ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಭಾನುವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಹಿಂಸಾಚಾರಕ್ಕಿಳಿದಿದ್ದು, ಪೊಲೀಸ್ ವಾಹನ ಸೇರಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಕಳೆದೆರಡು ದಿನಗಳ ಹಿಂದೆ ಕಲ್ಲಕುರಿಚಿಯ ಸರ್ಕಾರಿ ಕಾಲೇಜಿನ 12 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದರು. ಆತ್ಮಹತ್ಯೆ ಪತ್ರದಲ್ಲಿ ವಿದ್ಯಾರ್ಥಿನಿ, ಇಬ್ಬರು ಶಿಕ್ಷಕರು ನಿಂದನೆ ಮಾಡಿದ್ದಾರೆ ಎಂದು ಬರೆದಿದ್ದಳು.
ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಇಬ್ಬರು ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಆದರೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಮಹಾನಿರೀಕ್ಷಕ ಪಾಂಡ್ಯನ್ ಮಾಧ್ಯಮಗಳಿಗೆ ತಿಳಿಸಿದರು.
ಪೊಲೀಸರು ಕೂಡಲೇ ಶಿಕ್ಷಕರನ್ನು ಬಂಧಿಸಬೇಕು ಎಂದು ಮುಷ್ಕರ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಪೊಲೀಸ್ ಪಡೆಯ ಮೇಲೆ ವಿದ್ಯಾರ್ಥಿಗಳು ಕಲ್ಲು ಮತ್ತು ಬಾಟಲಿಗಳಿಂದ ದಾಳಿ ಮಾಡಿದರು ಮತ್ತು ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸ್ ವಾಹನಗಳು ಸೇರಿ ಇತರ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ.