ಹೊಸದಿಲ್ಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕೂಟದ ಫೈನಲ್ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ರೋಚಕ ಜಯ ಸಾಧಿಸಿದ ತಮಿಳುನಾಡು ತಂಡ ಮತ್ತೊಮ್ಮೆ ಚಾಂಪಿಯನ್ ಆಗಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶಾರುಖ್ ಖಾನ್ ತಮಿಳುನಾಡು ತಂಡಕ್ಕೆ ರೋಚಕ ಜಯ ತಂದಿತ್ತರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಆರಂಭದಲ್ಲೇ ರೋಹನ್ ಕದಂ ವಿಕೆಟ್ ಕಳೆದುಕೊಂಡ ತಂಡಕ್ಕೆ ಅನುಭವಿ ಮನೀಷ್ ಪಾಂಡೆ (13 ರನ್) ಮತ್ತು ಕರುಣ್ ನಾಯರ್ (8 ರನ್) ಕೂಡಾ ಹೆಚ್ಚು ಬಲ ತುಂಬಲಿಲ್ಲ. ಈ ಕೂಟದ ತಂಡದ ಆಪದ್ಬಾಂಧವ ಅಭಿನವ್ ಮನೋಹರ್ ಮತ್ತೆ ನೆರವಾದರು. 37 ಎಸೆತದಲ್ಲಿ 46 ರನ್ ಗಳಿಸಿದ ಮನೋಹರ್ ಸಿಕ್ಸ್ ಹೊಡೆಯುವ ಪ್ರಯತ್ನದಲ್ಲಿ ಔಟಾದರು.
ಅಂತಿಮವಾಗಿ ಜಗದೀಶ್ ಸುಚಿತ್ ಮತ್ತು ಪ್ರವೀನ್ ದುಬೆ ಸ್ಫೋಟಕ ಆಟವಾಡಿ ತಂಡಕ್ಕೆ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ದುಬೆ 25 ಎಸೆತದಲ್ಲಿ 33 ರನ್ ಗಳಿಸಿದರೆ, ಸುಚಿತ್ 7 ಎಸೆತದಲ್ಲಿ 18 ರನ್ ಬಾರಿಸಿದರು. ತಮಿಳುನಾಡು ಪರ ಮೂರು ವಿಕೆಟ್ ಕಿತ್ತ ಸಾಯಿ ಕಿಶೋರ್ ಯಶಸ್ವಿ ಬೌಲರ್ ಎನಿಸಿದರು.
ಗುರಿ ಬೆನ್ನತ್ತಿದ್ದ ತಮಿಳುನಾಡು ತಂಡಕ್ಕೆ ಹರಿ ನಿಶಾಂತ್ ಮತ್ತು ಜಗದೀಶನ್ ಉತ್ತಮ ಆರಂಭ ಒದಗಿಸಿದರು. ನಿಶಾಂತ್ 23 ರನ್ ಗಳಿಸಿದರೆ, ಜಗದೀಶನ್ 41 ರನ್ ಬಾರಿಸಿದರು. ಕೊನೆಯಲ್ಲಿ ಶಾರುಖ ಖಾನ್ ಕೇವಲ 15 ಎಸೆತದಲ್ಲಿ 33 ರನ್ ಸಿಡಿಸಿ ಜಯ ತಂದಿತ್ತರು.