಲ.
ಹೀಗಾಗಿ ಭಕ್ತರಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿರುವ ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಶ್ರೀಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರನ್ನು ಬರಬೇಡಿ ಎನ್ನಲಾಗದೇ, ಸಾಧ್ಯವಾದರೆ ತಾಯಿ ದರ್ಶನ ಮುಂದೂಡಿದರೆ ಒಳಿತು ಎಂದು ವಿನಯದಿಂದ ಮನವಿ ಮಾಡುತ್ತಿದೆ.
ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ದಾನಮ್ಮ ದೇವಿಯ ಗುಡ್ಡಾಪುರ ಕ್ಷೇತ್ರ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಮಾತ್ರವಲ್ಲದೇ ದಕ್ಷಿಣ ಭಾರತದ ಆಸ್ತಿಕರ ಪಾಲಿನ ಆರಾಧ್ಯಳಾಗಿರುವ ದಾನಮ್ಮ ದೇವಿ ದರ್ಶನಕ್ಕಾಗಿ ನಿತ್ಯವೂ ವಿವಿಧ ಹರಕೆ ತೀರಿಸುವುದು, ಜವಳಿ, ಮದುವೆ, ಸಾಮಾನ್ಯ ದರ್ಶನ ಆಂತೆಲ್ಲ ಶ್ರೀಕ್ಷೇತ್ರಕ್ಕೆ ಕನಿಷ್ಠ 3-4 ಸಾವಿರ ಭಕ್ತರು ಬರುತ್ತಾರೆ. ಕಳೆದ ವರ್ಷ ಜಾತ್ರೆ ಹಂತದಲ್ಲೇ ಈ ಕ್ಷೇತ್ರಕ್ಕೆ ನೀರಿನ ಅಭಾವ ಎದುರಾಗಿದೆ.
ಆಗಿನಿಂದ ನೆರೆಯ ಅಂಕಲಗಿ ಗ್ರಾಮದಲ್ಲಿನ ಬೊರ್‌ವೆಲ್ನಿಂದ ಟ್ಯಾಂಕರ್ ಮೂಲಕ ನೀರು ತರಲಾಗುತ್ತಿತ್ತು. ಇದೀಗ ಅಲ್ಲಿಯೂ ಅಂತರ್ಜಲ ಬತ್ತಿರುವ ಕಾರಣ ಎರಡು ತಿಂಗಳಿಂದ ಸೊರಡಿ ಗ್ರಾಮದಿಂದ ನೀರು ತರಲಾಗುತ್ತಿತ್ತು. ಅಲ್ಲಿಯೂ ಕೊಳಬೆ ಬಾವಿಗಳಲ್ಲಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಲೇ, ಮುಚ್ಚಂಡಿ ಗ್ರಾಮದತ್ತ ಮುಖ ಮಾಡಬೇಕಿದೆ. ಮುಚ್ಚಂಡಿ ಗ್ರಾಮದಲ್ಲೂ ಕೊಳವೆ ಬಾವಿ ಬತ್ತುವ ಭೀತಿ ಇರುವ ಕಾರಣ ದೇಸವಸ್ಥಾನ ಆಡಳಿತ ಮಂಡಳಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ನೀರು ಒದಗಿಸಲು ಪರದಾಡುವಂತೆ ಮಾಡಿದೆ.
ಹೀಗಾಗಿ ನಿತ್ಯವೂ ದೇವಸ್ಥಾನದಕ್ಕೆ ಬರುವ ಭಕ್ತರಿಗೆ ಸಮಸ್ಯೆ ಆಗದಿರಲಿ ಎಂದು ಕಳೆದ ವರ್ಷದ ನವೆಂಬರ್ ತಿಂಗಳಿಂದಲೇ ದೇವಸ್ಥಾನ ಟ್ರಸ್ಟ್ ಸಮಿತಿ ಮಾಸಿಕ ಕನಿಷ್ಠ 1.50 ಲಕ್ಷ ರೂ. ವೆಚ್ಚ ಮಾಡಿ ಟ್ಯಾಂಕರ್ ನೀರು ಕೊಡಲು ಮುಂದಾಗಿದೆ. ಸ್ವಂತ ಟ್ರ್ಯಾಕ್ಟರ್ ಹಾಗೂ 6000 ಲೀ. ಸಾಮರ್ಥ್ಯದ ಟ್ಯಾಂಕರ್ ಖರೀದಿಸಿ, ವಿದ್ಯುತ್ ಸಮಸ್ಯೆ ನೀಗಿಸಲು ಜನರೇಟರ್ ಇರಿಸಿದೆ. ನೆರೆಯ ಅಂಕಲಗಿ, ಸೊರಡಿ ಹಾಗೂ ಮುಚ್ಚಂಡಿ ಗ್ರಾಮಳಿಂದ ತರಲಾಗುತ್ತಿತ್ತು. ಅಲ್ಲಿಯೂ ಜಲಮೂಲ ಬತ್ತಿದೆ.
ಭಕ್ತರಿಗೆ ಸ್ನಾನ ಸೇರಿದಂತೆ ಇತರೆ ಬಳಕೆಗೂ ನೀರಿಲ್ಲದ ದುಸ್ಥಿತಿ ಇದೆ. ಕಳೆದ ಒಂದು ತಿಂಗಳಿಂದ ಶ್ರೀಕ್ಷೇತ್ರದಲ್ಲಿ ಮದುವೆ ಮಾಡಲು ಪರವಾನಿಗೆ ನೀಡಿಕೆ ಸ್ಥಗಿತ ಮಾಡಿದ್ದು, ವಾರದಿಂದ ದೇವಸ್ಥಾನದ ಶುದ್ಧ ನೀರಿನ ಘಟಕ ಮುಚ್ಚಿದೆ. ನಿತ್ಯ ದಾಸೋಹ, ಊಟದ ಮುನ್ನ-ನಂತರ ಕೈ ತೊಳೆಯಲು, ಕುಡಿಯಲು ಸೇರಿದಂತೆ ಕನಿಷ್ಠ 7 ಟ್ಯಾಂಕರ್ ನೀರು ಹೊಂದಿಸಲು ಹೆಣಗಾಟ ನಡೆದಿದೆ. ನೀರಿನ ಪರಿಸ್ಥಿತಿ ನಿರಂತರ ಗಂಭೀರ ಪರಿಸ್ಥಿತಿಗೆ ತಲುಪಿರುವ ಕಾರಣ ಕಳೆದ ಒಂದು ವಾರದಿಂದ ದೇವಸ್ಥಾನದಲ್ಲಿ ನಡೆದಿದ್ದ ಅಭಿವೃದ್ಧಿಯ ಕಟ್ಟಡ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಭವಿಷ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಮದುವೆ ಮಾಡದಂತೆ ತಡೆಯಲು ಯೋಚಿಸಲಾಗುತ್ತಿದೆ. ದೀಡ ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಲು ಬರುವ ಭಕ್ತರು ತಮ್ಮ ದರ್ಶನ ಅವಧಿಯನ್ನು ಮುಂದೂಡಿದರೆ ಒಳಿತು ಎಂದು ಮನವಿ ಮಾಡಲು ಮುಂದಾಗಿದೆ. ಮೇ 25ರಂದು ದೇವಸ್ಥಾನ ಆಡಳಿತ ಮಂಡಳಿ ಸಭೆ ಕರೆದಿದ್ದು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
•ಜಿ.ಎಸ್. ಕಮತರ