Advertisement

ತಾಮ್ರಗುಂಡಿಗೆ ದಾರಿ ಯಾವುದಯ್ನಾ?

07:31 PM Mar 20, 2021 | Team Udayavani |

ಮುಂಡರಗಿ: ತಾಲೂಕಿನ ತಾಮ್ರಗುಂಡಿ ಗ್ರಾಮದಿಂದ 3ಕಿಮೀ ಉದ್ದದ ಕಚ್ಚಾ ರಸ್ತೆ ಬರದೂರು ಗ್ರಾಮದಲ್ಲಿರುವ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ.

Advertisement

ಈ ಕಚ್ಚಾ ರಸ್ತೆ ಕಂದಾಯ ಇಲಾಖೆಯ ನಕ್ಷೆಯಲ್ಲಿ ಇಲ್ಲದಿರುವ ಕಾರಣ ಲೋಕೋಪಯೋಗಿ ಇಲಾಖೆಯವರು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದ ದಾರಿ ಯಾವುದಯ್ನಾ ತಾಮ್ರಗುಂಡಿ ಗ್ರಾಮಕ್ಕೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಕೇಂದ್ರಕ್ಕೆ ಹೋಗಬೇಕೆಂದರೆ ಸರಿಯಾದ ರಸ್ತೆಯೇ ಇಲ್ಲದಾಗಿದೆ. ಇದರಿಂದ, ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಗ್ರಾಮಸ್ಥರ ಪರದಾಟ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ತಾಮ್ರಗುಂಡಿ ಗ್ರಾಮ ಹಾರೋಗೇರಿ ಗ್ರಾಪಂ ವ್ಯಾಪ್ತಿಗೆ ಸೇರಿದ ಪುಟ್ಟ ಹಳ್ಳಿ. ಈ ಗ್ರಾಮದಲ್ಲಿ ಕೇವಲ 300 ಮನೆಗಳಿದ್ದು, ಗ್ರಾಮದ ಜನಸಂಖ್ಯೆ 1200 ಆಗಿದೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೂ ಪಾಠ ನಡೆಯುತ್ತದೆ.

ಎಂಟನೇ ತರಗತಿಗೆ ವಿದ್ಯಾರ್ಥಿಗಳು ಪಕ್ಕದ ಬರದೂರು ಗ್ರಾಮಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲದೇ, ವಿದ್ಯಾರ್ಥಿಗಳು ಕಾಲೇಜಿಗೆ 3 ಕಿ.ಮೀ. ಕಾಲ್ನಡಿಗೆಯಲ್ಲೇ ಬರದೂರು ತಲುಪಿ, ಅಲ್ಲಿ ಬಸ್‌ ಹಿಡಿದು ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಸಂಕಷ್ಟದ ಸ್ಥಿತಿ ಇದೆ. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್‌ ಸೌಲಭ್ಯವಿಲ್ಲದ ಕಾರಣ ನಡೆದುಕೊಂಡು ಇಲ್ಲವೇ ಖಾಸಗಿ ವಾಹನಗಳು, ಬೈಕ್‌ಗಳಲ್ಲಿ ಅನಿವಾರ್ಯವಾಗಿ ಕಚ್ಚಾ ರಸ್ತೆಯಲ್ಲಿಯೇ ಓಡಾಡಬೇಕಾಗಿದೆ.

ಪುರಾತನ ಗ್ರಾಮ ತಾಮ್ರಗುಂಡಿ: ಐತಿಹಾಸಿಕ ದಾಖಲೆಗಳು ಹೇಳುವಂತೆ 10ನೇ ಶತಮಾನದಲ್ಲಿ ಡೋಣಿ ಗ್ರಾಮವನ್ನು ಉಪ ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸಿದ್ದ ಚಾಲುಕ್ಯರ ರಾಣಿ ಲಕ್ಷ್ಮೀದೇವಿ ಮಾಸೇವಾಡಿ-140 ಆಳ್ವಿಕೆಯ ವ್ಯಾಪ್ತಿಗೆ ತಾಮ್ರಗುಂಡಿ ಗ್ರಾಮ ಒಳಪಟ್ಟಿತ್ತು. ಈ ಹೊತ್ತಿಗೂ ಪುರಾತನ ತಾಮ್ರಗುಂಡಿ ಗ್ರಾಮವೇ ಕಂದಾಯ ಇಲಾಖೆಯ ನಕ್ಷೆಯಲ್ಲಿದೆ. ಆದರೆ, ನೂರು ವರ್ಷಗಳ ಹಿಂದೆ ಸ್ಥಳಾಂತರವಾಗಿರುವ ನೂತನ ತಾಮ್ರಗುಂಡಿ ಗ್ರಾಮ ಕಂದಾಯ ಇಲಾಖೆ ನಕ್ಷೆಯಲ್ಲಿ ದಾಖಲಾಗಿಲ್ಲ.

