ಚೆನ್ನೈ: ನೀಟ್ ಆಕಾಂಕ್ಷಿಯೊಬ್ಬಳು ಪರೀಕ್ಷೆ ಆತಂಕದಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕಲ್ಲಕ್ರುರಿಚಿಯಲ್ಲಿ ನಡೆದಿದೆ.
ಎರಾವರ ಗ್ರಾಮದ ಭೈರವಿ ಮೃತ ವಿದ್ಯಾರ್ಥಿನಿ. ಭೈರವಿ ಇತ್ತೀಚೆಗೆ ಅತ್ತೂರಿನಲ್ಲಿ ನೀಟ್ ಕೋಚಿಂಗ್ ಸೆಂಟರ್‌ಗೆ ದಾಖಲಾಗಿದ್ದಳು.
ಕೋಚಿಂಗ್ ಸೆಂಟರ್ ಸೇರಿದ ಬಳಿಕ ತನಗೆ ನೀಟ್ ತಯಾರಿಯ ಅಧ್ಯಯನ ನಡೆಸಲು ಕಷ್ಟವಾಗುತ್ತದೆ ಎಂದು ಭೈರವಿ ಕೆಲ ದಿನಗಳ ಹಿಂದಷ್ಟೇ ತಂದೆ – ತಾಯಿಯ ಬಳಿ ಹೇಳಿಕೊಂಡಿದ್ದಳು. ಆದರೆ ತಂದೆ – ತಾಯಿ ಮಗಳ ಮಾತನ್ನು ಕೇಳಿ ಆಕೆಗೆ ಧೈರ್ಯ ತುಂಬಿ ನೀಟ್ ತಯಾರಿಯಲ್ಲಿ ಮುಂದುವರೆಯುವಂತೆ ಮಾಡಿದ್ದರು. ಆ ಬಳಿಕವೂ ಭೈರವಿಗೆ ನೀಟ್ ತಯಾರಿ ಕಷ್ಟವಾಗಿದ್ದು, ಈ ಕಾರಣದಿಂದ ಪರೀಕ್ಷೆಯ ಆತಂಕದಿಂದ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ.
ಕಳೆದ ಮೂರು ದಿನಗಳ ಹಿಂದೆ ಭೈರವಿ ಕ್ರಿಮಿನಾಶಕ ಸೇವಿಸಿದ್ದಾಳೆ. ಆದರೆ ಆ ವಿಚಾರವನ್ನು ಯಾರಿಗೂ ಹೇಳದೆ ಹಾಗೆಯೇ ಇದ್ದಳು. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ಆಕೆಯನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ಮೊದಲು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಸೇಲಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ(ಅ.30 ರಂದು) ಭೈರವಿ ಮೃತಪಟ್ಟಿದ್ದಾಳೆ.
ಭೈರವಿ ಕಳೆದ ವರ್ಷ ನೀಟ್ ತೇರ್ಗಡೆಯಾಗದೇ ಮನನೊಂದಿದ್ದಳು. ಅವಳು ಎಂಬಿಬಿಎಸ್ ಓದಲು ಬಯಸಿದ್ದಳು. ಕೋಚಿಂಗ್‌ಗೆ ಹೋದರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ನಂತರ ಅತ್ತೂರಿನಲ್ಲಿರುವ ನೀಟ್ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಳು. ತನಗೆ ಅರ್ಥವಾಗುತ್ತಿಲ್ಲ ಮತ್ತು ಕಡಿಮೆ ಸ್ಕೋರ್ ಮಾಡಬಹುದೆಂಬ ಭಯದಲ್ಲಿ ಅವಳ ಈ ರೀತಿ ಮಾಡಿಕೊಂಡಿದ್ದಾಳೆಂದು ಸಹೋದರ ಅರವಿಂದನ್ ಹೇಳಿದ್ದಾರೆ.
ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.