ಗೋಣಿಕೊಪ್ಪಲು: 3ನೇ ವಿಭಾಗಕ್ಕೆ ನೀರು ಪೂರೈಸುವ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿದ್ದರೂ ನೀರು ಗಂಟಿ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 3ನೇ ವಿಭಾಗಕ್ಕೆ ಕುಡಿಯುವ ನೀರು ಪೂರೈಸುವ ನೀರಿನ ತೊಟ್ಟಿ ತುಂಬಿ ಹೊರ ಚೆಲ್ಲುತ್ತಿದ್ದರೂ ಈ ಬಗ್ಗೆ ನೀರು ಗಂಟಿಯಾದ ಸುರೇಶ್ ಗಮನ ಹರಿಸದೆ ಇರುವುದರಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿತ್ತು. ಸುಮಾರು ಎರಡು ಗಂಟೆಗಳ ಕಾಲ ನೀರು ಹೀಗೆ ವ್ಯರ್ಥವಾಗಿ ಹರಿದು ಹೋಗುತ್ತಿತ್ತು.
ನೀರು ಬಿಡುವ ಗೇಟ್ ವಾಲ್ಗೆ ಬೀಗ ಹಾಕಿರುವುದರಿಂದ ನೀರು ಹರಿಯುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಹಲವು ಬಾರಿ ನೀರು ಗಂಟಿಗೆ ಗ್ರಾ.ಪಂ. ಅಧ್ಯಕ್ಷೆ ಹಾಗೂ ಸದಸ್ಯರುಗಳು ಕರೆ ಮಾಡಿದರು ಕರೆ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಬೀಗ ಒಡೆದು ಮೋಟಾರನ್ನು ಸ್ಥಗಿತಗೊಳಿಸಲಾಯಿತು. ಕಳೆದ ಮೂರು ದಿನಗಳ ಹಿಂದೆ ಮೂರನೇ ವಿಭಾಗಕ್ಕೆ ನೀರು ಬರುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಪಂಚಾಯತ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ವಿಭಾಗದ ಸದಸ್ಯರುಗಳ ಮೇಲೆ ಆರೋಪವು ಮಾಡಲಾಗಿತ್ತು. ಆದರೆ ನೀರು ಗಂಟಿಯ ನಿರ್ಲಕ್ಷ್ಯದಿಂದ ಇಲ್ಲಿನ ನಿವಾಸಿಗಳಿಗೆ ಒದಗಿಸಬೇಕಾದ ಕುಡಿಯುವ ನೀರು ಪೋಲಾಗುತ್ತಿರುವುದರಿಂದ ಸಮರ್ಪಕವಾಗಿ ನೀರು ವಿತರಿಸಲು ಸಾಧ್ಯವಾಗುತ್ತಿಲ್ಲ.
ಮೂರನೇ ವಿಭಾಗಕ್ಕೆ ನೀರಿನ ಸಮಸ್ಯೆ ಇಲ್ಲ. ಕೆಲವು ರಾಜಕೀಯ ಕುತಂತ್ರದಿಂದ ಈ ರೀತಿ ಆರೋಪ ಹೊರಿಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ವಿದ್ಯುತ್ ಸಮಸ್ಯೆ ಕಾಡುತ್ತಿರುವ ಪರಿಣಾಮ ಸಮರ್ಪಕವಾಗಿ ನೀರು ಬಿಡಲು ಸಾಧ್ಯವಾಗುತ್ತಿರಲಿಲ್ಲ. ವಿವಿಧ ಬ್ಲಾಕ್‌ಗಳಿಗಿಂತ ಮೂರನೇ ವಿಭಾಗಕ್ಕೆ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ನೀರು ಬಿಡಲಾಗುತ್ತಿದೆ ಎಂದು ಸದಸ್ಯರುಗಳಾದ ಮುರಗ, ಮಂಜು ರೈ, ರಾಮಕೃಷ್ಣ
ತಿಳಿಸಿದರು.