ಚೆನ್ನೈ/ಹೊಸದಿಲ್ಲಿ: ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕಾಯಲ್‌ಪಟ್ಟಣಂ ಶಾಖೆ ತಮಿಳು ಪತ್ರಿಕೆಗಳಲ್ಲಿ ನೀಡಿದ್ದ ಜಾಹೀರಾತು ಸ್ಥಳೀಯರನ್ನು ದಂಗು ಬಡಿಸಿತ್ತು. ಅದನ್ನು ನೋಡಿದ ಕೂಡಲೇ ತೂತುಕುಡಿ ಜಿಲ್ಲೆಯ ಗ್ರಾಮಸ್ಥರು ಬ್ಯಾಂಕ್ ಶಾಖೆಗೆ ತೆರಳಿ ತಮ್ಮ ಖಾತೆಯಲ್ಲಿದ್ದ ಎಲ್ಲ ಮೊತ್ತವನ್ನು ಹಿಂಪಡೆದಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಸ್ವೀಕೃತಿ ಕೂಡ ಕೆವೈಸಿಗೆ ಸಮ್ಮತಿ ಪಡೆದುಕೊಂಡಿರುವ ದಾಖಲೆಗಳಲ್ಲಿ ಒಂದು ಎಂದು ಜಾಹೀರಾತಿನಲ್ಲಿ ನಮೂದಿಸಿದ್ದೇ ಸ್ಥಳೀಯರಲ್ಲಿ ಉಂಟಾಗಿರುವ ಭೀತಿಗೆ ಕಾರಣ. ಖಾತೆಯಲ್ಲಿದ್ದ ಹಣ ಹಿಂಪಡೆದುಕೊಂಡವರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿದ್ದಾರೆ.
ಈ ಬಗ್ಗೆ ಮಾಹಿತಿ ರವಾನೆಯಾಗುತ್ತಿದ್ದಂತೆಯೇ ಜನ ತಂಡೋಪತಂಡವಾಗಿ ಬ್ಯಾಂಕ್‌ಗೆ ಹೋಗಿ ಖಾತೆಯಲ್ಲಿದ್ದ ಹಣ ಪಡೆದುಕೊಂಡಿದ್ದಾರೆ. ಈವರೆಗೆ ಸುಮಾರು 4 ಕೋಟಿ ರೂ. ಮೊತ್ತ ವಿಥ್‌ಡ್ರಾ ಆಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳು ಮನೆ ಮನೆಗೆ ತೆರಳಿ ಪರಿಸ್ಥಿತಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಎನ್‌ಪಿಆರ್ ಬಗ್ಗೆ ಸ್ಥಳೀಯರಲ್ಲಿ ಭೀತಿಯೇ ಹೆಚ್ಚಾಗಿದೆ. ನಮ್ಮ ಪ್ರಯತ್ನದ ಬಳಿಕವೂ ಪರಿಸ್ಥಿತಿ ತಿಳಿಯಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ಸ್ವಾಗತ: ಎನ್‌ಪಿಆರ್ ವೇಳೆ ಹೆತ್ತವರ ಜನ್ಮಸ್ಥಳ, ದಿನಾಂಕ ನೀಡುವಿಕೆಯನ್ನು ಬೇಕಿದ್ದರೆ ನೀಡಬಹುದು ಎಂದು ಬದಲು ಮಾಡಿರುವುದನ್ನು ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು, ಎಲ್‌ಜೆಪಿ ಬೆಂಬಲಿಸಿವೆ.