ಶೌರ್ಯವಂತ ಮರಾಠ ಸೇನಾಧಿಪತಿ ತಾನಾಜಿ ಮಾಲೂಸರೆ ಶೌರ್ಯದಿಂದ ಹೋರಾಡಿದ ಸಿಂಹಗಢ ಯುದ್ಧ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕದನದ ಮೇಲೆ ತಯಾರಾಗಿರುವ ಹಿಂದಿ ಚಿತ್ರ ‘ತಾನಾಜಿ’ಯ ಟ್ರೈಲರ್ ಬಿಡುಗಡೆಗೊಂಡು ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 1670ನೇ ಇಸವಿ ಫೆಬ್ರವರಿ 04ರಂದು ನಡೆದಿದ್ದ ‘ಸಿಂಹಗಢ ಸಮರ’ವನ್ನು ಈ ಚಿತ್ರದಲ್ಲಿ ಮೊಘಲ್ ಸೇನೆಯನ್ನು ಕಂಗೆಡಿಸಿದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗಿದೆ. ಇದು ಅಜಯ್ ದೇವಗನ್ ಅಭಿನಯದ 100ನೇ ಚಿತ್ರವಾಗಿದೆ.
ಮರಾಠ ಸೇನಾನಿ ಪಾತ್ರದಲ್ಲಿ ನಟಿಸುತ್ತಿರುವ ಅಜಯ್ ದೇವಗನ್ ಹಾಗೂ ಮೊಘಲರ ಪರವಾಗಿ ಕಾದಾಡುವ ರಜಪೂತ ದೊರೆ ಉದಯಭಾನು ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೈಫ್ ಆಲಿ ಖಾನ್ ಅವರ ನಡುವಿನ ಮುಖಾಮುಖಿ ಈ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ.
ಚಾಣಾಕ್ಷತನ ಮತ್ತು ಶಕ್ತಿ ಪ್ರದರ್ಶನದ ನಡುವಿನ ಕಾಳಗವೆಂಬಂತೆ ಈ ಚಿತ್ರ ತಯಾರಾಗಿದೆ. ಮೊಘಲರಿಂದ ನೇಮಕಗೊಂಡಿದ್ದ ರಜಪೂತ ದೊರೆ ಉದಯ ಭಾನು ರಾಥೋಡ್ ಸುಪರ್ದಿಯಲ್ಲಿದ್ದ ಸಿಂಹಗಢ ಕೋಟೆಯನ್ನು ತನ್ನ ದೊರೆ ಶಿವಾಜಿ ಚಕ್ರವರ್ತಿಯ ಅಪೇಕ್ಷೆಯಂತೆ ಮರು ವಶಪಡಿಸಿಕೊಳ್ಳಲು ತಾನಾಜಿ ನಡೆಸುವ ಹೋರಾಟದ ಕಥೆ ಈ ಚಿತ್ರದಲ್ಲಿ ಮೂಡಿಬಂದಿದೆ ಎಂಬುದು ಈ ಹಿಂದೆ ರಿಲೀಸ್ ಆಗಿದ್ದ ‘ತಾನಾಜಿ’ ಚಿತ್ರದ ಟೀಸರ್ ಹಿಂಟ್ ನೀಡಿತ್ತು.
ಟೀಸರ್ ನ ಕೊನೆಯಲ್ಲಿ ನಾಯಕ ಅಜಯ್ ದೇವಗನ್ ಹಿನ್ನಲೆ ಧ್ವನಿಯಲ್ಲಿ ‘ಸ್ವರಾಜ್ ಸೆ ಬಡ್ಕರ್ ಕ್ಯಾ?’ (ಸ್ವರಾಜ್ಯಕ್ಕಿಂತ ಮಿಗಿಲಾದುದು ಯಾವುದಿದೆ?) ಎಂದು ಕೇಳುವಲ್ಲಿಗೆ ಇದು ಮರಾಠರ ಅಸ್ಮಿತೆಯ ಹೋರಾಟ ಎಂಬ ಸುಳಿವು ಐತಿಹಾಸಿಕ ಚಿತ್ರವನ್ನು ಇಷ್ಟಪಡುವವರಿಗೆ ಸಿಕ್ಕಿಯಾಗಿತ್ತು.
