Advertisement
ಹೀಗೇ ಆಗಿದೆ ತಮಿಳುನಾಡಿನ ರಾಜಕೀಯ. ಎಷ್ಟು ಪಕ್ಷ ? ಯಾರಿಗೆ ಯಾರು ಬೆಂಬಲ? ಯಾರು ಯಾರೊಂದಿಗೆ ಮೈತ್ರಿ? ಇನ್ಯಾರು ಇನ್ಯಾರೊಂದಿಗೆ ವಿರೋಧ? ಈ ತಂಡದಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು? ಆ ತಂಡದಲ್ಲಿರುವವರ ಸಂಖ್ಯೆ ಎಷ್ಟು? ಎಂದೆಲ್ಲ ಲೆಕ್ಕ ಹಾಕುವಾಗ ಇಡೀ ರಾಜ್ಯದ ರಾಜ ಕಾರಣವೇ ತಿಳಿಯುವುದಿಲ್ಲ.
Related Articles
Advertisement
ಈಗ ಪರಿಸ್ಥಿತಿ ಹೇಗಿದೆ? ಆಡಳಿತ ಪಕ್ಷ ಎಐಎಡಿಎಂಕೆ ಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹಾಗೆಯೇ ಡಿಎಂಕೆ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಬೇರೆ ರಾಜ್ಯಗಳಲ್ಲಿ ಈ ವರಸೆ ಬದಲಾಗಿರುತ್ತಿತ್ತು. ಬಿಜೆಪಿ ಜತೆ, ಕಾಂಗ್ರೆಸ್ ಜತೆ ಉಳಿದವರದ್ದು ಮೈತ್ರಿ ಎಂಬ ವ್ಯಾಖ್ಯಾನ. ಎರಡೂ ಪ್ರಾದೇಶಿಕ ಪಕ್ಷಗಳಿಗೆ ಮೈತ್ರಿಯೇ ಬೇಕಿಲ್ಲ. ಆದರೂ ಯುದ್ಧಕ್ಕೆ ಹೊರಡುವವನಿಗೆ ಕತ್ತಿ ಜತೆಗೆ ಚಾಕೂ ಇರಲಿ ಎಂದು ಇಟ್ಟುಕೊಳ್ಳುವ ಹಾಗೆ.
ತಮಿಳುನಾಡು ರಾಜಕೀಯದಲ್ಲಿ 1967 ರಲ್ಲೇ ರಾಷ್ಟ್ರೀಯ ಪಕ್ಷವನ್ನು ಕೋಟೆಯ ಬಾಗಿಲಲ್ಲೇ ಇರಿಸಿ ಆಗಿದೆ. ಬಾಗಿಲಲ್ಲಿ ಇಣುಕಿ ಯಾರಾದರೂ ಒಳಗೆ ಬನ್ನಿ ಎಂದರೆ ಓಡುವ ಸ್ಥಿತಿ ರಾಷ್ಟ್ರೀಯ ಪಕ್ಷಗಳದ್ದು.
2014 ರಲ್ಲಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪೊನ್ ರಾಧಾಕೃಷ್ಣನ್ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಿತು. ಇನ್ನೇನಿದ್ದರೂ ಅಧಿಕಾರವೇ ಎಂದು ಹೇಳಲಾಗುತ್ತಿತ್ತು. ಆದರೆ 2019 ರಲ್ಲಿ ಪೊನ್ ರಾಧಾಕೃಷ್ಣನ್ ಸೋತರು. ಆಗ ಇಡೀ ದೇಶದಲ್ಲಿ ಮೋದಿ ಅಲೆ ಇತ್ತು. ಆದರೆ ಅದರ ಪ್ರಭಾವ ರಾಧಾಕೃಷ್ಣನ್ ಅವರ ಕೈ ಹಿಡಿದಿರಲಿಲ್ಲ. ಜತೆಗೆ 2014 ರಿಂದ 2019 ಕ್ಕೆ ಬಿಜೆಪಿ ಗಳಿಸಿದ ಒಟ್ಟೂ ಮತ ಪ್ರಮಾಣವೂ ಶೇ. 5.60 ರಿಂದ 3.70 ಕ್ಕೆ ಇಳಿಯಿತು. ಈಗ ಮತ್ತೆ ಪೊನ್ ರಾಧಾಕೃಷ್ಣನ್ ಕನ್ಯಾಕುಮಾರಿ ಉಪ ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. ಅದನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಸಂಸದ ವಸಂತಕುಮಾರ್ ಇತ್ತೀಚೆಗೆ ನಿಧನ ಹೊಂದಿದ್ದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ಪ್ರಮುಖ ಮೈತ್ರಿಕೂಟದ ನೇತೃತ್ವ ವಹಿಸಿರುವ ಎಐಎಡಿಎಂಕೆ ಹಾಗೂ ಡಿಎಂಕೆ ಎರಡಕ್ಕೂ ಅವುಗಳದ್ದೇ ಕಷ್ಟ-ಸಂಕಷ್ಟಗಳಿವೆ. ಇದರ ಮಧ್ಯೆ ಇತ್ತೀಚಿನ ಸಮೀಕ್ಷೆ ಡಿಎಂಕೆ ಗೆಲ್ಲುವ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಬೀಸಲಿರುವ ರಾಜಕೀಯ ಬಿರುಗಾಳಿ ಫಲಿತಾಂಶ ಬದಲಾಯಿಸುತ್ತದೋ ನೋಡಬೇಕು.
– ಅಶ್ವಘೋಷ