Advertisement

ಸಿನೆಮಾ ಅವಕಾಶಗಳ ಕೊರತೆಯಿಂದ ಕುಗ್ಗಿ ಹೋದ ಎ.ಆರ್‌.ರೆಹಮಾನ್‌ಗೆ ತಮಿಳುನಾಡಿನ ಮಂತ್ರಿಯ ಬೆಂಬಲ

10:54 PM Jul 28, 2020 | sudhir |

ಮುಂಬೈ: ಹಿಂದಿ ಚಲನಚಿತ್ರೋದ್ಯಮದಲ್ಲಿ ಅವಕಾಶಗಳಿಲ್ಲದೆ ಕುಗ್ಗಿಹೋದ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ಬೆಂಬಲಕ್ಕೆ ತಮಿಳು ನಾಡಿನ ಎಐಡಿಎಂಕೆ ಪಕ್ಷದ ಹಿರಿಯ ಮಂತ್ರಿ ಎಸ್‌.ಪಿ. ವೇಲುಮಣಿ ನಿಂತಿದ್ದಾರೆ.

Advertisement

ಎ.ಆರ್‌. ರೆಹಮಾನ್‌ ಅವರು ರೇಡಿಯೊ ಮಿರ್ಚಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಸಂಖ್ಯೆಯ ಬಾಲಿವುಡ್‌ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ಕೆಲವು ದಿನಗಳ ಹಿಂದೆ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ದಿಲ್‌ ಬೆಚರಾ’ ಚಿತ್ರದ ಹಂಸಗೀತೆಗೆ ನಾನು ಸಂಗೀತ ಸಂಯೋಜಿಸಿದ್ದೇನೆ. ನಾನು ಒಳ್ಳೆಯ ಚಲನಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ, ಆದರೆ ಒಂದು ಗ್ಯಾಂಗ್‌ ಇದೆೆ, ಅದು ತಪ್ಪು ಗ್ರಹಿಕೆಯಿಂದಾಗಿ ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದು ಹೀಗೆ ತಮ್ಮ ವಿಷಾದ ವ್ಯಕ್ತ ಪಡಿಸಿದ್ದರು. ಯಾಕಾಗಿ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ನಾನು ಕೆಲಸವನ್ನು ನಂಬುತ್ತೇನೆ ಮತ್ತು ಎಲ್ಲವೂ ದೇವರಿಂದ ಬಂದಿದೆ ಎಂದು ನಾನು ನಂಬಿದ್ದೇನೆ. ಉತ್ತಮ ಚಲನಚಿತ್ರಗಳಿಗೆ ಯಾವತ್ತೂ ನಿಮಗೆ ಸ್ವಾಗತ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.

ಎಐಎಡಿಎಂಕೆ ಹಿರಿಯ ಮಂತ್ರಿಯಾಗಿರುವ ವೇಲುಮಣಿಯವರು ಈ ಬಗ್ಗೆ ಮಾತನಾಡಿ, ಸಂಗೀತಗಾರನು ಭಾಷೆ, ದೇಶಗಳ ಗಡಿಯನ್ನು ಮೀರಿದ್ದಾನೆ. ಪ್ರಪಂಚಾದ್ಯಂತ ಹೃದಯಗಳನ್ನು ಗೆಲ್ಲುವ ಮೂಲಕ ರೆಹಮಾನ್‌ ಹಿಮಾಲಯನ್‌ ಎತ್ತರವನ್ನು ತಲುಪಿದ್ದಾರೆ. ಅವರಿಗೆ ಉತ್ತಮ ಚಲನಚಿತ್ರಗಳನ್ನು ಸಿಗದಂತೆ ಮಾಡಲು ಹಿಂದಿ ಚಿತ್ರರಂಗದಲ್ಲಿ ಕೆಲವು ವ್ಯಕ್ತಿಗಳು ವದಂತಿಗಳನ್ನು ಹಬ್ಬಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಸಚಿವ ಎಸ್ಪಿ ವೇಲುಮಣಿ ಹೇಳಿದರು.

ಸಂಗೀತ ಕ್ಷೇತ್ರದಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ರೆಹಮಾನ್‌ ಅವರ ವಿರುದ್ಧ ಇಲ್ಲಸಲ್ಲದ್ದು ಹೇಳುವುದು ಖಂಡನೀಯ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಮಿಳು ಭಾಷೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಚಲನಚಿತ್ರ ನಿರ್ಮಾಪಕ ಶೇಖರ್‌ ಕಪೂರ್‌ ಅವರೂ ರಹಮಾನ್‌ ಅವರನ್ನು ಬೆಂಬಲಿಸಿದ್ದು, ರೆಹಮಾನ್‌ಗಿರುವ ಸಮಸ್ಯೆಯೇನೆಂದರೆ ಅವರು ಆಸ್ಕರ್‌ ಪ್ರಶಸ್ತಿ ಗೆದ್ದಿದ್ದು, ಇದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಇದು ಬಾಲಿವುಡ್‌ನ‌ಲ್ಲಿ “ಸಾವಿನ ಮುತ್ತಾಗಿ’ ಪರಿಣಮಿಸಿದೆ ಎಂದು ಹೇಳಿದರು.

Advertisement

ಬಾಲಿವುಡ್‌ ಸಂಗೀತ ಕ್ಷೇತ್ರವನ್ನು ನಿಭಾಯಿಸಬಲ್ಲದಕ್ಕಿಂತ ಹೆಚ್ಚಿನ ಪ್ರತಿಭೆ ನಿಮ್ಮಲ್ಲಿದೆ. ನೀವು ಯಾವುದನ್ನೂ ಸಾಬೀತು ಪಡಿಸಬೇಕಿಲ್ಲ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕಾಣದ ಕೈಗಳು ಉತ್ತಮ ಪ್ರತಿಭೆಗೆ ಅಡ್ಡಗಾಲು ಹಾಕಿ, ಅವರನ್ನು ಕುಗ್ಗಿಸುವ ಕಾರ್ಯ ಬಾಲಿವುಡ್ನಲ್ಲಿ ನಡೆಯುತ್ತಲೇ ಇರುತ್ತದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹೀಗೆ ಮಾಡುವುದು ಯಾವತ್ತಿಗೂ ಶ್ರೇಯಸ್ಕರವಲ್ಲ. ಅದು ಭಾರತೀಯ ಚಿತ್ರರಂಗದ ಸಂಗೀತಕ್ಕೆ ಮಾಡುವ ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next