Related Articles
ಇದೀಗ ಇಂದು ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್ ನಲ್ಲಿ ಹೋರಾಟದ ಝಲಕ್ ಗಳನ್ನು ರಿಚ್ ಆಗಿ ತೋರಿಸಲಾಗಿರುವುದು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಾಗಿಸಿದೆ.
ಈ ಚಿತ್ರದಲ್ಲಿ ಬಾಲಿವುಡ್ ನ ಘಟಾನುಘಟಿ ತಾರೆಗಳ ದಂಡೇ ಇದೇ. ಇದಕ್ಕಿಂತಲೂ ಹೆಚ್ಚಾಗಿ ಅಜಯ್ ದೇವಗನ್ ಅವರು ಸುಮಾರು 11 ವರ್ಷಗಳ ಬಳಿಕ ತನ್ನ ತಾರಾ ಪತ್ನಿ ಕಾಜೋಲ್ ಅವರೊಂದಿಗೆ ನಟಿಸುತ್ತಿರುವುದು ಈ ಚಿತ್ರದ ಇನ್ನೊಂದು ವಿಶೇಷವಾಗಿದೆ. ಇಷ್ಟು ಮಾತ್ರವಲ್ಲದೇ ಇಲ್ಲಿ ಅಜಯ್ ದೇವಗನ್ ಅವರಿಗೆ ಎದುರಾಗಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ನಟಿಸುತ್ತಿರುವುದು ಈ ಚಿತ್ರದ ಇನ್ನೊಂದು ವಿಶೇಷ. ಈ ಜೋಡಿ 2006ರಲ್ಲಿ ಓಂಕಾರರ ಚಿತ್ರದಲ್ಲಿ ಕೊನೆಯದಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
‘ತಾನಾಜಿ – ದಿ ಅನ್ ಸಂಗ್ ವಾರಿಯರ್’ ಚಿತ್ರಕ್ಕೆ ಓಂ ರಾವುತ್ ಅವರು ಆ್ಯಕ್ಷನ್ – ಕಟ್ ಹೇಳಿದ್ದಾರೆ. ಚಿತ್ರದ ಟ್ರೈಲರ್ ಮುಂಬಯಿಯಲ್ಲಿ ಇಂದು ಬಿಡುಗಡೆಗೊಂಡಿತ್ತು. ಬಿಡುಗಡೆಗೊಂಡ ಒಂದೇ ದಿನಕ್ಕೆ ತಾನಾಜಿ ಚಿತ್ರದ ಟ್ರೈಲರ್ 92 ಲಕ್ಷಕ್ಕೂ ಅಧಿಕ ಸಲ ವೀಕ್ಷಣೆಗೊಳಪಟ್ಟಿದೆ. ಟ್ರೈಲರ್ ನಲ್ಲಿ ಬರುವ ಹಿನ್ನಲೆ ಸಂಗೀತ ಆಕರ್ಷಣೀಯವಾಗಿದೆ ಹಾಗೂ ಈ ಚಿತ್ರದ ಮೇಕಿಂಗ್ ಝಲಕ್ ಅನ್ನು ಟ್ರೈಲರ್ ಚಿತ್ರರಸಿಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.
ಕೆಲವೇ ದಿನಗಳ ಹಿಂದೆ ಅಶುತೋಷ್ ಗೋವರಿಕರ್ ಅವರ ‘ಪಾಣಿಪತ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತ. ಇದೂ ಸಹ ಮರಾಠ ಸೇನೆಯ ಹೋರಾಟದ ಕಥೆಯನ್ನು ಹೊಂದಿರುವ ಚಿತ್ರವಾಗಿದೆ.