ಚೆನ್ನೈ: ತಮಿಳುನಾಡಿನ ಹಲವು ಪಂಚಾಯಿತಿಗಳಲ್ಲಿ ಅಧ್ಯಕ್ಷರಾಗಿರುವ ದಲಿತ ಸಮುದಾಯದವರಿಗೆ ಕೂರಲು ಕುರ್ಚಿಯನ್ನೇ ನೀಡಲಾಗುತ್ತಿಲ್ಲ. ಇಂಥ ಒಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಮಿಳುನಾಡು ಅಸ್ಪೃಶ್ಯತಾ ನಿವಾರಣಾ ಘಟಕ (ಟಿಎನ್‌ಯುಇಎಫ್) ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿದೆ. ದ್ರಾವಿಡ ರಾಜ್ಯದ 386 ಪಂಚಾಯಿತಿಗಳ ಪೈಕಿ 22 ಪಂಚಾಯಿತಿಗಳಲ್ಲಿ ದಲಿತ ಸಮುದಾಯದಿಂದ ಆಯ್ಕೆ ಯಾಗಿರುವ ಅಧ್ಯಕ್ಷರಿಗೆ ಕೂರಲು ಕುರ್ಚಿಯನ್ನೇ ನೀಡಲಾಗುತ್ತಿಲ್ಲ ಎಂದು ಅಭಿಪ್ರಾಯಕ್ಕೆ ಬರಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡರೂ ಈ ವ್ಯವಸ್ಥೆ ಮುಂದುವರಿದಿರುವುದು ಖಂಡ ನಾರ್ಹ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಅಸ್ಪೃಶ್ಯತೆಯ ಮನೋಭಾವ ಎಷ್ಟರ ಮಟ್ಟಿಗೆ ವ್ಯವಸ್ಥೆಯಲ್ಲಿ ಬೇರೂರಿದೆ ಎಂದರೆ, ಅಧ್ಯಕ್ಷರಾ ದವರಿಗೆ ರಾಷ್ಟ್ರ ಧ್ವಜಾರೋಹಣ ಮಾಡಲು, ಕೆಲವು ಹಂತಗಳಲ್ಲಿ ಪಂಚಾಯಿತಿ ಕಚೇರಿ ಆವರಣಕ್ಕೆ ಆಗಮಿ ಸಲು ಅವಕಾಶ ನೀಡಲಾಗುತ್ತಿಲ್ಲ. ಕೆಲವು ಸ್ಥಳಗಳಲ್ಲಿ ಪಂಚಾಯಿತಿ ಕಚೇರಿಗೆ ಬಂದರೂ ದಾಖಲೆಗಳನ್ನು ಪರಿಶೀಲಿಸಲೂ ಅಧ್ಯಕ್ಷರಿಗೆ ಅನುಮತಿಯನ್ನೇ ಕೊಡಲಾಗುತ್ತಿಲ್ಲ ಎಂದು ಕಂಡುಕೊಳ್ಳಲಾಗಿದೆ.
ಆಘಾತಕಾರಿ: ಸಮೀಕ್ಷೆಯನ್ನು ಬಿಡುಗಡೆ ಮಾಡಿದ ಬಳಿಕ ಟಿಎನ್‌ಯುಇಎಫ್ನ ಸಾಮ್ಯುಯೆಲ್ ರಾಜ್ “ಸಮೀಕ್ಷೆಯಲ್ಲಿ ಕಂಡು ಬಂದಿರುವ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿದೆ. ಪರಿಯಾರ್ ಪ್ರತಿಪಾದಿಸಿದ ಸಮಾನತೆಯನ್ನು ಪಾಲಿಸುವ ರಾಜ್ಯದಲ್ಲಿಯೇ ಇಂಥ ಘಟನೆಗಳು ನಡೆಯುತ್ತಿವೆ ಎಂದಾದರೆ, ಅದು ಪ್ರಶ್ನಾರ್ಹ’ ಎಂದರು.
ರಾಜ್ಯ ಸರ್ಕಾರ ದಲಿತ ಸಮುದಾ ಯದ ವ್ಯಕ್ತಿಗಳಿಗೆ ಸಾಂವಿಧಾನಿಕವಾಗಿ ನೀಡಲಾಗಿರುವ ಅಧಿಕಾರವನ್ನು ನಿಭಾ ಯಿಸಲು ಅವಕಾಶ ನೀಡದೇ ಇರುವ ಬಗ್ಗೆ ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸ ಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ನೇಮಿಸಿ: ತಮಿಳುನಾಡು ಸರ್ಕಾರಕ್ಕೆ ಈ ವರದಿ ನೀಡಲಾಗುತ್ತದೆ ಎಂದು ಹೇಳಿದ ಸಾಮ್ಯುಯೆಲ್ ರಾಜ್, ಆ.15ರಂದು ರಾಷ್ಟ್ರ ಧ್ವಜಾರೋಹಣ ನಡೆಸಲು ಅವಕಾಶ ನೀಡಬೇಕು. ಅದಕ್ಕಾಗಿ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ಸರ್ಕಾರಿ ಅಧಿಕಾರಿಗಳೇ ದಲಿತ ಸಮುದಾಯದ ಅಧ್ಯಕ್ಷರು ರಾಷ್ಟ್ರ ಧ್ವಜಾರೋಹಣ ನಡೆಸದಂತೆ ಮನವೊಲಿಸುವ ಕೆಲಸ ನಡೆಸುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿಎಂಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.