Advertisement

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

01:00 PM May 29, 2024 | Team Udayavani |

ತಮಿಳುನಾಡು: ನಮ್ಮದು ಶಾಂತಿ ಸಹಬಾಳ್ವೆಯ ಭಾರತ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದತೆ ಎನ್ನುವುದು ಮರೆಯಾಗುತ್ತಾ ಬರುತ್ತಿದೆ. ಚುನಾವಣೆ, ರಾಜಕೀಯ ನಡುವೆ ಧರ್ಮ ಧರ್ಮಗಳ ನಡುವಿನ ಸಾಮರಸ್ಯ ಮರೀಚಿಕೆ ಆಗುತ್ತಾ ಬರುತ್ತಿದೆ ಎನ್ನುವುದು ಬೇಸರದ ಸಂಗತಿ.

Advertisement

ಹಿಂದೂವಾಗಲಿ ಅಥವಾ ಮುಸ್ಲಿಂ ಆಗಲಿ ನಾವೆಲ್ಲ ಸಹೋದರರಂತೆ ಬಾಳಿದರೆ ಸಾಮರಸ್ಯ, ಶಾಂತಿಯಿಂದ ಬದುಕಬಹುದು. ಎಲ್ಲೋ ಒಂದು ಕಡೆ ಯಾವುದೋ ಒಂದು ಕೋಮಿನ ಜನ ಮಾಡುವ ತಪ್ಪಿಗೆ ಇಡೀ ಸಮುದಾಯವನ್ನೇ ದ್ವೇಷದ ದೃಷ್ಟಿಯಿಂದ ನೋಡುವ ಇಂದಿನ ಸಮಾಜದಲ್ಲಿ ಸಹೋದರತ್ವ ಎನ್ನುವುದು ಮಾತಿಗಷ್ಟೇ ಸೀಮಿತವಾಗಿ ಬಿಟ್ಟಿದೆ.

ಆದರೆ ತಮಿಳುನಾಡಿನಲ್ಲಾದ ಈ ಹಿಂದೂ – ಮುಸ್ಲಿಂ ಬಾಂಧವ್ಯದ ಈ ಘಟನೆ ಇಂದಿನ ಸಮಾಜಕ್ಕೆ ಉದಾಹರಣೆಯಾಗಿ ನಿಲ್ಲುವಂಥದ್ದು.

ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಡಿಯೂರು ಬಳಿಯ ಒಟ್ಟಪಾಳ್ಯಂ ಪ್ರದೇಶದಲ್ಲಿ ಸುಮಾರು 300 ಕುಟುಂಬಗಳಿವೆ. ಹಿಂದೂ – ಮುಸ್ಲಿಂ ಜೊತೆಯಾಗಿದ್ದರೂ ಈ ಪ್ರದೇಶದಲ್ಲಿ ಒಂದು ಮಸೀದಿಯಿದೆ. ಆದರೆ ದೇವಸ್ಥಾನವಿಲ್ಲ.

ರೋಸ್ ಗಾರ್ಡನ್ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರೇ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿ ಕೆಲ ಹಿಂದೂ ಕುಟುಂಬಗಳು ಬಂದು ನೆಲೆಕಂಡಿದೆ. ಈ ಕುಟುಂಬಗಳ ಮನೆಯಲ್ಲಿ ದೇವರ ಫೋಟೋವಿದೆ ಹೊರತು, ಪೂಜಿಸಲು ದೇವಾಲಯ ಈ ಪ್ರದೇಶದಲ್ಲಿರಲಿಲ್ಲ. ಈ ಕಾರಣದಿಂದ ಹಿಂದೂ ಕುಟುಂಬಗಳು ಜೊತೆಯಾಗಿ ದೇವಸ್ಥಾನವನ್ನು ನಿರ್ಮಿಸಲು ಯೋಜನೆಯೊಂದನ್ನು ಹಾಕಿಕೊಂಡು ಸೂಕ್ತ ಜಾಗವನ್ನು ಹುಡುಕಲು ಪ್ರಾರಂಭಿಸುತ್ತಾರೆ.

