Advertisement

Politics: ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ತಮಿಳುನಾಡಿನದ್ದೇ ನಾಯಕತ್ವ: ಮೋದಿ

09:25 PM Jan 02, 2024 | Team Udayavani |

ತಿರುಚಿರಾಪಳ್ಳಿ: ದೇಶದ ಸಾಂಸ್ಕೃತಿಕ ಇತಿಹಾಸದ ನಾಯಕತ್ವವನ್ನು ತಮಿಳುನಾಡಿನ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಿರುಚಿರಾಪಳ್ಳಿ ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಟರ್ಮಿನಲ್‌ ಉದ್ಘಾಟನೆ, ಭಾರತೀದಾಸನ್‌ ವಿವಿಯ ಘಟಿಕೋತ್ಸವ ಮತ್ತು 20,140 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಂಗಳವಾರ ಅವರು ಮಾತನಾಡಿದ್ದಾರೆ. ರೈಲ್ವೇ, ಹೆದ್ದಾರಿ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪರಮಾಣು ಇಂಧನ, ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಯೋಜನೆಗಳು ಅದರಲ್ಲಿ ಒಳಗೊಂಡಿವೆ.

Advertisement

ತಮಿಳುನಾಡಿನಿಂದ ಪ್ರೇರಣೆಗೊಂಡ ಸಾಂಸ್ಕೃತಿಕ ಪರಂಪರೆಯನ್ನು ದೇಶದ ಅಭಿವೃದ್ಧಿಗೆ ಬಳಸುತ್ತೇವೆ. ಈ ರಾಜ್ಯದಿಂದ ಲಭ್ಯವಾಗಿರುವ ಪವಿತ್ರ ದಂಡ (ಸೆಂಗೋಲ್‌) ಅನ್ನು ಹೊಸ ಸಂಸತ್‌ನಲ್ಲಿ ಅಳವಡಿಸಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳು ನಮಗೆ ಮಹತ್ವದ್ದು ಎಂದರು.

ಇತ್ತೀಚಿನ ಮಳೆಯಿಂದ ತಮಿಳುನಾಡಿನಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವು ಇದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ವಾಗ್ಧಾನ ಮಾಡಿದ್ದಾರೆ.

ಸ್ಟಾಲಿನ್‌ ಮುಂದೆಯೇ “ರಾಷ್ಟ್ರೀಯ ಹಿತಾಸಕ್ತಿ” ಪ್ರಸ್ತಾಪ
ಟರ್ಮಿನಲ್‌ ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿಯವರು ಇತ್ತೀಚೆಗೆ ನಿಧನರಾದ ಡಿಎಂಡಿಕೆ ಸಂಸ್ಥಾಪಕ, ನಟ ವಿಜಯಕಾಂತ್‌ರನ್ನು ನೆನಪಿಸಿಕೊಂಡರು. ಅವರು ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಕ್ಯಾಪ್ಟನ್‌ ಆಗಿರದೆ, ರಾಜಕೀಯ ಕ್ಷೇತ್ರದಲ್ಲೂ ಕ್ಯಾಪ್ಟನ್‌ ಆಗಿದ್ದರು. ಅವರು “ಎಲ್ಲದಕ್ಕಿಂತಲೂ ರಾಷ್ಟ್ರೀಯ ಹಿತಾಸಕ್ತಿಯೇ ಮೇಲು” ಎಂದು ನಂಬಿದ್ದರು ಎಂದು ಮೋದಿ ಹೇಳಿದರು. ಹಿಂದಿ ಹೇರಿಕೆ, ತಮಿಳು ಅಸ್ಮಿತೆ ಮತ್ತಿತರ ವಿಚಾರಗಳನ್ನೇ ಹೆಚ್ಚು ಪ್ರತಿಪಾದಿಸುವ ಸಿಎಂ ಸ್ಟಾಲಿನ್‌ ಮುಂದೆಯೇ ಮೋದಿ ಈ ಹೇಳಿಕೆ ನೀಡಿದ್ದು ವಿಶೇಷ.

ತಿರುಚಿರಾಪಳ್ಳಿ ಟರ್ಮಿನಲ್‌ ವೈಶಿಷ್ಟ್ಯ
75,000 ಚದರ ಅಡಿ- ಅಂತಾರಾಷ್ಟ್ರೀಯ ಟರ್ಮಿನಲ್‌ ವಿಸ್ತೀರ್ಣ
47– ಚೆಕ್‌ ಇನ್‌ ಕೌಂಟರ್‌ಗಳು
10– ವಿಮಾನ ಏರುವ ಸೇತುವೆಗಳು
44 ಲಕ್ಷ- ವಾರ್ಷಿಕವಾಗಿ ಪ್ರಯಾಣಿಕರ ನಿರ್ವಹಣೆ
07 ನೇ– ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ವಹಿಸುವ ಏರ್‌ಪೋರ್ಟ್‌ ಆಗುವ ಸಾಧ್ಯತೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next