Advertisement

ತಮಿಳುನಾಡಿಗೆ ನೀರು: ಪ್ರತಿಭಟಿಸಿದ ರೈತರ ಬಂಧನ

12:19 PM Aug 06, 2017 | Team Udayavani |

ಮೈಸೂರು: ಕಾವೇರಿ ಕಣಿವೆಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

Advertisement

ನಗರದ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿ ಎದುರು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ರೈತರು ಪ್ರತಿಭಟನೆ ನಡೆಸಿದರು. ಮಳೆ ಅಭಾವದಿಂದ ರಾಜ್ಯದಲ್ಲಿ ಬರಪರಿಸ್ಥಿತಿ ಆವರಿಸಿದೆ.

ಇದರಿಂದ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಲೆಗೆ ನೀರು ಹರಿಸಿ: ಒಂದು ತಿಂಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜಲಾಶಯಗಳು ಬರಿದಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ನೀರಿನ ಅಭಾವ ಎದುರಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ.

ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ಜಿಲ್ಲೆಯ ಕಬಿನಿ ಬಲ ಮತ್ತು ಎಡದಂಡೆ ರಾಂಪುರ, ಹುಲ್ಲಹಳ್ಳಿ, ವರುಣಾ, ನುಗು, ಹಲಸೂರು ಕಟ್ಟೆ, ಹಾರಂಗಿ ನಾಲೆಗಳಿಗೆ ನೀರು ಹರಿಸಬೇಕು. ಅಂತೆಯೇ ಪಿರಿಯಾಪಟ್ಟಣದ ಕರಡಿಲಕ್ಕನ ಕೆರೆ ಮತ್ತು ಎಚ್‌.ಡಿ.ಕೋಟೆಯ ತಾರಕ ಏತ ನೀರಾವರಿ ಕಾಲುವೆ ಮೂಲಕ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Advertisement

ತಡೆ, ಬಂಧನ: ಕಾಡಾ ಕಚೇರಿ ಎದುರು ಪ್ರತಿ¸‌ಟನೆ ನಡೆಸುತ್ತಿದ್ದ ರೈತರು ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿ, ಪ್ರತಿಭಟನೆ ನಡೆಸಿದರು. ಸಂಜೆ 4 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿದ ರೈತರ ಹೋರಾಟಕ್ಕೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು, ನಗರದ ಕೆ.ಆರ್‌.ವೃತ್ತದಲ್ಲಿ ರಸ್ತೆತಡೆ ನಡೆಸಲು ತೀರ್ಮಾನಿಸಿ, ಕಾಡಾ ಕಚೇರಿಯಿಂದ ಕೆ.ಆರ್‌. ವೃತ್ತದ ಕಡೆಗೆ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು, ಬನುಮಯ್ಯ ಕಾಲೇಜಿನ ಮುಂಭಾಗವೇ ರೈತರನ್ನು ತಡೆದರು.

ಅಲ್ಲದೇ ಮೆರವಣಿಗೆಯಲ್ಲಿ ಸಾಗುತ್ತಿದ್ದ 60ಕ್ಕೂ ಹೆಚ್ಚು ರೈತರನ್ನು ಬಂಧಿಸಿ, ಬಳಿಕ ನಗರದ ಸಿಎಆರ್‌ ಮೈದಾನಕ್ಕೆ ಕರೆದೊಯ್ದು ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ಮುಖಂಡರಾದ ಅಶ್ವತ್ಥ್ ನಾರಾಯಣ್‌, ವಿದ್ಯಾಸಾಗರ್‌, ಗುರುಲಿಂಗೇಗೌಡ, ಮರಂಕಯ್ಯ, ವಿಜೇಂದ್ರ, ಪಳನಿಸ್ವಾಮಿ, ಶಿವಪ್ರಸಾದ್‌, ಲೋಕೇಶ್‌ರಾಜೇ ಅರಸ್‌, ಸರಗೂರು ನಟರಾಜ್‌, ನೇತ್ರಾವತಿ, ಕುಮಾರಸ್ವಾಮಿ, ಬಂಗಾರಸ್ವಾಮಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next