Advertisement

ಆದರೆ ಹಿಂದೂ ಕುಟುಂಬಗಳಿಗೆ ಗಣೇಶ ದೇವಸ್ಥಾನವನ್ನು ಕಟ್ಟಲು ಸೂಕ್ತವಾದ ಜಾಗ ಸಿಕ್ಕಿರಲಿಲ್ಲ. 20 ವರ್ಷಗಳ ಹಿಂದೆ ಮುಸ್ಲಿಂ ಕುಟುಂಬವೊಂದು ಜಾಗವನ್ನು ಖರೀದಿ ಮಾಡಿತ್ತು. ಆ ಜಾಗದಲ್ಲಿ ಲೇಔಟ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಖಾಲಿಯಾಗಿತ್ತು. 10 ಹಿಂದೂ ನಿವಾಸಿಗಳು ರೋಸ್ ಗಾರ್ಡನ್ ಮುಸ್ಲಿಂ ಜಮಾತ್ ಬಳಿ ತಮಗೆ ಆ ಲೇಔಟ್‌ ಜಾಗದಲ್ಲಿ ಒಂದು ಭೂಮಿ ದೇವಸ್ಥಾನ ನಿರ್ಮಾಣಕ್ಕೆ ನೀಡಿಯೆಂದು ಮನವಿಯನ್ನು ಮಾಡಿದ್ದಾರೆ.

ಹಿಂದೂಗಳ ಮನವಿಯನ್ನು ಜಮಾತ್‌ ನಲ್ಲಿ ಒಪ್ಪಿ, ಊರಿನ ಮುಸ್ಲಿಮರು ಗಣೇಶ ದೇವಸ್ಥಾನ ನಿರ್ಮಿಸಲು 6 ಲಕ್ಷ ಮೌಲ್ಯದ 3 ಸೆಂಟ್ಸ್ ಭೂಮಿಯನ್ನು ಹಿಂದೂಗಳಿಗೆ ದಾನವಾಗಿ ನೀಡಿದ್ದಾರೆ.

ಭಾನುವಾರ(ಮೇ.26 ರಂದು) ದೇವಸ್ಥಾನದ ಶಂಕು ಸ್ಥಾಪನೆ ನೆರವೇರಿದೆ. ಈ ಸಮಾರಂಭಕ್ಕೆ ಮುಸ್ಲಿಮರು ಮೆರವಣಿಗೆ ಮೂಲಕ ಹಣ್ಣು ಹಂಪಲು ಹಾಗೂ ಇತರೆ ಅಗತ್ಯ ಸಾಮಾಗ್ರಿಗಳನ್ನು ಹಿಂದೂಗಳ ಗಣೇಶ ದೇವಸ್ಥಾನಕ್ಕೆ ನೀಡಿದ್ದಾರೆ. ಹಿಂದೂಗಳು ಶಂಕುಸ್ಥಾಪನೆಗೆ ಬಂದ ಮುಸ್ಲಿಮರನ್ನು ಹೂ ಹಾರ ಹಾಕಿ ಸ್ವಾಗತಿಸಿದ್ದಾರೆ. ಇದಲ್ಲದೆ ಶಂಕು ಸ್ಥಾಪನೆಯ ಅನ್ನ ಪ್ರಸಾದವನ್ನು ಮುಸ್ಲಿಂಮರು ಜೊತೆಯಾಗಿ ಸವಿದಿದ್ದಾರೆ.

ಸ್ಥಳೀಯರು ಮತ್ತು ಪಂಚಾಯತ್ ಅಧ್ಯಕ್ಷರು ದೇಣಿಗೆ ಮೂಲಕ 10 ಲಕ್ಷ ರೂ. ನೀಡಿದ್ದಾರೆ. ಕುಂಭಾಭಿಷೇಕ ಸಮಾರಂಭದಲ್ಲಿ ಮುಸ್ಲಿಂ ಬಾಂಧವರು ಅನ್ನದಾನಕ್ಕೆ 30,000 ರೂಪಾಯಿಗಳನ್ನು ನೀಡಿದ್ದಾರೆ.

ಹಿಂದೂ – ಮುಸ್ಲಿಮರ ನಡುವಿನ ಸಹೋದರತ್ವದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next