Advertisement

ತಮಿಳುನಾಡು ಕಾವೇರಿ ಕ್ಯಾತೆ

06:00 AM Nov 28, 2018 | Team Udayavani |

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಮೇಕೆ ದಾಟು ಯೋಜನೆಗೆ ಕೇಂದ್ರ ಜಲ ಆಯೋಗವು (ಸಿಡಬ್ಲೂಸಿ) ಸಮಗ್ರ ಯೋಜನಾ ವರದಿ (ಡಿಪಿಆರ್‌) ಕೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಜತೆಗೆ ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿಗೆ ಪತ್ರ ಬರೆದಿದೆ. ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಅನುಮತಿ ನೀಡದಂತೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡಿ ಎಂದು ತಮಿಳುನಾಡು ಸಿಎಂ ಪಳನಿ ಸ್ವಾಮಿ ಮಂಗಳವಾರ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

ಮೇಕೆದಾಟು ಯೋಜನೆಯ ಸಾಧ್ಯತೆಯ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಸಾಧ್ಯತಾ ವರದಿಗೆ ಸಿಡಬ್ಲೂಸಿ ಒಪ್ಪಿಗೆ ಸೂಚಿಸಿದೆ. ಯೋಜನೆಯ ಸಮಗ್ರ ವರದಿ ಸಿದ್ಧಪಡಿಸಲು ಸರ್ಕಾರಕ್ಕೆ ಅನುಮತಿ ನೀಡಿದೆ. ಯೋಜನೆ ಜಾರಿ ಮಾಡದಂತೆ ಹಿಂದೆಯೂ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ, ಇದೀಗ ಪ್ರಧಾನಿ ಬಳಿಗೆ ದೂರು ಕೊಂಡೊಯ್ದಿದ್ದಾರೆ.


ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದ್ದ ಬಗ್ಗೆ ಉದಯವಾಣಿ ಮಂಗಳವಾರವೇ ವರದಿ ಪ್ರಕಟಿಸಿತ್ತು.

ಪತ್ರದಲ್ಲೇನಿದೆ?: ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ಅಲ್ಲದೆ ಯೋಜನೆಯನ್ನು ಕೇವಲ ಕುಡಿಯುವ ನೀರಿನ ಬಳಕೆ ಉದ್ದೇಶಕ್ಕಷ್ಟೇ ನಿರ್ಮಿಸದೆ ಕೃಷಿ ಯೋಜನೆಗೂ ಬಳಸಲು ತೀರ್ಮಾನಿಸಿರುವುದರಿಂದ ಸುಪ್ರೀಂಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗಲಿದೆ. ಹೀಗಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರಿಗೆ ಆದೇಶ ಸ್ಥಗಿತಗೊಳಿಸಲು ಸೂಚನೆ ನೀಡಿ ಎಂದು ಪತ್ರದಲ್ಲಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ.

ಬಿಜೆಪಿ ಸ್ವಾಗತ: ಕೇಂದ್ರ ಜಲ ಆಯೋಗ ಡಿಪಿಆರ್‌ ಸಲ್ಲಿಸುವಂತೆ ಕೇಳಿರುವುದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತು ಜಲ
ಆಯೋಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರ ತ್ವರಿತವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು. ಯಾವುದೇ ನೆಪ ಹೇಳದೇ ಡಿಪಿಆರ್‌ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಯೋಜನೆಯಿಂದ ರಾಜ್ಯ ಹಾಗೂ ಬೆಂಗಳೂರು ಸೇರಿದಂತೆ ಸಾವಿರಾರು ಹಳ್ಳಿಗಳಿಗೆ ಅದರಲ್ಲೂ ಬರಪೀಡಿತ ಕೋಲಾರ ಜಿಲ್ಲೆಯ ಹಳ್ಳಿಗಳ ಕುಡಿಯುವ ನೀರಿನ ಬವಣೆ ನಿವಾರಿಸಬಹುದು ಎಂದೂ ತಿಳಿಸಿದ್ದಾರೆ.

Advertisement

ಮಾತುಕತೆಗೆ ಸಿದ್ಧ
ಮೇಕೆದಾಟು ಯೋಜನೆಯಿಂದ ತಮಿಳು ನಾಡಿಗೆ ಯಾವುದೇ ರೀತಿಯಲ್ಲೂ ನಷ್ಟವಾಗಲ್ಲ. ಅಲ್ಲದೆ ಸುಪ್ರೀಂ ಆದೇಶ ದಂತೆ ಆ ರಾಜ್ಯಕ್ಕೆ ವಾರ್ಷಿಕವಾಗಿ ಹರಿಸುವ ನೀರಿನ ಪ್ರಮಾಣದಲ್ಲೂ ಬದಲಾವಣೆ ಯಾಗಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರ ಬಯಸಿದರೆ ಮಾತುಕತೆ ನಡೆಸಲು ಸಿದ್ಧ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿ ದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಉದ್ದೇಶಕ್ಕೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ತಮಿಳುನಾಡಿನ ಗಡಿ ಭಾಗದಲ್ಲಿ ಇರುವುದರಿಂದ ಕೃಷಿಗೆ ಬಳಸಿ ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೆ ಯೋಜನೆಯ
ಸಮಗ್ರ ವರದಿ ಸಿದ್ಧಪಡಿಸುವ ಕುರಿತಂತೆ ಚರ್ಚಿಸಲು ಡಿ.6 ರಂದು ಮಾಜಿ ಸಿಎಂಗಳು, ಮಾಜಿ ಜಲ ಸಂಪನ್ಮೂಲ ಸಚಿವರ ಸಭೆ ಕರೆಯಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next