Advertisement

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

04:40 PM Nov 07, 2024 | Team Udayavani |

ಉದಯವಾಣಿ ಸಮಾಚಾರ
ದೋಟಿಹಾಳ: ರಾಜ್ಯದ ತಾಂಡಾಗಳ ಅಭಿವೃದ್ಧಿ ನಿಗಮದಲ್ಲಿ ಅನುದಾನದ ಕೊರತೆ ಕಾರಣ ನಿಗಮದಿಂದ ಸ್ಥಾಪಿಸಿದ
ಸುಮಾರು 500 ಗ್ರಂಥಾಲಯಗಳು ಕಳೆದ ಹತ್ತು ತಿಂಗಳಿನಿಂದ ಸಿಬ್ಬಂದಿ ವೇತನ ಹಾಗೂ ನಿರ್ವಹಣೆ ವೆಚ್ಚಕ್ಕೆ ಹಣವಿಲ್ಲದೇ
ಮುಚ್ಚುವ ಸ್ಥಿತಿಗೆ ಬಂದಿವೆ.

Advertisement

ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಈ ಗ್ರಂಥಾಲಯಗಳು ಯಾವುದೇ ಸಮಸ್ಯೆಯಿಲ್ಲದೆ ಚೆನ್ನಾಗಿ ನಡೆಯುತ್ತಿದ್ದವು. ಕುಷ್ಟಗಿ ತಾಲೂಕಿನ ಕೆ.ಬೋದೂರ, ಕಳಮಳ್ಳಿ, ತೋನಸಿಹಾಳ, ಮೆಣಸಗೇರಿ ಮತ್ತು ನಡವಲಕೊಪ್ಪ ತಾಂಡಾಗಳಲ್ಲಿ ಆರಂಭವಾಗಿದ್ದ ಈ ಗ್ರಂಥಾಲಯಗಳಲ್ಲಿ ಶಾಲಾ ಮಕ್ಕಳು, ಯುವಕರು ಬೆಳಗ್ಗೆ ಮತ್ತು ಸಾಯಂಕಾಲ ಕುಳಿತು ಪಾಠ ಅಭ್ಯಾಸ ಮಾಡುತ್ತಿದ್ದರು.

ಲಭ್ಯ ದಿನಪತ್ರಿಕೆ-ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಆದರೆ ಈಗ ಅನುದಾನವಿಲ್ಲದೆ ಗ್ರಂಥಾಲಯಗಳು
ಸಂಕಷ್ಟಕ್ಕೆ ಸಿಲುಕಿವೆ. ಈ ಐದು ಗ್ರಂಥಾಲಯಗಳಿಗೆ ಆರಂಭದಲ್ಲಿ ದಿನಪತ್ರಿಕೆ, ವಾರಪತ್ರಿಕೆಯ ಬಿಲ್‌ ಮತ್ತು ಸಿಬ್ಬಂದಿಗಳ ವೇತನ ನೀಡಲಾಗಿತ್ತು.

ಆದರೆ ಕಳೆದ 10 ತಿಂಗಳಿನಿಂದ ಅನುದಾನವೇ ಬರುತ್ತಿಲ್ಲ. ಹೀಗಾಗಿ ಪೇಪರ್‌ ಬಿಲ್‌ ಕಟ್ಟುವ ಜೊತೆಗೆ ಜೀವನ ನಡೆಸುವುದೇ ಕಷ್ಟಕರವಾಗಿದೆ ಎನ್ನುತ್ತಿದ್ದಾರೆ ಸಿಬ್ಬಂದಿ. ಇನ್ನೊಂದೆಡೆ ನಿಗಮದ 500 ಗ್ರಂಥಾಲಯಗಳ ಪೈಕಿ 350-400 ಗ್ರಂಥಾಲಯಗಳಷ್ಟೇ ನಡೆಯುತ್ತಿವೆ ಎಂಬ ದೂರುಗಳು ಬಂದ ಕಾರಣ ಅಧ್ಯಕ್ಷರು ಅನುದಾನ ತಡೆಹಿಡಿದ್ದಾರೆ. ಈ ಬಗ್ಗೆ ಜಿಲ್ಲಾ ಅಧಿಕಾರಿಗಳಿಂದ ವರದಿ
ಕೇಳಿದ್ದೇವೆ. ವರದಿ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜು
ಅವರು ಸ್ಪಷ್ಟಪಡಿಸಿದ್ದಾರೆ.

ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಮೇಲೆ ಸರಕಾರ ಎಲ್ಲ ನಿಗಮಗಳ ಅನುದಾನವನ್ನು ಹಿಂಪಡೆದುಕೊಂಡಿದೆ. ಹೀಗಾಗಿ ಅನುದಾನದ ಕೊರತೆ ಕಾಡುತ್ತಿದೆ. ಅಲ್ಲದೇ ಹಲವೆಡೆ ಗ್ರಂಥಾಲಯಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಕೂಡಲೇ ಸಿಬ್ಬಂದಿ ವೇತನ ಹಾಗೂ ದಿನಪತ್ರಿಕೆ ಬಿಲ್‌
ಪಾವತಿಗೆ ಅನುದಾನ ಮಂಜೂರು ಮಾಡುತ್ತೇವೆ.
ಜಯದೇವ ನಾಯ್ಕ,
ಅಧ್ಯಕ್ಷ ಕರ್ನಾಟಕ ತಾಂಡಾ, ಅಭಿವೃದ್ಧಿ ನಿಗಮ

Advertisement

*ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next