ಜೈಪುರ: ದೇಶಿ ಕ್ರಿಕೆಟ್‌ನಲ್ಲಿ ತಮಿಳುನಾಡು ಬಹಳ ಸುದ್ದಿಯಲ್ಲಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜಯಭೇರಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸರಣಿಯಲ್ಲಿ ಕರ್ನಾಟಕವನ್ನು ಕೊನೆಯ ಎಸೆತದಲ್ಲಿ ಮಣಿಸಿ ಚಾಂಪಿಯನ್ ಎನಿಸಿಕೊಂಡದ್ದು, ಇದೀಗ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಫೈನಲ್
ರವಿವಾರ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಅಷ್ಟೇನೂ ಬಲಿಷ್ಠವಲ್ಲದ, ಆದರೆ ಕಡೆಗಣಿಸಲಾಗದ ಹಿಮಾಚಲ ಪ್ರದೇಶವನ್ನು ತಮಿಳುನಾಡು ಎದುರಿಸಲಿದೆ. ಗೆದ್ದರೆ ಅದೇನೂ ಮಹಾನ್ ಸಾಧನೆಯಲ್ಲ. ಆದರೆ ಹಿಮಾಚಲ ಗೆದ್ದರೆ ಅಲ್ಲೊಂದು ಇತಿಹಾಸ ನಿರ್ಮಾಣವಾಗಲಿದೆ. ಅದು ಮೊದಲ ಸಲ ಕಿರೀಟ ಏರಿಸಿಕೊÛಲಿದೆ. ಆಗ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಹಿಮಾಚಲಕ್ಕೆ ವಿಶಿಷ್ಟ ಸ್ಥಾನಮಾನ ಲಭಿಸಲಿದೆ. ದೇಶದುದ್ದಕ್ಕೂ ವ್ಯಾಪಿಸಿರುವ “ಹಿಮ’ ತಮಿಳುನಾಡನ್ನು ನಡುಗಿಸೀತೇ ಎಂಬುದು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ!
ತಮಿಳುನಾಡು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸಮರ್ಥವಾಗಿದೆ. ನಾಯಕ ಜಗದೀಶನ್, ಯುವ ಆಟಗಾರರಾದ ಬಾಬಾ ಅಪರಾಜಿತ್, ವಾಷಿಂಗ್ಟನ್ ಸುಂದರ್, ಅಪಾಯಕಾರಿ ಶಾರೂಖ್ ಖಾನ್ ಪಂದ್ಯದ ಯಾವ ಹಂತದಲ್ಲೂ ಸಿಡಿದು ನಿಂತು ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ ಅನುಭವಿ ದಿನೇಶ್ ಕಾರ್ತಿಕ್ ಅವರ ನೆರವೂ ತಂಡಕ್ಕಿದೆ.
ಹಿಮಾಚಲಕ್ಕೆ ಮೊದಲ ಫೈನಲ್ :
ಯಾವುದೇ ಸ್ಟಾರ್ ಆಟಗಾರರನ್ನು ಹೊಂದಿರದ ತಂಡವಾಗಿರುವ ಹಿಮಾಚಲ ಪ್ರದೇಶ ಫೈನಲ್ ತಲುಪಿದ್ದೇ ದೊಡ್ಡ ಸಾಧನೆ. ಹಿಮಾಚಲಕ್ಕೆ ಇದು ಚೊಚ್ಚಲ ಫೈನಲ್ ಎಂಬುದು ವಿಶೇಷ. ಚಾಂಪಿಯನ್ ಆಗಬೇಕಾದರೆ ಇಲ್ಲಿ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗತ್ಯ. ಪ್ರಶಾಂತ್ ಚೋಪ್ರಾ, ನಾಯಕ ರಿಷಿ ಧವನ್, ಶುಭಂ ಅರೋರ, ಅಮಿತ್ ಕುಮಾರ್ ಸಿಡಿದು ನಿಂತರೆ ದೊಡ್ಡ ಮೊತ್ತಕೇನೂ ಅಡ್ಡಿಯಿಲ್ಲ. ಆದರೆ ಬೌಲಿಂಗ್ ವಿಭಾಗ ಅಷ್ಟೇನೂ ಬಲಿಷ್ಠವಲ್ಲ.