Advertisement

ಸ್ಥಳಾಂತರವಾದ ನೂತನ ತಾಮ್ರಗುಂಡಿ ಗ್ರಾಮ ಕಂದಾಯ ಇಲಾಖೆಯ ನಕ್ಷೆಯಲ್ಲಿ ಇಲ್ಲದಿರುವುದೇ ರಸ್ತೆ ಮತ್ತಿತರ ಮೂಲಭೂತ ಸೌಲಭ್ಯಗಗಳಿಂದ ವಂಚಿತವಾಗಲು ಮೂಲ ಕಾರಣವಾಗಿದೆ. ಪುರಾತನ ಗ್ರಾಮ ರಿ.ಸ. ನಂ-226ರಲ್ಲಿದ್ದು, ಇದಕ್ಕೆ ಮಾತ್ರ ರಾಜ್ಯ ಹೆದ್ದಾರಿಯಿಂದ ರಸ್ತೆ ಕಲ್ಪಿಸಲು ನಕ್ಷೆಯಲ್ಲಿ ಅವಕಾಶವಿದೆ.

ಆದರೆ, ಸ್ಥಳಾಂತರಗೊಂಡ ತಾಮ್ರಗುಂಡಿ ಗ್ರಾಮಕ್ಕೆ ರಸ್ತೆ ನಿರ್ಮಿಸಲು ನಕ್ಷೆಯಲ್ಲಿ ದಾರಿಯೇ ಇಲ್ಲ. ಈಗಿರುವ ಕಚ್ಚಾ ರಸ್ತೆ ಕೂಡಾ ಅಕ್ಕಪಕ್ಕದ ಹೊಲಗಳ ರೈತರಿಂದ ಒತ್ತುವರಿಯಾಗುತ್ತಿದೆ. ಈ ರಸ್ತೆ ರೈತರ ಹೊಲಗಳಲ್ಲಿ ಹಾಯ್ದು ಹೋಗಿದ್ದರೂ ನಕ್ಷೆಯಲ್ಲಿ ರಸ್ತೆಯೇ ಇಲ್ಲದಿರುವ ಕಾರಣ ದುರಸ್ತಿಯಾಗುತ್ತಿಲ್ಲ. ರಸ್ತೆ ನಿರ್ಮಿಸಲು ಇಲ್ಲ ಅವಕಾಶ: ಈ ಕಚ್ಚಾ ರಸ್ತೆ ಕಂದಾಯ ಇಲಾಖೆ ನಕ್ಷೆಯಲ್ಲಿ ಇಲ್ಲದ್ದರಿಂದ ಲೋಕೋಪಯೋಗಿ ಇಲಾಖೆಯವರು ರಸ್ತೆ ದುರಸ್ತಿ ಅಥವಾ ಡಾಂಬರೀಕರಣ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಕಚ್ಚಾ ರಸ್ತೆಯಲ್ಲೇ ಓಡಾಡುವಂತಾಗಿದೆ. ಈಗಿರುವ ಸ್ಥಳಾಂತರಗೊಂಡ ತಾಮ್ರಗುಂಡಿ ಗ್ರಾಮ ರಿ.ಸ. ನಂ.-77 ಮತ್ತು 78ರಲ್ಲಿದ್ದು, ಈ ಗ್ರಾಮಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯ ದಾಖಲೆಗಳಲ್ಲಿ ನಕ್ಷೆಯಾಗಲಿ ಅಥವಾ ರಸ್ತೆಯಾಗಲಿ ದಾಖಲಾಗಿಲ್ಲ. ಹಾಗಾಗಿ, ಮೂಲಭೂತ ಸೌಲಭ್ಯಗಳಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಂದಾಯ ದಾಖಲೆಗಳಲ್ಲಿ ಸ್ಥಳಾಂತರಗೊಂಡ ಗ್ರಾಮದ ನಕ್ಷೆ ದಾಖಲಾಗಿ, ರಸ್ತೆ, ಬಸ್‌ ಮುಂತಾದ ಮೂಲಭೂತ ಸೌಲಭ್ಯಗಳು ದೊರತರೆ ಗ್ರಾಮಸ್ಥರು ನೆಮ್ಮದಿಯ ನಿಟ್ಟಿಸಿರು ಬಿಡುತ್ತಾರೆ.

ಹು.ಬಾ.ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next